Supreme Court
Supreme Court

₹3,200 ಕೋಟಿ ಮದ್ಯ ಹಗರಣ: ಮಾಜಿ ಸಿಎಂ ಜಗನ್ ಸಲಹೆಗಾರ ರಾಜಶೇಖರ್‌ ಬಂಧನ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಅವರ ಬಂಧನ ಸಂವಿಧಾನದ 22ನೇ ವಿಧಿಯಡಿಯ ಸಾಂವಿಧಾನಿಕ ರಕ್ಷಣೆ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯ ಶಾಸನಬದ್ಧ ಅವಶ್ಯಕತೆಗಳನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Published on

ಆಂಧ್ರಪ್ರದೇಶದಲ್ಲಿ ನಡೆದಿದೆ ಎನ್ನಲಾದ ₹3,200 ಕೋಟಿ ಮೊತ್ತದ ಮದ್ಯ ಹಗರಣದ ಪ್ರಮುಖ ಆರೋಪಿ, ರಾಜ್ಯದ  ಮಾಜಿ ಮುಖ್ಯಮಂತ್ರಿ ವೈ ಎಸ್‌ ಜಗನ್‌ಮೋಹನ್‌ ರೆಡ್ಡಿ ಅವರ ಮಾಹಿತಿ ತಂತ್ರಜ್ಞಾನ ಸಲಹೆಗಾರ  ಕೆ ರಾಜಶೇಖರ್ ರೆಡ್ಡಿ ಅವರ ಬಂಧನವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ [ಕಾಸಿರೆಡ್ಡಿ ಉಪೇಂದರ್ ರೆಡ್ಡಿ ಮತ್ತು ಆಂಧ್ರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅವರ ಬಂಧನ ಸಂವಿಧಾನದ 22ನೇ ವಿಧಿಯಡಿಯಲ್ಲಿ ಸಾಂವಿಧಾನಿಕ ರಕ್ಷಣೆ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ ಶಾಸನಬದ್ಧ ಅವಶ್ಯಕತೆಗಳನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಆರ್‌ ಮಹಾದೇವನ್‌ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

Also Read
ಆಂಧ್ರ, ತೆಲಂಗಾಣದಿಂದ ಹೊರಗೆ ಜಗನ್ ಭ್ರಷ್ಟಾಚಾರ ಪ್ರಕರಣ ವಿಚಾರಣೆಗೆ ಕೋರಿಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

"ಸಂವಿಧಾನದ 22ನೇ ವಿಧಿಯ ಅನುಚ್ಛೇದ (1) ರ ಉದ್ದೇಶಗಳಿಗಾಗಿ, ಅಧಿಕಾರಿಗಳು ಅಪರಾಧದ ಸಂಪೂರ್ಣ ವಿವರ ಒದಗಿಸುವ ಅಗತ್ಯವಿಲ್ಲ. ಆದರೆ, ಬಂಧಿತ ವ್ಯಕ್ತಿಗೆ ತನ್ನನ್ನು ಏಕೆ ಬಂಧಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮಾಹಿತಿ ಸಾಕಾಗುತ್ತದೆ. ಬಂಧಿತ ವ್ಯಕ್ತಿಗೆ ತಿಳಿಸಬೇಕಾದ ಆಧಾರಗಳು ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯ ನಿಗದಿಪಡಿಸಿದ ಆರೋಪಕ್ಕೆ ತಕ್ಕ ಮಟ್ಟಿಗೆ ಹೋಲುವಂತಿರಬೇಕು... ಮೇಲ್ಮನವಿಯಲ್ಲಿ ಹುರುಳಿಲ್ಲ. ಅಂತೆಯೇ ಅದನ್ನು ವಜಾಗೊಳಿಸಲಾಗಿದೆ ”ಎಂದು ನ್ಯಾಯಾಲಯ ಆದೇಶಿಸಿತು.

ರೆಡ್ಡಿ ಅವರನ್ನು ಏಪ್ರಿಲ್ 2025 ರಲ್ಲಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆಂಧ್ರಪ್ರದೇಶ ಸಿಐಡಿ ಪೊಲೀಸರು ಬಿಎನ್‌ಎಸ್ ಮತ್ತು ಭ್ರಷ್ಟಾಚಾರ ತಡೆ ಕಾಯಿದೆ- 1988 ರ ವಿವಿಧ ಸೆಕ್ಷನ್‌ಗಳಡಿ ಬಂಧಿಸಿದ್ದರು. ಆಂಧ್ರಪ್ರದೇಶದ ₹3,200 ಕೋಟಿ ಮದ್ಯ ವ್ಯಾಪಾರದಲ್ಲಿನ ಲಂಚ ಹಗರಣಕ್ಕೆ ಸಂಬಂಧಿಸಿದ "ಪ್ರಮುಖ ವ್ಯಕ್ತಿ" ಅವರು ಎಂದು ರಿಮಾಂಡ್ ಆದೇಶದಲ್ಲಿ ಹೇಳಲಾಗಿತ್ತು.

Also Read
ಅಮರಾವತಿ ಭೂ ಹಗರಣ: ಆಂತರಿಕ ತನಿಖೆ ಬಳಿಕ ನ್ಯಾ. ಎನ್‌ ವಿ ರಮಣ ವಿರುದ್ಧದ ಸಿಎಂ ಜಗನ್‌ ದೂರು ವಜಾ ಮಾಡಿದ ಸುಪ್ರೀಂ

ತನ್ನ ಬಂಧನದ ಕಾನೂನುಬದ್ಧತೆ ಪ್ರಶ್ನಿಸಿ ರೆಡ್ಡಿ ಅವರು ಆಂಧ್ರಪ್ರದೇಶ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಮೇ 8 ರಂದು ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತು. ಬಂಧನ ಮತ್ತು ನಂತರದ ರಿಮಾಂಡ್ ಸಾಂವಿಧಾನಿಕ ಮತ್ತು ಶಾಸನಬದ್ಧ ಸುರಕ್ಷತಾ ಕ್ರಮಗಳಿಗೆ ಅನುಗುಣವಾಗಿದೆ ಎಂದು ಆಗ ಅದು ಹೇಳಿತ್ತು. ಈ ತೀರ್ಪು ಪ್ರಶ್ನಿಸಿ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ರೆಡ್ಡಿ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಮತ್ತವರ ತಂಡ ವಾದ ಮಂಡಿಸಿತು. ರಾಜ್ಯ ಸರ್ಕಾರವನ್ನು ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರಾ ಹಾಗೂ ತಂಡ  ಪ್ರತಿನಿಧಿಸಿತ್ತು.

Kannada Bar & Bench
kannada.barandbench.com