ಛತ್ತೀಸ್‌ಗಢ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಡಿಬಿಡಿಯಾದ ತನಿಖೆ ಮಾಡಲು ಅನುವು ಮಾಡಿಕೊಡುವ ಕ್ರಿಮಿನಲ್ ಕಾನೂನಿನ ಸೆಕ್ಷನ್‌ಗಳನ್ನು ಪ್ರಶ್ನಿಸಿ ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ತಾನೇ ನೇರವಾಗಿ ವಿಚಾರಣೆಗೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ [ಭೂಪೇಶ್ ಕುಮಾರ್ ಬಘೇಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಬಘೇಲ್ ಇಲ್ಲಿ ಎತ್ತಿರುವ ತಕರಾರುಗಳನ್ನು ಹೈಕೋರ್ಟ್ ಅಥವಾ ವಿಚಾರಣಾ ನ್ಯಾಯಾಲಯದೆದುರು ಮೊದಲು ಪ್ರಶ್ನಿಸಬಹುದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಸಲಹೆ ನೀಡಿತು.
ಇದೇ ವಿಷಯವಾಗಿ ಜುಲೈ 18 ರಂದು ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ್ದ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಕೂಡ ಅರ್ಜಿ ಸಲ್ಲಿಸಿದ್ದರು. ಅವರಿಗೆ ಕೂಡ ಮೊದಲು ಹೈಕೋರ್ಟ್ ಎಡತಾಕುವಂತೆ ಪೀಠ ಸೂಚಿಸಿತು.
ವಿಚಾರಣೆ ವೇಳೆ ನ್ಯಾಯಾಲಯವು, 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್ಎ) ಸೆಕ್ಷನ್ 50 ಮತ್ತು 63ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಭೂಪೇಶ್ ಬಘೇಲ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ನ್ಯಾಯಾಲಯ ಸಮ್ಮತಿಸಿತು. ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್ 6ರಂದು ಅದು ವಿಚಾರಣೆ ನಡೆಸಲಿದೆ.
ಶಿಕ್ಷೆ ವಿಧಿಸಲಾಗುತ್ತದೆ ಎಂದು ಬೆದರಿಕೆಯೊಡ್ಡಿ ವ್ಯಕ್ತಿಗಳಿಗೆ ಸಮನ್ಸ್ ನೀಡಿ ಉತ್ತರ ಪಡೆಯುವಂತೆ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಲು ಈ ಸೆಕ್ಷನ್‌ಗಳು ಇ ಡಿಗೆ ಅವಕಾಶ ನೀಡುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಶಿಕ್ಷೆಯ ಬೆದರಿಕೆಯಿಂದ ಸಮನ್ಸ್ ಪಡೆದವರು ತಾವು ನೀಡಿದ ಹೇಳಿಕೆಗಳಿಗೆ ಸಹಿ ಹಾಕುವಂತೆಯೂ ಸೆಕ್ಷನ್‌ಗಳು ಕಡ್ಡಾಯಗೊಳಿಸುತ್ತವೆ.
ಭೂಪೇಶ್ ಬಘೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಛತ್ತೀಸ್‌ಗಢದಲ್ಲಿ ₹2,000 ಕೋಟಿ ಮೌಲ್ಯದ ಮದ್ಯದ ದಂಧೆ ನಡೆದಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ದಂಧೆ ನಡೆಸಿದ್ದ ಜಾಲವು ಸರ್ಕಾರಿ ಮದ್ಯದ ಅಂಗಡಿಗಳ ಮೂಲಕ ಅಕ್ರಮ ಕಮಿಷನ್ ಸಂಗ್ರಹಿಸಿ ಲೆಕ್ಕವಿಲ್ಲದ ಮದ್ಯವನ್ನು ಮಾರಾಟ ಮಾಡಿದೆ ಎಂದು ಇ ಡಿ ವಾದಿಸಿತ್ತು.