ಅಕ್ಟೋಬರ್ 5ರ ವಿಚಾರಣೆ ಹಾಜರಿಗೆ ಮಲ್ಯಗೆ ಸುಪ್ರೀಂ ಕೋರ್ಟ್‌ ಸೂಚನೆ; ಸರಾಗ ಪ್ರಕ್ರಿಯೆಗೆ ಗೃಹ ಇಲಾಖೆಗೆ ನಿರ್ದೇಶನ

ವಿವಾದಿತ ಉದ್ಯಮಿ ವಿಜಯ್ ಮಲ್ಯರನ್ನು ಅಕ್ಟೋಬರ್ 5ರ ವಿಚಾರಣೆಗೆ ಖುದ್ದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿರುವ ನ್ಯಾಯಾಲಯವು ಅಗತ್ಯ ಪ್ರಕ್ರಿಯೆಗಳನ್ನು ಸುಗಮಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ.
ಅಕ್ಟೋಬರ್ 5ರ ವಿಚಾರಣೆ ಹಾಜರಿಗೆ ಮಲ್ಯಗೆ ಸುಪ್ರೀಂ ಕೋರ್ಟ್‌ ಸೂಚನೆ; ಸರಾಗ ಪ್ರಕ್ರಿಯೆಗೆ ಗೃಹ ಇಲಾಖೆಗೆ ನಿರ್ದೇಶನ

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆತಪ್ಪಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿರುವ ಸುಪ್ರೀಂ ಕೋರ್ಟ್,‌ ಅಕ್ಟೋಬರ್ 5ರ ಮಧ್ಯಾಹ್ನ 2 ಗಂಟೆಗೆ ನ್ಯಾಯಪೀಠದ ಮುಂದೆ ಹಾಜರಾಗುವಂತೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ನೇತೃತ್ವದ ವಿಭಾಗೀಯ ಪೀಠವು ಮಲ್ಯ ನ್ಯಾಯಪೀಠದ ಮುಂದೆ ಹಾಜರಾಗುವ ಪ್ರಕ್ರಿಯೆಗಳನ್ನು ಸರಾಗಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ.

ನ್ಯಾಯಾಲಯದ ಆದೇಶ ಇಂತಿದೆ:

“...ಉದ್ದೇಶಿತ ಶಿಕ್ಷೆಗೆ ಸಂಬಂಧಿಸಿದಂತೆ ಮೂರನೇ ಪ್ರತಿವಾದಿಯನ್ನು ಆಲಿಸಲು ನ್ಯಾಯಾಂಗ ನಿಂದನೆ ಅರ್ಜಿಯನ್ನು 10.07.2017ರಂದು ವಿಚಾರಣೆಗೆ ನಿಗದಿಪಡಿಸುವಂತೆ ಸೂಚಿಸಲಾಗಿತ್ತು. ಈಗ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿರುವುದರಿಂದ ಮೂರನೇ ಪ್ರತಿವಾದಿಯು 05.10.2020ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಯಪೀಠದ ಮುಂದೆ ಹಾಜರಿರಬೇಕು. ಪ್ರತಿವಾದಿ ಅಂದು ನ್ಯಾಯಾಲಯಕ್ಕೆ ಬರುವುದನ್ನು ಸುಗಮಗೊಳಿಸಿ, ಖಾತ್ರಿಪಡಿಸುವಂತೆ ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸುತ್ತೇವೆ ”.

ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಧಿಕ್ಕರಿಸಿದ್ದಕ್ಕಾಗಿ 2017ರಲ್ಲಿ ವಿಜಯ್ ಮಲ್ಯ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಪೀಠ ತೀರ್ಪು ನೀಡಿತ್ತು. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮಲ್ಯ ತಮ್ಮ ಖಾತೆಯಿಂದ ಇತರರ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಇದರ ಜೊತೆಗೆ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಅಸ್ಪಷ್ಟ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದರ ಜೊತೆಗೆ ತಮ್ಮ ವಿರುದ್ಧದ ತೀರ್ಪಿನ ಶಿಕ್ಷೆ ಪ್ರಮಾಣ ನಿಗದಿಗೊಳಿಸುವ ದಿನ ಖುದ್ದು ಹಾಜರಿರುವಂತೆ ಸೂಚಿಸಲಾಗಿತ್ತು. ಆದರೆ, ಅದಾಗಲೇ ಮಲ್ಯ ಭಾರತವನ್ನು ತೊರೆದಿದ್ದರಿಂದ ಅಂದು ಹಾಜರಾಗಿರಲಿಲ್ಲ. 2017ರ ತೀರ್ಪು ವಿಭಾಗೀಯ ಪೀಠದ ಮುಂದೆ ಮರು ಪರಿಶೀಲನೆಗೆ ಒಳಪಟ್ಟಿದೆ. ಮರು ಪರಿಶೀಲನಾ ಅರ್ಜಿಯಲ್ಲಿ ಬ್ಯಾಂಕ್ ಗಳ ಆರೋಪಕ್ಕೆ ಸಂಬಂಧಿಸಿದಂತೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ ಎಂಬ ಅಸಮಂಜಸವಾದ ವಾದವನ್ನು ಆಧರಿಸಿ ನ್ಯಾಯಾಲಯವು ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆ ಅನುಸರಿಸುವಲ್ಲಿ ತಪ್ಪೆಸಗಿದೆ ಎಂದು ಮಲ್ಯ ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಕಾರಣದ ಹಿನ್ನೆಲೆಯಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ನಡೆಸಲು ಪೀಠ ತೀರ್ಮಾನಿಸಿತ್ತು.

Also Read
ನ್ಯಾಯಾಂಗ ನಿಂದನೆ ತೀರ್ಪು: ವಿಜಯ ಮಲ್ಯ ತೀರ್ಪು ಮರುಪರಿಶೀಲನಾ ಅರ್ಜಿ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಬ್ಯಾಂಕ್ ಗಳ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಯ ಪ್ರತಿಕ್ರಿಯೆ ದಾಖಲಿಸಿಲ್ಲ ಎಂಬುದನ್ನು ಪರಿಗಣಿಸಿಯೂ ವಿಚಾರಣಾ ಪ್ರಕ್ರಿಯೆ ಮುಂದುವರೆಸಿದ್ದು ನ್ಯಾಯಾಲಯದ ಕಡೆಯಿಂದ ಆದ ತಪ್ಪು ಎಂದು ನ್ಯಾಯಪೀಠವು ತನ್ನ ಚುಟುಕು ತೀರ್ಪಿನಲ್ಲಿ ಹೇಳಿದೆ.

“...30.01.2017ರಂದು ಮೆಮೊ ಒಳಗೊಂಡಂತೆ ಸಂಬಂಧ ಪಟ್ಟ ದಾಖಲೆಗಳು ಮತ್ತು 30.01.2017ರಂದು ಪ್ರತಿಕ್ರಿಯೆಯನ್ನು ನಮ್ಮ ಅವಗಾಹನೆಗೆ ಸಲ್ಲಿಸಲಾಗಿತ್ತು. ಈ ವಿಚಾರಗಳಿಂದ ಸ್ಪಷ್ಟವಾಗುವುದೇನೆಂದರೆ ಮೂರನೇ ಪ್ರತಿವಾದಿಯು ಬ್ಯಾಂಕ್ ಗಳ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಿಲ್ಲ ಎನ್ನುವುದನ್ನುಪರಿಶೀಲಿಸಿಯೂ ಪ್ರಕ್ರಿಯೆ ಮುಂದುವರಿಸಿದ್ದು ಈ ನ್ಯಾಯಾಲಯದಿಂದ ಆದ ತಪ್ಪು”.
Also Read
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಜಯ್ ಮಲ್ಯ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ತೀರ್ಪು ಕಾಯ್ದಿರಿಸುವುದಕ್ಕೂ ಮುನ್ನ, ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ತೊರೆದ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಪ್ರಮುಖ ದಾಖಲೆಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಹಿಂದೆ ಪ್ರಕರಣವನ್ನು ಮುಂದೂಡಲಾಗಿತ್ತು. ಮಲ್ಯ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಮೂರು ವರ್ಷವಾದರೂ ಯಾಕೆ ವಿಚಾರಣೆಗೆ ಮಂಡಿಸಿಲ್ಲ ಎಂದು ಜೂನ್ 19ರಂದು ರಿಜಿಸ್ಟ್ರಿಯನ್ನು ನ್ಯಾಯಾಲಯ ಪ್ರಶ್ನಿಸಿತ್ತು.

Related Stories

No stories found.
Kannada Bar & Bench
kannada.barandbench.com