ದಾವೆ

ಎನ್‌ಎಲ್‌ಎಸ್ಐಯುನಲ್ಲಿ ಸ್ಥಳೀಯರಿಗೆ ಶೇ. 25 ಮೀಸಲಾತಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Bar & Bench

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಸ್ಥಳೀಯರಿಗೆ ಶೇ.25 ಮೀಸಲಾತಿ ಕಲ್ಪಿಸುವುದನ್ನು ಪ್ರಶ್ನಿಸಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಮಂಗಳವಾರ ಹೈಕೋರ್ಟ್‌ ಕಾಯ್ದಿರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರ ವಾದವನ್ನು ಆಲಿಸಿದ ನ್ಯಾ. ಬಿ ವಿ ನಾಗರತ್ನ ಮತ್ತು ನ್ಯಾ. ರವಿ ಹೊಸಮನಿ ಅವರನ್ನೊಳಗೊಂಡ ವಿಭಾಗೀಯ ಪೀಠವು ತೀರ್ಪು ಕಾಯ್ದಿರಿಸಿತು.

ಇಂದು ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ತಮ್ಮ ವಾದ ವಿಸ್ತರಿಸಿದರು. ತಾತ್ವಿಕವಾಗಿ ಈಗ ಉದ್ದೇಶಿಸಿರುವ ನೂತನ ಮೀಸಲಾತಿಗೆ ಎನ್‌ಎಲ್‌ಎಸ್‌ಐಯು ವಿರೋಧಿಸಿಲ್ಲ ಎಂದ ನಾವಡಗಿ ಹೀಗೆ ಹೇಳಿದರು.

“ವಿಶ್ವದರ್ಜೆಯ ವಿದ್ಯಾರ್ಥಿಗಳನ್ನು ಸೃಷ್ಟಿಸುವುದು ಎನ್‌ಎಲ್‌ಎಸ್‌ಐಯು ಉದ್ದೇಶ. ಈ ವಿದ್ಯಾರ್ಥಿಗಳು ವಿವಿಧ ಸ್ತರಗಳಲ್ಲಿ ಸಮಾಜದ ಸೇವೆಯಲ್ಲಿ ನಿರತರಾಗುತ್ತಾರೆ. ಕೆಲವು ಸ್ಥಳೀಯ ವಿದ್ಯಾರ್ಥಿಗಳನ್ನು ಒಳಗೊಂಡರೆ ಅದು ಸಂಸ್ಥೆಯ ಶ್ರೇಷ್ಠತೆಗೆ ಧಕ್ಕೆಯುಂಟು ಮಾಡುವುದಿಲ್ಲ”.

ಸುಪ್ರೀಂ ಕೋರ್ಟ್‌ ಸಹ ತನ್ನ ತೀರ್ಪುಗಳಲ್ಲಿ ಸಾಂಸ್ಥಿಕ ಆದ್ಯತೆಯನ್ನು ಒಪ್ಪಿಕೊಂಡಿದೆ ಎಂದು ನಾವಡಗಿ ತಮ್ಮ ವಾದವನ್ನು ಸಮರ್ಥಿಸಿದರು.

ನೂತನ ಮೀಸಲಾತಿ ಬೆಂಬಲಿಸಿರುವ ಆಕಾಂಕ್ಷಿಯೊಬ್ಬರ ಪರ ವಾದಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ವಕೀಲರ ಕಾಯ್ದೆ ಆಧರಿಸಿ ವಾದಿಸಿದರು. ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಕಾನೂನು ಶಿಕ್ಷಣವನ್ನು ಉತ್ತೇಜಿಸುವ ಅಧಿಕಾರ ಹೊಂದಿದ್ದು, ಮಾನ್ಯತೆ ಪಡೆದಿರುವ ಕಾನೂನು ಶಿಕ್ಷಣ ಸಂಸ್ಥೆಗಳ ಜೊತೆ ಚರ್ಚಿಸಿ ಕಾನೂನು ಶಿಕ್ಷಣದ ಕುರಿತು ಮಾನದಂಡಗಳನ್ನು ರೂಪಿಸಲಷ್ಟೇ ಅದಿಕಾರ ಹೊಂದಿದೆ ಎಂದರು.

ಇದು ವಿಶ್ವವಿದ್ಯಾಲಯ ರೂಪಿಸುವ ರೀತಿಯಂಥದ್ದಲ್ಲ. ಶಾಸನದ ಮೂಲಕ ಎನ್ಎಲ್‌ಎಸ್‌ಐಯು ಸ್ಥಾಪಿಸಲಾಗಿದೆ. “ಎನ್‌ಎಲ್ಎಸ್‌ಐಯು ಸಂಸ್ಥಾಪಕ ತಾನು ಎಂದು ಬಿಸಿಐ ತಗಾದೆ ತೆಗೆಯುತ್ತಿದೆ” ಎಂದು ಸೋಂಧಿ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಾಲಯವು, “ಶಾಸನದಲ್ಲಿ ಬಿಸಿಐಗೆ ಪ್ರಮುಖ ಸ್ಥಾನ ನೀಡಲಾಗಿದೆ. ಹಾಗಾಗಿ, ಮೀಸಲಾತಿಯ ಕುರಿತಾದ ಪ್ರಶ್ನೆಯನ್ನು ತೀರ್ಮಾನಿಸಲು ಅವರಿಗೆ ಬಿಡಬೇಕಾಗಿತ್ತು ಎನ್ನುವುದು ಅವರ ಹೇಳಿಕೆಯಾಗಿದೆ” ಎಂದಿತು.

ಈ ಸಂದರ್ಭದಲ್ಲಿ ಎನ್‌ಎಲ್ಎಸ್‌ಐಯು ಸಂಸ್ಥಾಪಕ-ನಿರ್ದೇಶಕ ಎನ್ ಆರ್ ಮಾಧವ ಮೆನನ್ ಅವರು ಬರೆದಿರುವ ಲೇಖನವೊಂದನ್ನು ಸೋಂಧಿ ಉಲ್ಲೇಖಿಸಿದರು. ಆರಂಭದಲ್ಲಿ ಯಾವುದೇ ವಿಶ್ವವಿದ್ಯಾಲಯ ಅಥವಾ ರಾಜ್ಯ ಸರ್ಕಾರ ಐದು ವರ್ಷಗಳಿಗೆ ಸಮಗ್ರವಾದ ಕಾನೂನು ಕೋರ್ಸ್ ರೂಪಿಸಲು ಸಿದ್ಧವಿರಲಿಲ್ಲ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಎನ್‌ಎಲ್ಎಸ್ಐಯು ಆರಂಭಿಸಲು ಮುಂದಾಯಿತು. ಆ ಮೂಲಕ ಎನ್ ಎಲ್ ಎಸ್‌ ಐಯು ಸ್ಥಾಪನೆ ಮತ್ತು ಆರಂಭಿಕ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಿತು ಎಂದು ಸೋಂಧಿ ವಿವರಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಎಲ್ಲಾ ಅರ್ಜಿದಾರರು ತಮ್ಮ ಹೆಚ್ಚುವರಿ ವಾದವನ್ನೂ ಮಂಡಿಸಿದರು.