CM Siddaramaiah, MUDA, Bengaluru City Civil Court 
ಸುದ್ದಿಗಳು

ಮುಡಾ ಪ್ರಕರಣ: ತನಿಖೆ ಮುಂದುವರಿಸಲು ಲೋಕಾಯುಕ್ತ ಪೊಲೀಸರಿಗೆ ವಿಶೇಷ ನ್ಯಾಯಾಲಯ ಅನುಮತಿ

ಸೀಮಿತ ವ್ಯಾಪ್ತಿಗೆ ಇ ಡಿಯನ್ನು ಬಾಧಿತ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಲೋಕಾಯುಕ್ತ ಪೊಲೀಸರು ನಿರ್ಣಾಯಕವಾದ ಅಂತಿಮ ವರದಿ ಸಲ್ಲಿಸುವವರೆಗೆ ಬಿ ವರದಿ ಪರಿಗಣಿಸುವುದು ಅಥವಾ ತಿರಸ್ಕರಿಸುವ ಪ್ರಶ್ನೆಯನ್ನು ಬಾಕಿ ಉಳಿಸಲಾಗಿದೆ ಎಂದಿರುವ ಕೋರ್ಟ್‌.

Bar & Bench

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್‌ ಕೋರಿಕೆಯಂತೆ ಮುಂದುವರಿದ ತನಿಖೆ ನಡೆಸಿ, ನಿರ್ಣಾಯಕ ವರದಿ ಸಲ್ಲಿಸಲು ಮೇ 7ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗಡುವು ವಿಧಿಸಿದೆ.

ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿ ಹಾಗೂ ಮುಡಾ ಪ್ರಕರಣದಲ್ಲಿ ಪ್ರತಿಭಟನಾ ಅರ್ಜಿ ಸಲ್ಲಿಸಲು ತನಗೂ ಅನುಮತಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಇಂದು ನಡೆಸಿದರು.

Santhosh Gajanan Bhat Judge, MP/MLA Special Court

“ಸಿಆರ್‌ಪಿಸಿ ಸೆಕ್ಷನ್‌ 173(8) ಅಡಿ ಮುಂದಿನ ತನಿಖೆ ನಡೆಸಲು ಮೈಸೂರು ಲೋಕಾಯುಕ್ತರಿಗೆ ಅನುಮತಿಸಲಾಗಿದ್ದು, ನಿರ್ಣಾಯಕವಾದ ಅಂತಿಮ ವರದಿಯನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು. ಸೀಮಿತ ವ್ಯಾಪ್ತಿಗೆ ಜಾರಿ ನಿರ್ದೇಶನಾಲಯವನ್ನು ಬಾಧಿತ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಲೋಕಾಯುಕ್ತ ಪೊಲೀಸರು ನಿರ್ಣಾಯಕವಾದ ಅಂತಿಮ ವರದಿ ಸಲ್ಲಿಸುವವರೆಗೆ ಬಿ ವರದಿ ಪರಿಗಣಿಸುವುದು ಅಥವಾ ತಿರಸ್ಕರಿಸುವ ಪ್ರಶ್ನೆಯನ್ನು ಬಾಕಿ ಉಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

ಇದಕ್ಕೂ ಮುನ್ನ ಲೋಕಾಯುಕ್ತ ತನಿಖಾಧಿಕಾರಿಗಳು, ಸಿಆರ್‌ಪಿಸಿ ಸೆಕ್ಷನ್‌ 173 (8) ಅಡಿ ತನಿಖೆ ಮುಂದುವರಿಸಲು ನ್ಯಾಯಾಲಯವನ್ನು ಕೋರಿದ್ದರು.

ಒಮ್ಮೆ ಪೊಲೀಸ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲೆ ಹೆಚ್ಚಿನ ತನಿಖೆ ಮುಂದುವರಿಸಲು ಇರುವ ನಿಬಂಧನೆಗಳನ್ನು ಸಿಆರ್‌ಪಿಸಿ ಸೆಕ್ಷನ್‌ 173 (8) ತಿಳಿಸುತ್ತದೆ. ಇದರಡಿ ಮುಂದುವರಿದ ತನಿಖೆಯಲ್ಲಿ ಹೊಸ ಸಾಕ್ಷಿಗಳೇನಾದರೂ ಕಂಡುಬಂದರೆ ಅದರ ಆಧಾರದಲ್ಲಿ ಪೂರಕ ವರದಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.

ಮುಡಾ ನಿವೇಶನ ಹಂಚಿಕೆ ಅಕ್ರಮದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಪರಾಧ ಸಾಬೀತುಪಡಿಸುವ ಯಾವುದೇ ಅಂಶಗಳಿಲ್ಲ ಎಂಬ ಷರಾ ಬರೆದಿರುವ ಅಂತಿಮ ವರದಿಯ 'ಬಿʼ ರಿಪೋರ್ಟ್‌ ಅನ್ನು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಫೆಬ್ರವರಿ 20ರಂದು ಸಲ್ಲಿಸಿದ್ದಾರೆ.