ಮುಡಾ ಪ್ರಕರಣ: ಪ್ರತಿಭಟನಾ ಅರ್ಜಿಯ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳು ಲೋಕಾಯುಕ್ತ ಪೊಲೀಸರ ಜೊತೆ ಹಂಚಿಕೊಂಡಿರುವ 28 ದಾಖಲೆಗಳನ್ನು ಪರಿಗಣಿಸಲಾಗಿದ್ದು, ಬಿ ವರದಿಯಲ್ಲಿ ಒಂದು ಸಂಚಿಕೆಯನ್ನು ಮೀಸಲಿಡಲಾಗಿದೆ ಎಂದು ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ವೆಂಕಟೇಶ್‌ ಅರಬಟ್ಟಿ.
ಮುಡಾ ಪ್ರಕರಣ: ಪ್ರತಿಭಟನಾ ಅರ್ಜಿಯ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಿತ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ವರದಿ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಪ್ರತಿಭಟನಾ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಏಪ್ರಿಲ್‌ 15ಕ್ಕೆ ಪ್ರಕಟಿಸಲಾಗುವುದು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದೆ.

ಮುಡಾ ಪ್ರಕರಣದಲ್ಲಿ ಪ್ರತಿಭಟನಾ ಅರ್ಜಿ ಸಲ್ಲಿಸಲು ತನಗೂ ಅನುಮತಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಾದ-ಪ್ರತಿವಾದವನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಇಂದು ಆಲಿಸಿದರು. ಇದಕ್ಕೂ ಮುನ್ನ, ಏಪ್ರಿಲ್‌ 3ರಂದು ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿ ಸಂಬಂಧ ವಾದವನ್ನು ನ್ಯಾಯಾಲಯ ಆಲಿಸಿತ್ತು. ಇಂದು ಇ ಡಿ ಹಾಗೂ ಲೋಕಾಯುಕ್ತ ಪೊಲೀಸರ ವಾದವನ್ನು ಆಲಿಸಿ, ನ್ಯಾಯಾಲಯ ಆದೇಶ ಕಾಯ್ದಿರಿಸಿದೆ.

Santhosh Gajanan Bhat Judge, MP/MLA Special Court
Santhosh Gajanan Bhat Judge, MP/MLA Special Court

ಇ ಡಿ ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಲೋಕಾಯುಕ್ತದ ಜೊತೆ ನವೆಂಬರ್‌ 30 ಮತ್ತು 2025ರ ಜನವರಿ 24ರಂದು ಹಂಚಿಕೊಳ್ಳಲಾಗಿದೆ. ಬಿ ವರದಿ ಸಲ್ಲಿಸುವಾಗ ಲೋಕಾಯುಕ್ತ ಪೊಲೀಸ್‌ ಇದನ್ನು ಪರಿಗಣಿಸಿಲ್ಲ. ಅಲ್ಲದೇ, ಪ್ರತಿಭಟನಾ ಅರ್ಜಿ ಸಲ್ಲಿಸುವ ಹಕ್ಕು ತನಗೂ ಇದೆ” ಎಂದು ವಾದಿಸಿದರು. ಅಲ್ಲದೇ, ಸಂಬಂಧಿತ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.

Also Read
ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ 'ಬಿʼ ವರದಿ ಸಲ್ಲಿಕೆ: ಇಡಿಯಿಂದ ವಿಶೇಷ ನ್ಯಾಯಾಲಯಕ್ಕೆ ಪ್ರತಿಭಟನಾ ಅರ್ಜಿ

ಲೋಕಾಯುಕ್ತ ಪೊಲೀಸ್‌ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್‌ ಅರಬಟ್ಟಿ ಅವರು “ಜಾರಿ ನಿರ್ದೇಶನಾಲಯವು ಪ್ರತಿಭಟನಾ ಅರ್ಜಿ ಸಲ್ಲಿಸಲು ಸಿಆರ್‌ಪಿಸಿ, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಲ್ಲಿ ಅವಕಾಶವಿಲ್ಲ. ಇ ಡಿಯು ಬಾದಿತ ವ್ಯಕ್ತಿಯಾಗುವುದಿಲ್ಲ. ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳು ಲೋಕಾಯುಕ್ತ ಪೊಲೀಸರ ಜೊತೆ ಹಂಚಿಕೊಂಡಿರುವ 28 ದಾಖಲೆಗಳನ್ನು ಪರಿಗಣಿಸಲಾಗಿದ್ದು, ಬಿ ವರದಿಯಲ್ಲಿ ಒಂದು ಸಂಚಿಕೆಯನ್ನು ಮೀಸಲಿಡಲಾಗಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. 

Kannada Bar & Bench
kannada.barandbench.com