AS Bopanna SA Bobde V Ramasubramanian 
ದಾವೆ

‘ಕೊರೊನಿಲ್’ ಹೆಸರಲ್ಲಿ ಕೀಟನಾಶಕ ನೋಂದಣಿಯಾಗಿದೆ ಎಂದ ಮಾತ್ರಕ್ಕೆ ಅದನ್ನು ಬಳಸದಂತೆ ತಡೆಯಲಾಗದು: ಸುಪ್ರೀಂ ಕೋರ್ಟ್

“ಇಂದಿನ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ‘ಕೊರೊನಿಲ್’ ಹೆಸರಿನಲ್ಲಿ ಕೀಟನಾಶಕ ನೋಂದಣಿಯಾಗಿದೆ ಎಂದು ಆ ಹೆಸರು ಬಳಸದಂತೆ ತಡೆಯುವುದು ಘೋರ ಎನಿಸಲಿದೆ” ಎಂದ ನ್ಯಾಯಾಲಯ.

Bar & Bench

‘ಕೊರೊನಿಲ್’ ಮಾರ್ಕ್‌ ಬಳಸಿದ ಟ್ರೇಡ್ ಮಾರ್ಕ್ ಪ್ರಕರಣದಲ್ಲಿ ಪತಂಜಲಿ ಆಯುರ್ವೇದದ ವಿರುದ್ಧ ಆದೇಶ ಹೊರಡಿಸಿದ್ದ ಮದ್ರಾಸ್ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಗುರುವಾರ ಸುಪ್ರೀಂ ಕೋರ್ಟ್ ನಿರಾಕರಿಸಿತು.‌

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ನೇತೃತ್ವದ ತ್ರಿಸದಸ್ಯ ಪೀಠವು ಚೆನ್ನೈ ಮೂಲದ ಆರುದ್ರಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

“ಇಂದಿನ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ‘ಕೊರೊನಿಲ್’ ಹೆಸರಿನಲ್ಲಿ ಕೀಟನಾಶಕ ನೋಂದಣಿಯಾಗಿದೆ ಎಂದು ಆ ಹೆಸರು ಬಳಸದಂತೆ ತಡೆಯುವುದು ಘೋರ ಎನಿಸಲಿದೆ”.
ಸುಪ್ರೀಂ ಕೋರ್ಟ್

ಪತಂಜಲಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಮತ್ತು ಆರ್ಯಂ ಸುಂದರಂ ಸಹಾಯಕರಾಗಿ ಅಥೆನಾ ಲೀಗಲ್‌ನ ಸಿಮರಂಜಿತ್ ಸಿಂಗ್ ಮತ್ತು ಅಡ್ವೋಕೇಟ್ ಆನ್ ರೆಕಾರ್ಡ್‌ನ ಗೌತಮ್ ತಾಲೂಕ್ದಾರ್ ವಾದಿಸಿದರು.

ಮದ್ರಾಸ್ ಹೈಕೋರ್ಟ್‌ ನ ಏಕಸದಸ್ಯ ಪೀಠವು ಪತಂಜಲಿ ಆಯುರ್ವೇದ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್‌ ‘ಕೊರೊನಿಲ್’ ಬಳಸದಂತೆ ಆದೇಶಿಸಿತ್ತು. ಇದಕ್ಕೆ ಆಗಸ್ಟ್‌ 14ರಂದು ಮದ್ರಾಸ್ ಹೈಕೋರ್ಟ್‌ನ ನ್ಯಾ. ಆರ್ ಸುಬ್ಬಯ್ಯ ಮತ್ತು ಸಿ ಶರವಣನ್ ಅವರಿದ್ದ ವಿಭಾಗೀಯ ಪೀಠವು ಮಧ್ಯಂತರ ತಡೆ ನೀಡಿತ್ತು.

ಆಗಸ್ಟ್‌ 6ರಂದು ನ್ಯಾ. ಸಿ ವಿ ಕಾರ್ತಿಕೇಯನ್ ನೇತೃತ್ವದ ಏಕಸದಸ್ಯ ಪೀಠವು ಪತಂಜಲಿ ವಿರುದ್ಧ ಟ್ರೇಡ್ ಮಾರ್ಕ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಆರುದ್ರಾ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿತ್ತು.

ಆರುದ್ರ ಸಂಸ್ಥೆಯು ‘ಕೊರೊನಿಲ್ - 92B’ ಎನ್ನುವ ಹೆಸರಿನಲ್ಲಿ ಟ್ರೇಡ್ ಮಾರ್ಕ್ ಹೊಂದಿದೆ. ಕೈಗಾರಿಕಾ ಸ್ವಚ್ಛತೆಗೆ ಸಂಬಂಧಿಸಿದ ಉತ್ಪನ್ನಗಳು ಹಾಗೂ ಕೈಗಾರಿಕಾ ಬಳಕೆಗೆ ಬೇಕಾಗುವ ರಾಸಾಯನಿಕಗಳನ್ನು ಸಂಸ್ಥೆಯು ತಯಾರಿಸುತ್ತದೆ. ಕೊರೊನಿಲ್‌ ಟ್ರೇಡ್‌ ಮಾರ್ಕ್‌ ಅನ್ನು ಸಂಸ್ಥೆಯು ರಾಸಾಯನಿಕ ಸವೆತವನ್ನು ತಡೆಯುವ ತನ್ನ ಆಸಿಡ್‌ ಉತ್ಪನ್ನವೊಂದಕ್ಕೆ 1993ರಲ್ಲಿ ಪಡೆದಿತ್ತು.

ಟ್ರೇಡ್ ಮಾರ್ಕ್ ಸಮರದಲ್ಲಿ ಆರುದ್ರ ಪರವಾಗಿ ಆದೇಶ ನೀಡಿದ್ದ ಏಕಸದಸ್ಯ ಪೀಠವು, ಪ್ರತಿವಾದಿಯಾದ ಪತಂಜಲಿ ಸಂಸ್ಥೆಯು ಜನಸಾಮಾನ್ಯರಲ್ಲಿ ಕೊರೊನಾ ವೈರಸ್ ಬಗೆಗಿರುವ ಭೀತಿಯನ್ನು ಬಳಸಿಕೊಂಡು ಅದನ್ನು ಗುಣಪಡಿಸುವುದಾಗಿ ಬಿಂಬಿಸಿ ಲಾಭವನ್ನು ಬೆನ್ನಟ್ಟುತ್ತಿದೆ ಎಂದು ಅಭಿಪ್ರಾಯಪಟ್ಟಿತ್ತಲ್ಲದೇ ಪತಂಜಲಿ ಹಾಗೂ ದಿವ್ಯ ಯೋಗ ಮಂದಿರ ಟ್ರಸ್ಟ್ ಗೆ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಪತಂಜಲಿ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್ ಪರ‌ ಮಧ್ಯಂತರ ತಡೆಯಾಜ್ಞೆ ಹೊರಡಿಸಿತ್ತು. ದ್ವಿಸದಸ್ಯ ಪೀಠವು ಪತಂಜಲಿಯ ತಡೆಯಾಜ್ಞೆಯನ್ನು ಅಮಾನತುಗೊಳಿದ್ದು, ಎರಡು ವಾರಗಳ ಕಾಲ “ಕೊರೊನಿಲ್” ಬಳಸಲು ಅನುಮತಿ ನೀಡಿತ್ತು.