ದಾವೆ

ನ್ಯಾಯಾಂಗ ನಿಂದನೆ: ಒಂದು ರೂಪಾಯಿ ದಂಡ ವಿಧಿಸಿ ಪ್ರಶಾಂತ್ ಭೂಷಣ್ ರನ್ನು ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್

Bar & Bench

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗವನ್ನು ವಿಮರ್ಶಿಸಿ ಮಾಡಿದ್ದ ಟ್ವೀಟ್‌ ಗಳನ್ನು ಆಧರಿಸಿ ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಸೋಮವಾರ ಅವರಿಗೆ ಶಿಕ್ಷೆ ಪ್ರಕಟಿಸಿದ್ದು, ಸಾಂಕೇತಿಕವಾಗಿ ಒಂದು ರೂಪಾಯಿ ದಂಡ ವಿಧಿಸಿದೆ.

ಆಗಸ್ಟ್‌ 14ರಂದು ಭೂಷಣ್ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ್ದ ನ್ಯಾ. ಅರುಣ್ ಮಿಶ್ರಾ ನೇತೃತ್ವದ ನ್ಯಾ. ಬಿ ಆರ್ ಗವಾಯಿ ಹಾಗೂ ನ್ಯಾ. ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಆಗಸ್ಟ್‌ 25ರಂದು ಶಿಕ್ಷೆಯ ಪ್ರಮಾಣದ ತೀರ್ಪನ್ನು ಕಾಯ್ದಿರಿಸಿತ್ತು.

ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾ. ಮಿಶ್ರಾ ಹೀಗೆ ಹೇಳಿದರು:

“ನ್ಯಾಯಮೂರ್ತಿಗಳು ಮಾಧ್ಯಮಗಳ ಬಳಿ ಹೋಗಬಾರದು. ಕೋರ್ಟಿನ ಹೊರಗೆ ಅವರು ನೀಡುವ ಪ್ರತಿಕ್ರಿಯೆಗಳನ್ನು ಪರಿಗಣಿಸಲಾಗದು”.

ಭೂಷಣ್ ಅವರು ನೀಡಿದ್ದ ನಿಂದನಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿಲು ನ್ಯಾಯಾಲಯವು ಅವರಿಗೆ ಹಲವು ಅವಕಾಶಗಳನ್ನು ಕಲ್ಪಿಸಿತ್ತು ಎಂದು ನ್ಯಾಯಪೀಠ ಹೇಳಿತು. ಮಾಧ್ಯಮಗಳ ಮುಂದೆ ಹೋಗುವ ಮೂಲಕ ಭೂಷಣ್ ಅವರು ನ್ಯಾಯಾಂಗ ನಿಂದನೆ ಪ್ರಕರಣದ ಸುತ್ತಲಿನ ಬೆಳವಣಿಗೆಗಳಿಗೆ ಪ್ರಚಾರ ನೀಡಿದರು ಎಂದಿರುವ ನ್ಯಾಯಪೀಠವು ಹೀಗೆ ಹೇಳಿತು.

“ಮಾಧ್ಯಮಗಳಲ್ಲಿ ಅಭಿಪ್ರಾಯಗಳನ್ನೊಳಗೊಂಡು ಲೇಖನ ಪ್ರಕಟಿಸುವ ಮೂಲಕ ನ್ಯಾಯಾಲಯದ‌ ನಿರ್ಧಾರವನ್ನು ಪೂರ್ವ ಅಂದಾಜಿಸಬಾರದು”.

ಅದಾಗ್ಯೂ, ಸಾಂಕೇತಿಕವಾಗಿ ಒಂದು ರೂಪಾಯಿ ದಂಡ ವಿಧಿಸಲು ಪ್ರಕರಣ ಅರ್ಹ ಎಂದು ನ್ಯಾಯಾಲಯ ಅಂತಿಮವಾಗಿ ನಿರ್ಧರಿಸಿತು. ದಂಡ ಪಾವತಿಸಲು ಭೂಷಣ್ ವಿಫಲವಾದರೆ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸುವುದರೊಂದಿಗೆ ಮೂರು ವರ್ಷ ವಕೀಲಿಕೆ ಮೇಲೆ ನಿಷೇಧ ಹೇರಲಾಗುವುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ‌

ಪೂರಕ ಹೇಳಿಕೆಯ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಭೂಷಣ್, ತಮ್ಮ ಟ್ವೀಟ್‌ ಗಳಿಗೆ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಕ್ಷಮೆ ಕೋರುವುದಿಲ್ಲ ಎಂದು ವಾದಿಸಿದ್ದರು. ಭೂಷಣ್ ಅವರ ಪೂರಕ ಹೇಳಿಕೆಯ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದ ಹಿನ್ನೆಲೆಯಲ್ಲಿ ಹಿರಿಯ ವಕೀಲ ರಾಜೀವ್ ಧವನ್ ಅವರು ಭೂಷಣ್ ಗೆ ಜೈಲು ಶಿಕ್ಷೆ ವಿಧಿಸುವ ಮೂಲಕ ಅವರನ್ನು ಹುತಾತ್ಮರನ್ನಾಗಿಸಬೇಡಿ ಎಂದು ಕೋರಿದ್ದರು.

ಭೂಷಣ್ ಪರ ವಕೀಲರಾದ ಧವನ್ ಅವರು ಭೂಷಣ್ ಗೆ ಶಿಕ್ಷೆ ವಿಧಿಸುವ ಮೂಲಕ ಸಾಮಾನ್ಯ ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳುವಂತೆ ನ್ಯಾಯಾಲಯಕ್ಕೆ ಸಲಹೆ ನೀಡಿದ್ದರು. ಮತ್ತೊಂದು ಕಡೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಭೂಷಣ್ ಗೆ ಎಚ್ಚರಿಕೆ ನೀಡುವ ಮೂಲಕ ಅವರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವ್ಯಕ್ತಿ ಸಿಲುಕಿದಾಗ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ಆರೋಪಿಗೆ ಇರುತ್ತದೆ. ಆರೋಪಿಯನ್ನು ಕ್ಷಮೆ ಕೋರುವಂತೆ ಒತ್ತಾಯಿಸುವಂತಿಲ್ಲ ಎಂದು ಧವನ್ ವಾದಿಸಿದರು. ಭೂಷಣ್ ಅವರು ಕ್ಷಮೆ ಕೋರಬಹುದು ಮತ್ತು ಅವರ ಪರವಾಗಿ ಸಲ್ಲಿಸಲಾಗಿರುವ ಪ್ರಮಾಣ ಪತ್ರವನ್ನು ತಾನು ಹಿಂಪಡೆಯಲಿದ್ದು, ಅವರಿಗೆ ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆ ಮಾಡುವಂತೆ ವೇಣುಗೋಪಾಲ್ ಕೋರಿದ್ದರು.

ಭೂಷಣ್ ಅವರು ತಮ್ಮ ವಿವಾದಾತ್ಮಕ ಟ್ವೀಟ್ ಗಳಿಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿಲ್ಲ. ಬದಲಾಗಿ ತಮ್ಮ ಟ್ಬೀಟ್‌ ಗಳನ್ನು ಸಮರ್ಥಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು. ವಿಚಾರಣೆ ಸಂದರ್ಭದಲ್ಲಿ ಭಾಗವಹಿಸಿದ್ದ ವಕೀಲರು ಮತ್ತು ನ್ಯಾಯಪೀಠದ ನಡುವಿನ ಚರ್ಚೆಯ ವೇಳೆ, ಇಂಥ ಆರೋಪಗಳಿಂದ ನ್ಯಾಯಿಕ ಸಂಸ್ಥೆಗೆ 'ಘಾಸಿ' ಮತ್ತು 'ನೋವು' ಉಂಟಾಗುತ್ತದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತ್ತು.

ನ್ಯಾಯಾಂಗವನ್ನು ವಿಮರ್ಶಿಸಿದ ಎರಡು ಟ್ವೀಟ್ ಗಳನ್ನು ಆಧಾರವಾಗಿಟ್ಟುಕೊಂಡು ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಆಗಸ್ಟ್ 14ರಂದು ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಘೋಷಿಸಿತ್ತು.

ಭೂಷಣ್‌ ಅವರು ಇದೇ ವರ್ಷದ ಜೂನ್‌ ನಲ್ಲಿ ಎರಡು ಟ್ವೀಟ್‌ ಗಳನ್ನು ಮಾಡುವ ಮೂಲಕ ನ್ಯಾಯಾಂಗ ನಿಂದನೆಯ ಆರೋಪಕ್ಕೆ ಗುರಿಯಾಗಿದ್ದರು. ಮೊದಲ ಟ್ವೀಟ್‌ ನಲ್ಲಿ ಅವರು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ದುಬಾರಿ ಮೊಟಾರ್‌ ಸೈಕಲ್‌ ಒಂದರ ಮೇಲೆ ಕುಳಿತಿರುವ ಚಿತ್ರವನ್ನು ಹಾಕಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರೆ, ಎರಡನೆಯದರಲ್ಲಿ ಅವರು ಭಾರತದ ಸಮಕಾಲೀನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದ ಈ ಹಿಂದಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 20ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕೋರ್ಟ್ ಹೇಳಿತ್ತು. ಆದರೆ, ಅಂದಿನ ವಿಚಾರಣೆಯಲ್ಲಿ ಭೂಷಣ್‌ ಗೆ ಬೇಷರತ್ ಕ್ಷಮೆಯಾಚಿಸಲು ಕಾಲಾವಕಾಶ ನಿಗದಿಗೊಳಿಸಿ, ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿತ್ತು. ಅದೇ ದಿನ ಆಗಸ್ಟ್ 14ರ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತಿರುವುದರಿಂದ ಶಿಕ್ಷೆ ಪ್ರಕಟ ವಿಚಾರಣೆಯನ್ನು ಮುಂದೂಡುವಂತೆ ಭೂಷಣ್ ಕೋರಿದ್ದರು.