Mumbai Police 
ಸುದ್ದಿಗಳು

ಕೋಲಾಹಲಕ್ಕೆ ಕಾರಣವಾದ‌ ಪರಮ್ ಬೀರ್ ಸಿಂಗ್ ಪತ್ರ: ಅಧಿಕೃತತೆ ಪ್ರಶ್ನಿಸಿದ ಮುಖ್ಯಮಂತ್ರಿ ಉದ್ಧವ್‌ ಕಚೇರಿ

ವಿರೋಧಪಕ್ಷಗಳು ಮಹಾರಾಷ್ಟ್ರ ಗೃಹ ಸಚಿವ ದೇಶಮುಖ್ ಅವರ ರಾಜೀನಾಮೆಗೆ ಒತ್ತಾಯಿಸಿವೆ. ಇದೇ ವೇಳೆ ದೇಶಮುಖ್ ಅವರು ಆರೋಪಗಳನ್ನು ಅಲ್ಲಗಳೆದಿದ್ದು ವಿವಾದದ ಎಳೆಗಳು ಈಗ ಪರಮ್‌ ಬೀರ್ ಸಿಂಗ್ ಅವರ ತನಕ ಚಾಚಿಕೊಂಡಿವೆ ಎಂದು ಟ್ವೀಟ್ ಮಾಡಿದ್ದಾರೆ.

Bar & Bench

ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಪೋಟಕ ವಾಹನ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ನಗರ ಪೊಲೀಸ್‌ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಪರಮ್‌ ಬೀರ್‌ ಸಿಂಗ್‌ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಬರೆದಿದ್ದಾರೆನ್ನಲಾದ ಪತ್ರವೊಂದು ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ತಿಂಗಳಿಗೆ ರೂ 100 ಕೋಟಿ ಸಂಗ್ರಹಿಸಿಕೊಡುವಂತೆ ಗೃಹಸಚಿವ ಅನಿಲ್‌ ದೇಶಮುಖ್‌ ಆದೇಶಿಸಿದ್ದರು ಎಂಬುದು ಪತ್ರದಲ್ಲಿ ಪ್ರಮುಖ ಆರೋಪ. ಆದರೆ ಪತ್ರದ ನೈಜತೆ ಕುರಿತು ಮುಖ್ಯಮಂತ್ರಿ ಕಚೇರಿ ಅನುಮಾನ ವ್ಯಕ್ತಪಡಿಸಿದ್ದು ಅದು ಸಿಂಗ್‌ ಅವರ ಅಧಿಕೃತ ಇಮೇಲ್‌ ವಿಳಾಸದಿಂದ ಬಂದಿಲ್ಲ ಅಲ್ಲದೆ ಅವರ ಸಹಿಯೂ ಪತ್ರದಲ್ಲಿಲ್ಲ ಎಂದು ಹೇಳಿದೆ. ಇಮೇಲ್‌ ಅಧಿಕೃತತೆ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಅದು ಮಾಹಿತಿ ನೀಡಿದೆ.

ಪತ್ರದಲ್ಲಿ ಆರೋಪಿಸಿರುವ ಪ್ರಕಾರ ಮುಂಬೈ ಪೊಲೀಸ್‌ ಅಪರಾಧ ವಿಭಾಗದ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್‌ ವಾಜೆ ಅವರನ್ನು ಅನಿಲ್‌ ದೇಶಮುಖ್‌ ಕಳೆದ ಕೆಲವು ತಿಂಗಳುಗಳಿಂದ ಅನೇಕ ಬಾರಿ ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು ತಮಗೆ ಹಣ ಸಂಗ್ರಹಿಸಿಕೊಡಲು ಸಹಾಯ ಮಾಡುವಂತೆ ಪದೇ ಪದೇ ಸೂಚಿಸುತ್ತಿದ್ದರು. ಈ ವಿಷಯವನ್ನು ನನಗೆ ವಾಜೆ ತಿಳಿಸಿದ್ದರು. ಇದರಿಂದ ಆಘಾತಕ್ಕೊಳಗಾದ ನಾನು ಪರಿಸ್ಥಿತಿಯನ್ನು ಹೇಗೆ ಎದುರಿಸುವುದೆಂದು ಯೋಚಿಸುತ್ತಿದ್ದೆ.

ಮುಂಬೈ ಹುಕ್ಕಾ ಪಾರ್ಲರ್‌ಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ನಂತರ ಗೃಹ ಸಚಿವರ ವೈಯಕ್ತಿಕ ಕಾರ್ಯದರ್ಶಿ ಪಲಾಂಡೆ ಅವರು ಎಸಿಪಿ ಪಾಟೀಲ್‌ ಅವರನ್ನುದ್ದೇಶಿಸಿ ʼಗೃಹಸಚಿವರು ಮುಂಬೈನಲ್ಲಿರುವ ಅಂದಾಜು 1750 ಬಾರ್‌, ರೆಸ್ಟೋರೆಂಟ್‌ಗಳು ಮತ್ತಿತರ ವ್ಯಾಪಾರಿಗಳಿಂದ ಸುಮಾರು 40ರಿಂದ 50 ಕೋಟಿ ರೂಪಾಯಿ ಸಂಗ್ರಹದ ಗುರಿಹೊಂದಿದ್ದಾರೆ ಎಂದು ತಿಳಿಸಿದರು. ಈ ಮಾಹಿತಿಯನ್ನು ಪಾಟೀಲ್‌ ನನ್ನೊಂದಿಗೆ ಹಂಚಿಕೊಂಡಿದ್ದರು.

ಆಂಟೀಲಿಯಾ (ಮುಕೇಶ್‌ ಅಂಬಾನಿ ಅವರ ಮನೆ) ಘಟನೆ ಕುರಿತು ಕೆಲ ದಿನಗಳ ಹಿಂದೆ ತಾವು (ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ) ಕರೆದಿದ್ದ ಸಭೆಯಲ್ಲಿ ಗೃಹಸಚಿವರ ಹಲವು ಅಕ್ರಮಗಳನ್ನು ನಿಮ್ಮ ಗಮನಕ್ಕೆ ತಂದೆ. ಉಪಮುಖ್ಯಮಂತ್ರಿ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಸೇರಿದಂತೆ ವಿವಿಧ ಸಚಿವರಿಗೂ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಮಾಹಿತಿ ನೀಡುವಾಗ ಕೆಲವು ಸಚಿವರಿಗೆ ನಾನು ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಮೊದಲೇ ಮಾಹಿತಿ ಇರುವುದನ್ನು ಗಮನಿಸಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್‌ ದೇಲ್ಕರ್‌ ಅವರ ಅನುಮಾನಾಸ್ಪದ ಸಾವಿನ ಕುರಿತು ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು ಘಟನೆಗೆ ಸ್ಥಳೀಯ ಅಧಿಕಾರಿಗಳು ಕಾರಣ. ಆದರೆ ಗೃಹ ಸಚಿವರು ಆತ್ಮಹತ್ಯೆ ಪ್ರಕರಣ ದಾಖಲಿಸಲು ಬಯಸಿದ್ದರು. ಇದರಿಂದ ರಾಜಕೀಯ ಮೈಲೇಜ್‌ ಪಡೆಯಲು ಅವರು ಮುಂದಾಗಿದ್ದರು ಎಂದು ಹೇಳಲಾಗಿದೆ. ದೇಶಮುಖ್‌ ಅವರು ಮಾಡಿರುವ ಆರೋಪಗಳು ನನ್ನ ವೃತ್ತಿ ಅನುಭವಕ್ಕೆ ವ್ಯತಿರಿಕ್ತವಾಗಿವೆ ಎಂದು ಕೂಡ ಪತ್ರದಲ್ಲಿ ತಿಳಿಸಲಾಗಿದೆ.

ಈ ಬೆಳವಣಿಗೆಗಳಿಂದ ವಿರೋಧಪಕ್ಷಗಳು ಗೃಹ ಸಚಿವ ದೇಶಮುಖ್‌ ಅವರ ರಾಜೀನಾಮೆಗೆ ಒತ್ತಾಯಿಸಿವೆ. ಇದೇ ವೇಳೆ ದೇಶಮುಖ್‌ ಅವರು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದು ವಿವಾದದ ಎಳೆಗಳು ಈಗ ಸಿಂಗ್‌ ಅವರ ತನಕ ಚಾಚಿಕೊಂಡಿವೆ ಎಂದು ಟ್ವೀಟ್‌ ಮಾಡಿದ್ದಾರೆ.