ಸಣ್ಣ ಎಡರು-ತೊಡರುಗಳು ವೈವಾಹಿಕ ಜೀವನದ ಭಾಗವಾಗಿದ್ದು, ಅವು ಕ್ರೌರ್ಯದ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ ಎಂದು ಬುಧವಾರ ಕಲ್ಕತ್ತಾ ಹೈಕೋರ್ಟ್ ಹೇಳಿದೆ (ಚಿರಂಜೀಬ್ ಬಾಗ್ ವರ್ಸಸ್ ಸುಚಂದ್ರ ಬಾಗ್). ಪತ್ನಿಯಿಂದ ಕ್ರೌರ್ಯಕ್ಕೆ ಒಳಪಟ್ಟಿರುವುದರಿಂದ ವಿಚ್ಚೇದನ ಕೊಡಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಪತಿ ತನ್ನ ಪತ್ನಿಯಿಂದ ವಿಚ್ಚೇದನ ಕೊಡಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರಿಂದಮ್ ಸಿನ್ಹಾ ಮತ್ತು ಸುವ್ರಾ ಘೋಷ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
“ಕ್ರೌರ್ಯದ ಆರೋಪವನ್ನು ಸಾಬೀತುಪಡಿಸಲು ಅಗತ್ಯವಾದ ಸಾಕ್ಷ್ಯಗಳನ್ನು ಪತಿ ಸಲ್ಲಿಸಿಲ್ಲ. ಒಂದೊಮ್ಮೆ ಅದಾಗಿದ್ದರೂ ದಂಪತಿಯ ನಡುವೆ ಕೆಲವೊಂದು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಹೀಗಾಗಿ, ಸಣ್ಣ ಎಡರು-ತೊಡರುಗಳು ವೈವಾಹಿಕ ಜೀವನದ ಭಾಗವಾಗಿದ್ದು, ಅವು ಕ್ರೌರ್ಯದ ವ್ಯಾಖ್ಯಾನಕ್ಕೆ ಒಳಪಡುವಷ್ಟರ ಮಟ್ಟಿಗೆ ಅವುಗಳನ್ನು ವಿಸ್ತರಿಸಬಾರದು” ಎಂದು ನ್ಯಾಯಾಲಯ ವಿವೇಕ ಹೇಳಿದೆ.
ಪತ್ನಿಯಿಂದ ʼಕ್ರೌರ್ಯʼಕ್ಕೆ ಒಳಗಾಗಿರುವುದಾಗಿ ಪತಿ ಮಾಡಿದ ಆರೋಪದ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. “ವಿಸ್ತೃತವಾಗಿ ಅಥವಾ ವಿವರಣಾತ್ಮಕವಾಗಿ ತಿಳಿಸದೇ ತನ್ನ ಮೇಲೆ ಪತ್ನಿ ಕ್ರೌರ್ಯ ಎಸಗಿದ್ದಾರೆ ಎಂಬ ಬೀಸು ಆರೋಪವನ್ನು ಮಾಡಿ ಪತಿ ಮೇಲ್ಮನವಿ ಸಲ್ಲಿಸಿರುವ ಪ್ರಕರಣ ಇದಾಗಿದೆ. ಪ್ರತಿವಾದಿಯಾದ ಪತ್ನಿಯ ನಡತೆ, ಘನತೆ ಮತ್ತು ಲೈಂಗಿಕ ಸಾಮರ್ಥ್ಯವನ್ನು ನಾಶಪಡಿಸುವ ಮಟ್ಟಿಗೆ ಮೇಲ್ಮನವಿದಾರರು ಮುಂದಡಿ ಇಟ್ಟಿದ್ದಾರೆ. ಇದು ಕ್ರೌರ್ಯವಲ್ಲ ಎಂದಾದರೆ ಮತ್ತೇನು?” ಎಂದು ನ್ಯಾಯಾಲಯ ಮರು ಪ್ರಶ್ನೆ ಹಾಕಿದೆ.
ಪತಿಯ ವಾದ: ಪತ್ನಿಯು ತನ್ನ ಮತ್ತು ಕುಟುಂಬದವರ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ಆಕೆಯು ಹಲವು ಪುರುಷರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಕುಟುಂಬವನ್ನು ತೊರೆದು ತಾನು ಪ್ರತ್ಯೇಕವಾಗಿ ವಾಸಿಸಬೇಕು ಎಂದು ಪತ್ನಿ ಹೇಳಿದ್ದಾರೆ ಎಂದು ಮೇಲ್ಮನವಿದಾರ ಪತಿ ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ಇಷ್ಟುಮಾತ್ರವಲ್ಲದೇ, ತನ್ನ ಮನೆ ತೊರೆದು ಆಕೆ ತನ್ನ ಪೋಷಕರ ಜೊತೆ ನೆಲೆಸಿದ್ದಾಳೆ. ಹಲವು ರೀತಿಯಲ್ಲಿ ಸಾಕಷ್ಟು ಬಾರಿ ಪ್ರಯತ್ನಿಸಿದರೂ ಪತ್ನಿ ತನ್ನ ಮನೆಗೆ ಬಂದಿಲ್ಲ ಎಂದು ಪತಿ ವಿವರಿಸಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ಪತ್ನಿಯು ಪತಿಯ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿದ್ದು, ಇದು ಕ್ರೌರ್ಯಕ್ಕೆ ಸಮನಾಗಿದೆ ಎಂದಿರುವ ಪತಿಯ ಪರ ವಕೀಲರು ಶ್ರೀಮತಿ ಸಂತಾನ ಬ್ಯಾನರ್ಜಿ ವರ್ಸಸ್ ಸಚೀಂದ್ರನಾಥ್ ಬ್ಯಾನರ್ಜಿ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದಾರೆ.
ಮೊದಲ ಪತ್ನಿಯಿಂದ ವಿಚ್ಚೇದನ ಪಡೆದು ಈಕೆಯನ್ನು ಮೇಲ್ಮನವಿದಾರ ಪತಿ ವಿವಾಹವಾಗಿದ್ದಾರೆ. ಪತಿ ಮತ್ತು ಆಕೆಯ ಕುಟುಂಬಸ್ಥರು ವರದಕ್ಷಿಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರತಿವಾದಿಯ ತಾಯಿ ವರದಕ್ಷಿಣೆ ನೀಡಲಾಗದೇ ಇದ್ದರಿಂದ ಆಕೆಯೆ ಮೇಲೆ ಭೌತಿಕ ಮತ್ತು ಮಾನಸಿಕ ದೌರ್ಜನ್ಯ ಎಸಗಲಾಗಿದೆ ಎಂದು ಪ್ರತಿವಾದಿ ಪತ್ನಿ ಪರ ವಕೀಲರು ವಾದಿಸಿದ್ದಾರೆ.
ವೈವಾಹಿಕ ಹಕ್ಕುಗಳ ಮರುಸ್ಥಾಪನೆ ಕುರಿತು ಮನವಿ ಸಲ್ಲಿಸದೆ ಇದ್ದರೂ ಪತಿಯ ಜೊತೆಗೂಡಿ ಗಂಡನ ಮನೆಯಲ್ಲಿ ವಾಸಿಸುವ ಇರಾದೆ ಹೊಂದಿರುವುದಾಗಿ ಪತ್ನಿ ಹೇಳಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡ ನ್ಯಾಯಾಲಯವು ಪತ್ನಿ ಕ್ರೌರ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ತೆರನಾದ ದಾಖಲೆಗಳನ್ನು ಪತಿ ನೀಡಿಲ್ಲ ಎಂದಿರುವ ಪೀಠವು ಸಂಯುಕ್ತ ಹಕ್ಕುಗಳ ಮರುಸ್ಥಾಪನೆಗೆ ಸಂಬಂಧಿಸಿದಂತೆ ಕೆಳಗಿನಂತೆ ಹೇಳಿದೆ.
“ಮೇಲ್ಮನವಿದಾರ ಪತಿಯು ಪ್ರತಿವಾದಿಯಾದ ಪತ್ನಿಯ ಜೊತೆ ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ಇಚ್ಛೆ ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ತನ್ನ ಪುತ್ರ, ಆಕೆಯ (ಸೊಸೆ) ಜೊತೆ ಜೀವನ ನಡೆಸುವುದು ಬೇಡ ಎಂಬ ರೀತಿಯಲ್ಲಿ ವಿಚಾರಣಾಧೀನ ನ್ಯಾಯಾಲಯದ ಮುಂದೆ ಮೇಲ್ಮನವಿದಾರನ ತಂದೆ ವಾದಿಸಿದ್ದಾರೆ. ತನ್ನ ಪತಿಯ ಜೊತೆ ತೆರಳಿ ಅವರ ಕುಟುಂಬದ ಜೊತೆ ಸೇರಿ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಿ, ಜೀವನ ನಡೆಸಲು ಪ್ರತಿವಾದಿ ಪತ್ನಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ಮೇಲ್ಮನವಿದಾರ ಮತ್ತು ಅವರ ಕುಟುಂಬಕ್ಕೆ ಇದು ಇಷ್ಟವಿಲ್ಲ ಎಂಬುದು ಸ್ಪಷ್ಟವಾಗಿದೆ. ಪತ್ನಿಯು ವೈವಾಹಿಕ ಹಕ್ಕುಗಳ ಮರುಸ್ಥಾಪನೆಗೆ ಔಪಚಾರಿಕವಾಗಿ ಮನವಿ ಮಾಡಲಿಲ್ಲ ಎಂದ ಮಾತ್ರಕ್ಕೆ ಆಕೆಗೆ ಪತಿಯೊಂದಿಗೆ ಸೇರಿ ಜೀವನ ನಡೆಸುವ ಇರಾದೆ ಇರಲಿಲ್ಲ ಎಂದಲ್ಲ” ಎಂದು ಪೀಠ ಹೇಳಿದೆ.
ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿರುವ ಹೈಕೋರ್ಟ್, ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದೆ. “ತಮ್ಮ ಮುಂದೆ ಇಡಲಾಗಿರುವ ಎಲ್ಲಾ ದಾಖಲೆಗಳನ್ನು ಪರಿಗಣಿಸಿದ ಬಳಿಕ ಮೇಲ್ಮನವಿದಾರ ತಮ್ಮ ವಾದವನ್ನು ಸಾಬೀತುಪಡಿಸಲು ವಿಫಲವಾಗಿದ್ದಾರೆ ಎಂದು ಹೇಳುವುದನ್ನು ಬಿಟ್ಟು ಬೇರಾವುದೇ ಪರ್ಯಾಯ ಹಾದಿ ನಮಗೆ ಕಾಣಿಸುತ್ತಿಲ್ಲ. ಹೀಗಾಗಿ ಆಕ್ಷೇಪಾರ್ಹ ತೀರ್ಪಿನಲ್ಲಿ ಕಾನೂನುಬಾಹಿರ ವಿಚಾರಗಳು ಇಲ್ಲದೇ ಇರುವುದರಿಂದ ಈ ನ್ಯಾಯಾಲಯವು ಮಧ್ಯಪ್ರವೇಶಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.