ಸುದ್ದಿಗಳು

ಪರಸ್ಪರ ಸಮ್ಮತಿಯ ಇಬ್ಬರು ವಯಸ್ಕರ ಲಿವ್‌-ಇನ್ ಸಂಬಂಧ ಅಪರಾಧವಲ್ಲ: ಅಲಾಹಾಬಾದ್‌ ಹೈಕೋರ್ಟ್‌

“ತಮಗೆ ರಕ್ಷಣೆ ನೀಡುವಂತೆ ಕೋರಿ ಫಾರುಖಾಬಾದ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕಳೆದ ಮಾರ್ಚ್‌ನಲ್ಲಿಯೇ ಮನವಿ ಮಾಡಲಾಗಿದ್ದರೂ ಸಹ ಇದುವೆರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Bar & Bench

ದೇಶದಲ್ಲಿ ಲಿವ್‌- ಇನ್‌ ಸಂಬಂಧ ಸಾಮಾಜಿಕವಾಗಿ ಒಪ್ಪಿತವಲ್ಲವಾದರೂ ಕಾನೂನಿನಡಿ ಅದು ಯಾವುದೇ ಅಪರಾಧಕ್ಕೆ ಕಾರಣವಾಗದು. ಪರಸ್ಪರ ಸಮ್ಮತಿ ಇರುವ ವಯಸ್ಕರು ಒಟ್ಟಿಗೆ ವಾಸಿಸಲು ಸ್ವತಂತ್ರರು ಮತ್ತು ಅವರ ಶಾಂತಿಯುತ ಬದುಕಿನಲ್ಲಿ ಯಾರೊಬ್ಬರೂ ಹಸ್ತಕ್ಷೇಪ ಮಾಡಲು ಅನುಮತಿ ಇಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ.

“ವಯಸ್ಕರಾಗಿರುವ ಹುಡುಗ- ಹುಡುಗಿ ಪರಸ್ಪರ ಸಹಮತ ವ್ಯಕ್ತಪಡಿಸಿದ್ದರೆ ಪೋಷಕರೂ ಸೇರಿದಂತೆ ಯಾರೊಬ್ಬರಿಗೂ ಅವರ ಲಿವ್‌-ಇನ್‌ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ತನ್ನ ಅನೇಕ ತೀರ್ಪುಗಳಲ್ಲಿ ಹೇಳಿದೆ” ಎಂಬುದಾಗಿ ಹೈಕೋರ್ಟ್‌ ವಿವರಿಸಿತು.

"ಲಿವ್-ಇನ್ ಸಂಬಂಧ ಎಂಬುದು ಬೇರೆ ದೇಶಗಳಂತಲ್ಲದೆ ಭಾರತದಲ್ಲಿ ಸಾಮಾಜಿಕವಾಗಿ ಅಂಗೀಕಾರ ಪಡೆಯದ ಒಂದು ಸಂಬಂಧವಾಗಿದೆ. ಲತಾ ಸಿಂಗ್ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ UP [(2006) 2 SCC (Cri) 478] ಇದನ್ನು ವಿಷದಪಡಿಸಲಾಗಿದ್ದು ಅನೈತಿಕವೆಂದು ಗ್ರಹಿಸಲಾದರೂ ಸಹ ಭಿನ್ನಲಿಂಗಕ್ಕೆ ಸೇರಿದ ಪರಸ್ಪರ ಸಮ್ಮತಿಯುಳ್ಳ ಇಬ್ಬರು ವಯಸ್ಕರ ನಡುವಿನ ಲಿವ್-ಇನ್‌ ಸಂಬಂಧ ಯಾವುದೇ ಅಪರಾಧವಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಅರ್ಜಿದಾರ ಜೋಡಿಯಲ್ಲೊಬ್ಬರಾದ ಕಾಮಿನಿದೇವಿ ಅವರು ತನ್ನ ಕುಟುಂಬ ಸದಸ್ಯರು ಕಿರುಕುಳ ನೀಡದಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಂಜನಿ ಕುಮಾರ್ ಮಿಶ್ರಾ ಮತ್ತು ಪ್ರಕಾಶ್ ಪಾಡಿಯಾ ಅವರಿದ್ದ ಪೀಠ ಆದೇಶ ನೀಡಿದೆ.

“ತಮಗೆ ರಕ್ಷಣೆ ನೀಡುವಂತೆ ಕೋರಿ ಫಾರುಕಾಬಾದ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕಳೆದ ಮಾರ್ಚ್‌ನಲ್ಲಿಯೇ ಮನವಿ ಮಾಡಲಾಗಿದ್ದರೂ ಸಹ ಇದುವೆರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಜೋಡಿಗೆ ಸೂಕ್ತ ರಕ್ಷಣೆ ನೀಡುವಂತೆ ಆದೇಶಿಸಿದೆ.

ಜೋಡಿಯ ಶಾಂತಿಯುತ ಬದುಕಿಗೆ ಯಾರಾದರೂ ತೊಂದರೆ ನೀಡಿದರೆ ಹೈಕೋರ್ಟ್‌‌ ಜಾಲತಾಣದಲ್ಲಿ ದೊರೆಯುವ ಈ ಆದೇಶದ ಸ್ವಯಂ ದೃಢೀಕೃತ ಪ್ರತಿಯೊಂದಿಗೆ ಅವರು ಫಾರೂಕಾಬಾದ್‌ ಜಿಲ್ಲೆಯ ಹಿರಿಯ ಪೊಲೀಸ್‌ ಸೂಪರಿಂಟೆಂಡೆಂಟ್‌ ಅವರಿಗೆ ದೂರು ನೀಡಬೇಕು. ಅಧಿಕಾರಿಗಳು ಸೂಕ್ತ ರಕ್ಷಣೆ ಒದಗಿಸಬೇಕು” ಎಂದು ನ್ಯಾಯಾಲಯ ತಿಳಿಸಿದೆ. ಒಂದು ವೇಳೆ ಅರ್ಜಿದಾರರು ಸಲ್ಲಿಸಿದ ಆಧಾರ್‌ ಕಾರ್ಡ್‌ ಇತ್ಯಾದಿ ದಾಖಲೆಗಳನ್ನು ತಿರುಚಲಾಗಿದ್ದರೆ ಅರ್ಜಿದಾರರ ಕುಟುಂಬ ಸದಸ್ಯರು ಮನವಿ ಸಲ್ಲಿಸಬಹುದು ಎಂದು ಕೂಡ ನ್ಯಾಯಾಲಯ ಹೇಳಿದೆ.