ಸಲಿಂಗ ವಿವಾಹ ಪ್ರಕರಣ: ಕಾನೂನಿಗೆ ಲಿಂಗಭೇದ ಇಲ್ಲ ಎಂದ ದೆಹಲಿ ಹೈಕೋರ್ಟ್; ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನೋಟಿಸ್

ವಿಶೇಷ ವಿವಾಹ ಕಾಯ್ದೆ ಮತ್ತು ವಿದೇಶಿ ವಿವಾಹ ಕಾಯ್ದೆಯನ್ನು ಸಲಿಂಗ ದಂಪತಿಗಳ ವಿವಾಹಕ್ಕೂ ಅನ್ವಯಿಸುವಂತೆ ವ್ಯಾಖ್ಯಾನಿಸಬೇಕು ಎಂದು ಒತ್ತಾಯಿಸಿ ಸಲ್ಲಿಸಲಾದ ಎರಡು ರಿಟ್ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
same-sex couple
same-sex couple
Published on

ಸಲಿಂಗಿಗಳನ್ನು ‘ಸಂಪೂರ್ಣ ಮಾನವರನ್ನಾಗಿ ಗುರುತಿಸುವಂತಾಗಬೇಕು’ ಎಂದು ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ದೆಹಲಿ ಹೈಕೋರ್ಟಿಗೆ ಬುಧವಾರ ಮನವಿ ಮಾಡಿದ್ದಾರೆ. ಇಬ್ಬರು ಸಲಿಂಗಿ ಜೋಡಿಗಳು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಅವರು ವಾದ ಮಂಡಿಸಿದರು.

ವಿಶೇಷ ವಿವಾಹ ಕಾಯ್ದೆ ಮತ್ತು ವಿದೇಶಿ ವಿವಾಹ ಕಾಯ್ದೆಯನ್ನು ಸಲಿಂಗ ದಂಪತಿಗಳ ವಿವಾಹಕ್ಕೂ ಅನ್ವಯಿಸುವಂತೆ ವ್ಯಾಖ್ಯಾನಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ನ್ಯಾಯಮೂರ್ತಿಗಳಾದ ಆರ್ ಎಸ್ ಎಂಡ್ಲಾ ಮತ್ತು ಆಶಾ ಮೆನನ್ ಅವರಿದ್ದ ಪೀಠ ಈ ಸಂಬಂಧ ನೋಟಿಸ್ ನೀಡಿದ್ದು 2021ರ ಜನವರಿ 8ಕ್ಕೆ ಪ್ರಕರಣ ಮುಂದೂಡಿದೆ.

ಪ್ರಕರಣದ ನೋಟಿಸನ್ನು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳೆರಡೂ ಸ್ವೀಕರಿಸಿವೆ. ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಎರಡೂ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಅದರ ನಂತರದ ನಾಲ್ಕುವಾರದೊಳಗೆ ಈ ಸಂಬಂಧ ಪ್ರತ್ಯುತ್ತರಗಳನ್ನು ಸಲ್ಲಿಸಬಹುದು ಎಂದು ಸೂಚಿಸಿದೆ.

Also Read
ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ 4% ಮೀಸಲಾತಿ ಕೋರಿ ಆಂಧ್ರಪ್ರದೇಶ ಹೈಕೋರ್ಟ್‌ಗೆ ಮನವಿ

ವಿಚಾರಣೆಯ ವಿವರ

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲ ರಾಜಕುಮಾರ್ ಯಾದವ್ ‘ಇದೊಂದು ವಿಚಿತ್ರ ಸನ್ನಿವೇಶ. 5000 ವರ್ಷಗಳ ಇತಿಹಾಸವಿರುವ ಸನಾತನ ಧರ್ಮದಲ್ಲಿ ಇಂತಹ ಸನ್ನಿವೇಶವನ್ನು ನಾವೆಂದೂ ಎದುರಿಸಿಲ್ಲ’ ಎಂದರು. ಅವರ ಈ ವಾದ ನ್ಯಾಯಮೂರ್ತಿ ಮೆನನ್ ಅವರ ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಯಿತು. ಮೆನನ್ ಅವರು ಹೀಗೆ ಹೇಳಿದರು:

"ಕಾನೂನುಳಿಗೆ ಲಿಂಗ ತಟಸ್ಥವಾಗಿರುತ್ತವೆ. ನೀವು ದಯವಿಟ್ಟು ದೇಶದ ಸನಾತನ ಧರ್ಮದ ಪ್ರಜೆಗಳಿಗೆ ಕಾನೂನನ್ನು ಅರ್ಥೈಸಲು ಯತ್ನಿಸಿ. ಇದು ವಿರೋಧಿ ದಾವೆ ಅಲ್ಲ (ಇದನ್ನು ವಿರೋಧಿ ಎಂದು ಪರಿಗಣಿಸಬೇಡಿ) ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ನಾನು ಮನವಿ ಮಾಡುತ್ತೇನೆ. ಇದು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಇರುವ ಹಕ್ಕಿನ ಕುರಿತಾದದ್ದು".
ನ್ಯಾಯಮೂರ್ತಿ ಆಶಾ ಮೆನನ್

ವಿಷಯವನ್ನು ವಿರೋಧಿ ದಾವೆ ಎಂದು ಪರಿಗಣಿಸುವುದಿಲ್ಲ ಎಂಬುದಾಗಿ ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರ ವಕೀಲ ಕೀರ್ತಿಮಾನ್ ಸಿಂಗ್ ಸಮಜಾಯಿಷಿ ನೀಡಿದರು.

ಅರ್ಜಿದಾರರನ್ನು ಹಕ್ಕು ರಹಿತರನ್ನಾಗಿ ಮಾಡಲಾಗಿದೆ

ಪ್ರಕರಣವು ಎರಡು ಜೋಡಿಗಳು ಸಲ್ಲಿಸಿರುವ ಎರಡು ಅರ್ಜಿಗಳನ್ನು ಒಳಗೊಂಡಿದೆ. ವಿಶೇಷ ವಿವಾಹ ಕಾಯ್ದೆಯ ಪ್ರಸ್ತುತ ವ್ಯಾಖ್ಯಾನವನ್ನು ಒಂದು ಜೋಡಿ ಪ್ರಶ್ನಿಸಿದೆ. ಈ ಜೋಡಿ ವಿವಾಹವಾಗಲು ಉಪನೋಂದಣಾಧಿಕಾರಿಗಳು ಸಮ್ಮತಿ ಸೂಚಿಸಿಲ್ಲ. ಮತ್ತೊಂದು ಜೋಡಿ ವಿದೇಶಿ ವಿವಾಹ ಕಾಯ್ದೆಯಡಿ ನ್ಯೂಯಾರ್ಕಿನ ಭಾರತೀಯ ಕಾನ್ಸುಲೇಟ್ ಕಚೇರಿ ತಮ್ಮ ಮದುವೆಯನ್ನು ಅಂಗೀಕರಿಸಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ 'ಅರ್ಜಿದಾರರ ಇಚ್ಛೆಯ ವಿರುದ್ಧ ನಡೆದಿರುವ ಬೆಳವಣಿಗೆಗಳು ಅವರನ್ನು ಹಕ್ಕುರಹಿತರನ್ನಾಗಿ ಮಾಡಿವೆ' ಎಂದು ವಕೀಲೆ ಮೇನಕಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೂಢಿಗತ/ ಧಾರ್ಮಿಕ ಕಾನೂನಿನ ವಿಚಾರವಲ್ಲ…

ನ್ಯಾಯಮೂರ್ತಿ ಎಂಡ್ಲಾ ಅವರ ವ್ಯಾಖ್ಯಾನವೊಂದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲೆ ಮೇನಕಾ ಅವರು, ‘ವಿಶೇಷ ವಿವಾಹ ಕಾಯ್ದೆ, ವಿದೇಶಿ ವಿವಾಹ ಕಾಯ್ದೆಗಳು ರೂಢಿಗತ ಕಾನೂನುಗಳನ್ನು ಆಧರಿಸಿಲ್ಲ. ಅವು ಶಾಸನಬದ್ಧ ಕಾನೂನುಗಳಾಗಿವೆ. ರೂಢಿಗತ ಅಥವಾ ಧಾರ್ಮಿಕ ಕಾನೂನನ್ನು ನಾವು ಆಧರಿಸಿಲ್ಲ. ನಾವಿರುವುದು ನಾಗರಿಕ ಕಾನೂನನ್ನು ಆಧರಿಸಿ’ ಎಂದು ಹೇಳಿದ್ದಾರೆ.

"…ಅಂತರ್ಜಾತಿ ವಿವಾಹಗಳು, ಅಂತರ್-ಧರ್ಮೀಯ ವಿವಾಹಗಳಿಂದಾಗಿ ಅಪಾಯಕ್ಕೆ ಸಿಲುಕಿದ ಅನೇಕ ಜೋಡಿಗಳ ರಕ್ಷಣೆಗೆ ಹೈಕೋರ್ಟ್ ಮುಂದಾಗಿದ್ದನ್ನು ನಾನು ನೋಡಿದ್ದೇನೆ... (ಈ ಪ್ರಕರಣದಲ್ಲಿಯೂ) ನಾನು ಅಂಥದ್ದೇ ರಕ್ಷಣೆ ಬಯಸುತ್ತಿದ್ದೇನೆ... ಬಹು ನ್ಯಾಯಾಧೀಶರು ಲೈಂಗಿಕ ಮನೋಧರ್ಮವನ್ನು ತಾರತಮ್ಯ ಎಸಗಲು ಬಳಸಿಕೊಳ್ಳಬಾರದು ಎಂದು ಅನೇಕ ನ್ಯಾಯಾಧೀಶರು ಹೇಳಿದ್ದಾರೆ” ಎಂಬುದಾಗಿ ಮೇನಕಾ ತಿಳಿಸಿದಾರೆ.

‘ಯಾರು ಮದುವೆಗೆ ಅರ್ಹರಲ್ಲ ಎಂಬುದನ್ನು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವರಿಸಲಾಗಿದ್ದು ಹುಚ್ಚುಹಿಡಿದ ವ್ಯಕ್ತಿಗಳು, ಅಪ್ರಾಪ್ತರು, ನಿರ್ಬಂಧಿತ ಸಂಬಂಧ ಸ್ವರೂಪಗಳು ಮತ್ತು ಸಮ್ಮತಿ ಇಲ್ಲದ ವ್ಯಕ್ತಿಗಳೊಂದಿಗೆ ಮಾತ್ರ ಮದುವೆಯಾಗುವಂತಿಲ್ಲ’ ಎಂದು ಅವರು ಒತ್ತಿ ಹೇಳಿದ್ದಾರೆ.

ಸಂಪೂರ್ಣ ನಾಗರಿಕರನ್ನಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಿ

ಮದುವೆಯಾಗುವ ಹಕ್ಕು ಸೇರಿದಂತೆ ಸಂವಿಧಾನದ 21ನೇ ವಿಧಿಯನ್ನು ಸಲಿಂಗ ವಿವಾಹಿತರಿಗೂ ವಿಸ್ತರಿಸಬೇಕು. ವಿವಾಹದ ಉದ್ದೇಶ ಎಂಬುದು ಸಾಂತಾನೋತ್ಪತ್ತಿಗಾಗಿ ಮಾತ್ರ ಸೀಮಿತವಲ್ಲ ಎಂದು ಸುಪ್ರೀಂಕೋರ್ಟ್ ಈಗಾಗಲೇ ಹೇಳಿದೆ ಹೀಗಾಗಿ ಅರ್ಜಿದಾರರು ಪೂರ್ಣ ನಾಗರಿಕರಾಗಿ ಗುರುತಿಸಿಕೊಳ್ಳಲು ಬಯಸುತ್ತಾರೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

Also Read
ನಮ್ಮ ಕಾನೂನು ವ್ಯವಸ್ಥೆ, ಮೌಲ್ಯಗಳು ಸಲಿಂಗ ವಿವಾಹ ಒಪ್ಪುವುದಿಲ್ಲ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಪ್ರಕರಣದ ಈ ಹಿಂದಿನ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು "ನಮ್ಮ ಕಾನೂನು ವ್ಯವಸ್ಥೆ ಮತ್ತು ಮೌಲ್ಯಗಳು ಸಲಿಂಗ ವಿವಾಹವನ್ನು ಪವಿತ್ರ ಎಂದು ಗುರುತಿಸುವುದಿಲ್ಲ." ಎಂಬುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಅರ್ಜಿದಾರರ ಪರವಾಗಿ ವಕೀಲೆ ಅರುಂಧತಿ ಕಾಟ್ಜು ಅವರು ಕೂಡ ಹಾಜರಿದ್ದರು. ಪ್ರತಿವಾದಿ-ಅಧಿಕಾರಿಗಳ ಪರವಾಗಿ ವಕೀಲ ಸಂಗಿತಾ ರೈ ಉಪಸ್ಥಿತರಿದ್ದರು.

Kannada Bar & Bench
kannada.barandbench.com