ಲಿವ್ ಇನ್ (ವೈವಾಹಿಕ ಬಂಧನಕ್ಕೆ ಒಳಗಾಗದೆ ಸಹ ಜೀವನ ನಡೆಸುವುದು) ಸಂಬಂಧ ಸಾಮಾಜಿಕ ಮತ್ತು ನೈತಿಕವಾಗಿ ಒಪ್ಪುವಂಥದ್ದಲ್ಲ ಎಂದು ಈಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ. ಲಿವ್ ಇನ್ ಸಂಬಂಧ ಹೊಂದಿರುವ ಕಾರಣ ಪೋಷಕರಿಂದ ಬೆದರಿಕೆ ಎದುರಿಸುತ್ತಿದ್ದು, ಅಪಾಯದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ತಮಗೆ ರಕ್ಷಣೆ ಒದಗಿಸಬೇಕು ಎಂದು ಕೋರಿದ್ದ ಜೋಡಿಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ (ಗುಲ್ಜಾ ಕುಮಾರಿ ವರ್ಸಸ್ ಪಂಜಾಬ್ ರಾಜ್ಯ).
ಗುಲ್ಜಾ ಕುಮಾರಿ ಮತ್ತು ಗುರ್ವೀಂದರ್ ಸಿಂಗ್ ಅವರು ತಾವು ಲಿವ್ ಇನ್ ಸಂಬಂಧ ಹೊಂದಿದ್ದು, ವಿವಾಹವಾಗುವ ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎಚ್ ಎಸ್ ಮದನ್ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿದೆ.
“ಸದ್ಯ ಮನವಿ ಸಲ್ಲಿಸುವ ಮೂಲಕ ಅರ್ಜಿದಾರರು ವಾಸ್ತವದಲ್ಲಿ ತಮ್ಮ ಲಿವ್ ಇನ್ ಸಂಬಂಧಕ್ಕೆ ಅಧಿಕೃತ ಮುದ್ರೆ ಕೋರುತ್ತಿದ್ದಾರೆ. ಇದು ನೈತಿಕ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ. ಹೀಗಾಗಿ ಮನವಿ ಆಧರಿಸಿ ಭದ್ರತೆ ಕಲ್ಪಿಸುವ ಸಂಬಂಧ ಆದೇಶ ಹೊರಡಿಸಲಾಗದು” ಎಂದು ನ್ಯಾಯಾಲ ಹೇಳಿದೆ.
ಕುಟುಂಬದ ಇತರೆ ಸದಸ್ಯರು ತಮ್ಮ ಲಿವ್ ಇನ್ ಸಂಬಂಧಕ್ಕೆ ಬೆದರಿಕೆ ಒಡ್ಡುತ್ತಿರುವುದರಿಂದ ರಕ್ಷಣೆ ಒದಗಿಸುವಂತೆ ಈಚೆಗೆ ಜೋಡಿಯೊಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿಯನ್ನು ಮತ್ತೊಂದು ಪೀಠವು ಇದರಿಂದ ಸಮಾಜದ ಸಾಮಾಜಿಕ ಸಂರಚನೆಗೆ ಧಕ್ಕೆಯುಂಟಾಗುತ್ತದೆ ಎಂದು ವಜಾಗೊಳಿಸಿತ್ತು.