ಹತ್ತು ವರ್ಷದೊಳಗೆ ಎಜಿಆರ್ (ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ) ಬಾಕಿ ಮೊತ್ತವನ್ನು ಪಾವತಿಸುವಂತೆ ಟೆಲಿಕಾಂ ಕಂಪೆನಿಗಳಿಗೆ ಸುಪ್ರಿಂ ಕೋರ್ಟ್ ಮಂಗಳವಾರ ಸೂಚಿಸಿದೆ.
2019ರ ಅಕ್ಟೋಬರ್‌ನಲ್ಲಿ ನ್ಯಾಯಾಲಯ ನೀಡಿದ ತೀರ್ಪಿಗೆ ಅನುಗುಣವಾಗಿ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ಅಬ್ದುಲ್ ನಜೀರ್ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ನಿಗದಿಗೊಳಿಸಿರುವ ಕಾಲಾವಧಿಯಲ್ಲಿ ಟೆಲಿಕಾಂ ಕಂಪೆನಿಗಳು ಎಜಿಆರ್ ಬಾಕಿಯನ್ನು ಪಾವತಿಸಬೇಕಿದೆ.
ಬಾಕಿ ಮೊತ್ತದ 10% ಅನ್ನು ಮಾರ್ಚ್ 31, 2021ರೊಳಗೆ ಪಾವತಿಸಲು ನ್ಯಾಯಪೀಠ ಅವಕಾಶ ಮಾಡಿಕೊಟ್ಟಿದ್ದು, ಕೋವಿಡ್ ನಿಂದಾಗಿ ಈ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವಾರ್ಷಿಕ ಕಂತಿನಲ್ಲಿ ಬಾಕಿ ಪಾವತಿಸಲು ವಿಫಲವಾದರೆ ಬಡ್ಡಿಯು ಕ್ರೋಢೀಕರಣವಾಗಲಿದೆ ಎಂದಿರುವ ನ್ಯಾಯಾಲಯವು ಇದು ನ್ಯಾಯಾಂಗ ನಿಂದನೆಗೆ ಅವಕಾಶ ಮಾಡಿಕೊಡಲೂಬಹುದು ಎಂದು ಹೇಳಿದೆ. ಪ್ರತಿವರ್ಷದ ಫೆಬ್ರುವರಿ 7ರ ಒಳಗೆ ವಾರ್ಷಿಕ ಕಂತು ಪಾವತಿಸಬೇಕಿದೆ.
ಎಜಿಆರ್ ಬಾಕಿಗೆ ಸಂಬಂಧಿಸಿದಂತೆ ಯಾವುದೇ ತೆರನಾದ ಮರುಮೌಲ್ಯಮಾಪನ ನಡೆಸುವುದಿಲ್ಲ ಎಂದು ನ್ಯಾಯಪೀಠವು ಪುನರುಚ್ಚರಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಟೆಲಿಕಾಂ ಕಂಪೆನಿಗಳು ಬಾಕಿ ಪಾವತಿಗೆ ವಿಭಿನ್ನ ಕಾಲಸೂಚಿಯನ್ನು ಪ್ರಸ್ತಾಪಿಸಿದವು. ಬಾಕಿ ಪಾವತಿಸಲು 7-10 ವರ್ಷಗಳು ಅಗತ್ಯ ಎಂದು ಟಾಟಾ ಟೆಲಿಕಾಂ ಹೇಳಿದರೆ, ವೋಡಾಫೋನ್-ಐಡಿಯಾ 15 ವರ್ಷಗಳ ಅವಧಿಯಲ್ಲಿ ಬಾಕಿ ಪಾವತಿಸುವುದಾಗಿ ಹೇಳಿದವು. ವೋಡಾಫೋನ್ ಮನವಿಗೆ ಒಪ್ಪಿಕೊಂಡ ಏರ್ ಟೆಲ್ 15 ವರ್ಷದೊಳಗೆ ಬಾಕಿ ಪಾವತಿಸುವುದಾಗಿ ಪ್ರಸ್ತಾಪಿಸಿತು. ಕೇಂದ್ರ ಸಂಪುಟದ 20 ವರ್ಷಗಳೊಳಗೆ ಬಾಕಿ ಪಾವತಿಸುವ ಪ್ರಸ್ತಾವಕ್ಕೆ ದೂರಸಂಪರ್ಕ ಇಲಾಖೆಯು (ಡಿಓಟಿ) ಅಂಟಿಕೊಂಡಿತ್ತು.
ಈ ವಿಚಾರಕ್ಕೆ ಸಂಬಂಧಿಸಿದ ತೀರ್ಪನ್ನು ಜುಲೈ 20ರಂದು ನ್ಯಾಯಾಲಯವು ಕಾದಿರಿಸಿತ್ತು. ಬಾಕಿ ಮರುಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿತ್ತು.
ಐಬಿಸಿ ನಿಯಮಾವಳಿಗಳಡಿಯಲ್ಲಿ (ದಿವಾಳಿ ಸಂಹಿತೆ) ಕಂಪೆನಿಗಳು ತರಂಗಾಂತರವನ್ನು (ಸ್ಪೆಕ್ಟ್ರಂ) ಮಾರಾಟ ಮಾಡಬಹುದೇ ಎನ್ನುವ ವಿಚಾರವನ್ನೂ ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿತು. ತರಂಗಾಂತರವನ್ನು ಮಾರಬಹುದೇ ಎನ್ನುವ ಬಗ್ಗೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ (ಎನ್‌ಸಿಎಲ್‌ಟಿ) ನಿರ್ಧರಿಸಲಿದೆ ಎಂದು ಹೇಳಿತು.
ಸಂಬಂಧ ಪಟ್ಟ ಐಬಿಸಿ ನಿಯಮಾವಳಿ ಪ್ರಕ್ರಿಯೆಗೆ ಅನುಗುಣವಾಗಿ ಪ್ರಾಮಾಣಿಕವಾಗಿ ಸಂಕಷ್ಟದಲ್ಲಿರುವ ಟೆಲಿಕಾಂ ಕಂಪೆನಿಗಳು ಬಾಕಿ ಪಾವತಿಸುವ ವಿಚಾರ ಎದುರಾದಾಗ ನ್ಯಾಯಪೀಠದ ಪರಿಗಣನೆಗೆ ಈ ವಿಚಾರಗಳು ಬಂದವು. ತರಂಗಾಂತರವನ್ನು ಮಾರಾಟ ಮಾಡಲಾಗದು ಎಂದು ದೂರ ಸಂಪರ್ಕ ಇಲಾಖೆ ವಾದಿಸಿದರೆ, ಕಂಪೆನಿಗಳು ತರಂಗಾಂತರವನ್ನು ಹರಾಜಿನಲ್ಲಿ ಕೊಂಡಿರುವುದರಿಂದ ಅವುಗಳನ್ನು ಬಳಸುವ ಹಕ್ಕಿದೆ. ತರಂಗಾಂತರ ಸಂಪತ್ತಾಗಿದ್ದು, ಅದರ ಹಕ್ಕು ಅಥವಾ ಪರವಾನಗಿ ಐಬಿಸಿ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ ಎಂದು ವಾದಿಸಿದವು.
ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಆಗಸ್ಟ್ 24ರಂದು ಕಾಯ್ದಿರಿಸಲಾಗಿತ್ತು. ಹೊಂದಾಣಿಕೆ ಮಾಡಲಾದ ನಿವ್ವಳ (ಎಜಿಆರ್) ಪದದ ವ್ಯಾಖ್ಯಾನಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ ಬಳಿಕ ಬಾಕಿ ಪಾವತಿಸಲು 90 ದಿನಗಳ ಸಮಯವನ್ನು ಟೆಲಿಕಾಂ ಕಂಪೆನಿಗಳಿಗೆ ನೀಡಲಾಗಿತ್ತು.
ದೇಶದ ಹಣಕಾಸು, ಆರ್ಥಿಕ ಹಾಗೂ ದೂರಸಂಪರ್ಕ ಕ್ಷೇತ್ರದ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ದೂರಸಂಪರ್ಕ ಇಲಾಖೆಯು ಆದೇಶವನ್ನು ಮಾರ್ಪಡಿಸುವಂತೆ ನ್ಯಾಯಾಲಯವನ್ನು ಕೋರಿತ್ತು. ಇದೇ ವೇಳೆ ಕೇಂದ್ರ ಸಂಪುಟ ಸಿದ್ಧಪಡಿಸಿದ್ದ ಸೂತ್ರದನ್ವಯ ಬಾಕಿ ಇರುವ ಮೊತ್ತವನ್ನು 20 ವರ್ಷಗಳೊಳಗೆ ನಿಯಮಿತವಾಗಿ ಪಾವತಿಸಲು ಅವಕಾಶ ಮಾಡಿಕೊಡುವ ಪ್ರಸ್ತಾವನೆಯನ್ನು ಮುಂದಿರಿಸಿತ್ತು.