ಪತಂಜಲಿಗೆ “ಕೊರೊನಿಲ್” ಟ್ರೇಡ್ ಮಾರ್ಕ್ ಬಳಸದಂತೆ ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆ

ನ್ಯಾಯಮೂರ್ತಿಗಳಾದ ಆರ್ ಸುಬ್ಬಯ್ಯ ಮತ್ತು ಸಿ ಶರವಣನ್ ಅವರ ನೇತೃತ್ವದ ದ್ವಿಸದಸ್ಯ ಪೀಠವು ಪತಂಜಲಿ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್‌ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ್ದು, ಮಧ್ಯಂತರ ಆದೇಶ ನೀಡಿದೆ.
ಪತಂಜಲಿಗೆ “ಕೊರೊನಿಲ್” ಟ್ರೇಡ್ ಮಾರ್ಕ್ ಬಳಸದಂತೆ ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆ

ಕೋವಿಡ್‌ -19 ಜಾಗತಿಕ ಸೋಂಕಿನ ನಡುವೆ ಬಾಬಾ ರಾಮ್ ದೇವ್‌ ಅವರ ಪತಂಜಲಿ ಆಯುರ್ವೇದದ ಕಡೆಯಿಂದ ತಯಾರಿಸಲಾದ ರೋಗ ನಿರೋಧಕ ಉತ್ಪನ್ನಕ್ಕೆ “ಕೊರೊನಿಲ್‌” ಎನ್ನುವ ಟ್ರೇಡ್ ಮಾರ್ಕ್‌ ಬಳಸಿದ್ದಕ್ಕೆ ಮದ್ರಾಸ್ ಹೈಕೋರ್ಟ್ ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ದ್ವಿಸದಸ್ಯ ಪೀಠ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಪತಂಜಲಿ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್‌ ಸಲ್ಲಿಸಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಆರ್ ಸುಬ್ಬಯ್ಯ ಮತ್ತು ಸಿ ಶರವಣನ್ ಅವರ ನೇತೃತ್ವದ ದ್ವಿಸದಸ್ಯ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ.

ದ್ವಿಸದಸ್ಯ ಪೀಠವು ಇಂಜೆಕ್ಷನ್ ಅನ್ನು ಅಮಾನತುಗೊಳಿದ್ದು, ಎರಡು ವಾರಗಳ ಕಾಲ “ಕೊರೊನಿಲ್” ಬಳಸಲು ಅನುಮತಿ ನೀಡಿದೆ. ಆ ಬಳಿಕ ಅಂತಿಮ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಕಳೆದ ತಿಂಗಳು ಚೆನ್ನೈ ಮೂಲದ ಆರುದ್ರ ಎಂಜಿನಿಯರಿಂಗ್ ಪ್ರೈವೈಟ್ ಲಿಮಿಟೆಡ್, ಪತಂಜಲಿಯ “ಕೊರೊನಿಲ್” ಟ್ರೇಡ್ ಮಾರ್ಕ್ ಗೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಿ ನ್ಯಾಯಮೂರ್ತಿ ಸಿ ವಿ ಕಾರ್ತಿಕೇಯನ್ ನೇತೃತ್ವದ ಏಕಸದಸ್ಯ ಪೀಠವು ಆಗಸ್ಟ್ 6ರಂದು ಆದೇಶ ಹೊರಡಿಸಿತ್ತು. ಆರುದ್ರ ಸಂಸ್ಥೆಯು ‘ಕೊರೊನಿಲ್ - 92B’ ಎನ್ನುವ ಹೆಸರಿನಲ್ಲಿ ಟ್ರೇಡ್ ಮಾರ್ಕ್ ಹೊಂದಿದೆ. ಕೈಗಾರಿಕಾ ಸ್ವಚ್ಛತೆಗೆ ಸಂಬಂಧಿಸಿದ ಉತ್ಪನ್ನಗಳು ಹಾಗೂ ಕೈಗಾರಿಕಾ ಬಳಕೆಗೆ ಬೇಕಾಗುವ ರಾಸಾಯನಿಕಗಳನ್ನು ಸಂಸ್ಥೆಯು ತಯಾರಿಸುತ್ತದೆ. ಕೊರೊನಿಲ್‌ ಟ್ರೇಡ್‌ ಮಾರ್ಕ್‌ ಅನ್ನು ಸಂಸ್ಥೆಯು ರಾಸಾಯನಿಕ ಸವೆತವನ್ನು ತಡೆಯುವ ತನ್ನ ಆಸಿಡ್‌ ಉತ್ಪನ್ನವೊಂದಕ್ಕೆ 1993ರಲ್ಲಿ ಪಡೆದಿತ್ತು.

ಟ್ರೇಡ್ ಮಾರ್ಕ್ ಸಮರದಲ್ಲಿ ಆರುದ್ರ ಪರವಾಗಿ ಆದೇಶ ನೀಡಿದ್ದ ಏಕಸದಸ್ಯ ಪೀಠವು, ಪ್ರತಿವಾದಿಯಾದ ಪತಂಜಲಿ ಸಂಸ್ಥೆಯು ಜನಸಾಮಾನ್ಯರಲ್ಲಿ ಕೊರೊನಾ ವೈರಸ್ ಬಗೆಗಿರುವ ಭೀತಿಯನ್ನು ಬಳಸಿಕೊಂಡು ಅದನ್ನು ಗುಣಪಡಿಸುವುದಾಗಿ ಬಿಂಬಿಸಿ ಲಾಭವನ್ನು ಬೆನ್ನಟ್ಟುತ್ತಿದೆ ಎಂದು ಅಭಿಪ್ರಾಯಪಟ್ಟಿತ್ತಲ್ಲದೇ ಪತಂಜಲಿ ಹಾಗೂ ದಿವ್ಯ ಯೋಗ ಮಂದಿರ ಟ್ರಸ್ಟ್ ಗೆ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ಏಕಸದಸ್ಯ ಪೀಠವು ಟ್ರೇಡ್ ಮಾರ್ಕ್ ಕಾಯಿದೆಯ ಸೆಕ್ಷನ್ 29 (4) ಅನ್ನು ತಪ್ಪಾಗಿ ಅರ್ಥೈಸುವ ಮೂಲಕ ಪತಂಜಲಿಯು ಕೊರೊನಿಲ್ ಟ್ರೇಡ್ ಮಾರ್ಕ್ ಬಳಸದಂತೆ ತಡೆದಿದೆ ಎಂದು ಪತಂಜಲಿ ಪರ ಹಿರಿಯ ವಕೀಲ ಆರ್ಯಂ ಸುಂದರಂ ಹಾಗೂ ವಕೀಲ ಪಿ ಗಿರಿಧರನ್ ವಾದಿಸಿದರು. ದಿವ್ಯ ಯೋಗ ಮಂದಿರ ಪರವಾಗಿ ಸತೀಶ್ ಪರಸಾರನ್ ಹಾಜರಿದ್ದರು. ಪಿ ಗಿರಿಧರನ್ ಹಾಗೂ ಹಿರಿಯ ವಕೀಲರ ಜೊತೆಗೆ ಸಿಮರಂಜಿತ್ ಸಿಂಗ್ ನೇತೃತ್ವದ ಅಥೆನಾ ಲೀಗಲ್ ನ ವಕೀಲರು ಪತಂಜಲಿ ಹಾಗೂ ದಿವ್ಯ ಯೋಗ ಮಂದಿರ ಟ್ರಸ್ಟ್ ಪರವಾಗಿ ವಾದ ಮಂಡಿಸಿದರು. ಪತಂಜಲಿ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್ ನ ‘ಕೊರೊನಿಲ್’ ಪದವನ್ನು ಸಮರ್ಥಿಸುವುದರ ಜೊತೆಗೆ ಹಾಗೂ ಸಂಬಂಧಿತ ಉತ್ಪನ್ನಗಳ ಪರ ವಾದ ಇಂತಿದೆ:

  1. ‘ಕೊರೊನಿಲ್’ ಎಂಬುದು ಜೆನರಿಕ್ ಹೆಸರು. 191 ಕಂಪೆನಿಗಳು ತಮ್ಮ ಉತ್ಪನ್ನದ ಜೊತೆಗೆ ಕೊರೊನಾ ಪದ ಬಳಕೆ ಮಾಡುತ್ತಿವೆ. ಈ ಪೈಕಿ ಆರು ಕಂಪೆನಿಗಳು ಟ್ಯಾಬ್ಲೆಟ್ ತಯಾರಿಸುವಲ್ಲಿ ನಿರತವಾಗಿವೆ.

  2. ಕೊರೊನಾ ಪದ ಮತ್ತು ಅದರ ಸಂಬಂಧಿ ಉತ್ಪನ್ನ ನೇರವಾಗಿ ಕೋವಿಡ್-19ಗೆ ಸಂಬಂಧಿಸಿದ್ದಾಗಿದೆ. ಇಂದು ಕೊರೊನಾ ಎಂದೊಡನೆ ಮಹಾಮಾರಿಗೆ ಸಂಬಂಧಿತ ಚಿಂತನೆಯೇ ಕಣ್ಣ ಮುಂದೆ ಬರುತ್ತದೆ. ಈ ಹಿನ್ನೆಲೆಯಲ್ಲಿ ‘ಕೊರೊನಿಲ್’ ಬಳಸಲಾಗಿದೆ.

  3. ಆರುದ್ರ ಸಂಸ್ಥೆ ಹೊಂದಿರುವ ಟ್ರೇಡ್ ಮಾರ್ಕ್ ಲೇಬಲ್ ಮಾರ್ಕ್‌ ಗೆ ಸೀಮಿತವಾಗಿದ್ದು, ಅದು ಹಲವು ಅಂಶಗಳನ್ನು ಒಳಗೊಂಡಿದೆ. ಒಂದೇ ಒಂದು ಅಂಶಕ್ಕೆ ವಿಶೇಷವಾಗಿ ಹಕ್ಕು ಪ್ರತಿಪಾದಿಸಲಾಗದು (ಅದೆಂದರೆ ‘ಕೊರೊನಿಲ್’ ಪದ).

  4. ಪತಂಜಲಿ ತನ್ನ ಉತ್ಪನ್ನಕ್ಕೆ “ಕೊರೊನಿಲ್” ಪದ ಬಳಸುವುದರಿಂದ ತನ್ನ ಘನತೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದನ್ನು ಆರುದ್ರ ಸಂಸ್ಥೆ ತೋರಿಸಿಲ್ಲ. ಕೊರೊನಿಲ್ ಪದ ಬಳಕೆಯಿಂದ ಯಾವುದೇ ತೊಂದರೆಯಾಗದು. “ಕೊರೊನಿಲ್” ಪದ ಬಳಕೆಯ ಮೂಲಕ ಅನ್ಯಾಯ ಎಸಗಿ ಪಡೆದುಕೊಳ್ಳುವುದು ಪತಂಜಲಿಗೆ ಏನು ಇಲ್ಲ.

  5. “ಕೊರೊನಿಲ್” ಪದದ ಮೇಲೆ ಏಕಸ್ವಾಮ್ಯ ಸಾಧಿಸುವ ಉದ್ದೇಶವನ್ನು ಪತಂಜಲಿ ಹೊಂದಿಲ್ಲ. ಆದರೆ, ಆರುದ್ರ ವಿಶೇಷ ಹಕ್ಕನ್ನು ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಿಲ್ ಪದವನ್ನು ಮತ್ತೊಬ್ಬರು ಬಳಸುವುದರಿಂದ ಘನತೆಗೆ ಧಕ್ಕೆಯಾಗುತ್ತದೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಆರುದ್ರ ಸಂಸ್ಥೆಯ ಮೇಲಿದೆ.

  6. ಹಲವು ತಿಂಗಳಿಂದ ಪತಂಜಲಿ “ಕೊರೊನಿಲ್” ಬಳಕೆ ಮಾಡುತ್ತಿದೆ. ಉತ್ಪನ್ನ ಉತ್ಪಾದಿಸಿಲು ಪರವಾನಗಿ ಸೇರಿದಂತೆ ಪದ ಬಳಕೆಗೆ ಸಮ್ಮತಿಯೂ ದೊರೆತಿದೆ.

ಉತ್ಪನ್ನಗಳ ನಡುವೆ ಗೊಂದಲವಿದೆ ಎಂಬುದನ್ನು ಸಾಬೀತುಪಡಿಸುವ ಅವಶ್ಯಕತೆ ಆರುದ್ರಗೆ ಇಲ್ಲ ಎಂದು ಸಂಸ್ಥೆಯ ಪರ ವಕೀಲ ಪಿ ಆರ್ ರಮಣ್ ವಾದಿಸಿದರು. ಟ್ರೇಡ್ ಮಾರ್ಕ್ ನೋಂದಾವಣೆಯಾಗಿರುವುದರಿಂದ “ಕೊರೊನಿಲ್” ಮಾರ್ಕ್ ಗೆ ಸಂಬಂಧಿಸಿದಂತೆ ಹಕ್ಕು ಸಾಧಿಸುವುದು ಕಂಪೆನಿಯ ಹಕ್ಕು ಎಂದು ನ್ಯಾಯಪೀಠಕ್ಕೆ ವಿವರಿಸಿದ ರಮಣ್, ಆಗಸ್ಟ್‌ 6ರಂದು ಆದೇಶ ಹೊರಡಿಸಿದ ಏಕಸದಸ್ಯ ಪೀಠ ಸೇರಿದಂತೆ ಹಲವು ಪ್ರಕರಣಗಳನ್ನು ತಮ್ಮ ವಾದಕ್ಕೆ ಪೂರಕವಾಗಿ ಉದಾಹರಿಸಿದರು.

ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಕೀಲ ರಮಣ್, ಪತಂಜಲಿ ಸಂಸ್ಥೆಯು ಟ್ಯಾಬ್ಲೆಟ್ ಗೆ “ದಿವ್ಯ” ಕೊರೊನಿಲ್ ಎಂದು ಹೆಸರಿಟ್ಟಿದ್ದರೆ ಆರುದ್ರ ಸಂಸ್ಥೆ ತಗಾದೆ ತೆಗೆಯುತ್ತಿರಲಿಲ್ಲ. ಆದರೆ, ಪತಂಜಲಿ “ಕೊರೊನಿಲ್” ಮಾರ್ಕ್‌ ಗೆ ಅರ್ಜಿ ಹಾಕಿದೆ ಎಂದು ನ್ಯಾಯಾಲಯಕ್ಕೆ ಮನನ ಮಾಡಿಕೊಟ್ಟರು. ಪತಂಜಲಿಯು “ಕೊರೊನಿಲ್” ಪದದ ಮೂಲಕ ಕೊರೊನಾ ವೈರಸ್ ಗೆ ಮದ್ದು ಕಂಡುಹಿಡಿದಿರುವುದಾಗಿ ಹೇಳಿ ಸಾರ್ವಜನಿಕರನ್ನು ದಿಕ್ಕುತಪ್ಪಿಸುತ್ತಿದೆ. ಇದು ಆರುದ್ರ ಘನತೆಗೆ ಧಕ್ಕೆಯಾಗುವಂತೆ ಮಾಡಿದೆ ಎಂದು ಒತ್ತಿ ಹೇಳಿದ್ದಾರೆ.

Related Stories

No stories found.
Kannada Bar & Bench
kannada.barandbench.com