ಮುಡಾ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಬೇಕು ಮತ್ತು ಮುಂದಿನ ವಿಚಾರಣೆಯ ಮುನ್ನಾ ದಿನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಕಳೆದ ವಿಚಾರಣೆಯಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿಯನ್ನು ಜನವರಿ 28ರವರೆಗೆ ಸಲ್ಲಿಸಬಹುದು ಎಂದು ಆದೇಶಿಸಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಿತವಾಗಿರುವ ಮುಡಾ ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗೆ ವಹಿಸುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರ ತಮ್ಮ ಮನವಿಗೆ ಪೂರಕವಾಗಿ 2024ರ ಡಿಸೆಂಬರ್ 18ರಂದು ಸಲ್ಲಿಸಿದ್ದ ಹೆಚ್ಚುವರಿ ಅಫಿಡವಿಟ್ ಆಧರಿಸಿ ಕೆಲಕಾಲ ವಾದಿಸಿದರು. ಆಗ ಪ್ರತಿವಾದಿಗಳ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು ಇನ್ನೂ ಆಕ್ಷೇಪಣೆ ದೊರೆತಿಲ್ಲ. ಪ್ಲೀಡಿಂಗ್ ಪೂರ್ಣವಾಗಿಲ್ಲ. ಅದನ್ನು ಮೊದಲಿಗೆ ನೀಡಲಿ, ಆನಂತರ ಅರ್ಜಿದಾರರ ಮನವಿಗಳನ್ನು ನ್ಯಾಯಾಲಯ ಪರಿಗಣಿಸಬೇಕು ಎಂದರು.
ಇದನ್ನು ಒಪ್ಪಿದ ಪೀಠವು “ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣದ ತನಿಖೆ ಮುಂದುವರಿಸಬೇಕು. ಲೋಕಾಯುಕ್ತ ಐಜಿಪಿ ತನಿಖೆಯ ಮೇಲೆ ನಿಗಾ ಇಡಬೇಕು. ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಸಲ್ಲಿಸುವ ಯಾವುದೇ ವರದಿಯನ್ನು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ) ಪರಿಶೀಲಿಸಬೇಕು. ಲೋಕಾಯುಕ್ತ ಪೊಲೀಸರು ಅಂತಿಮ ಅಥವಾ ಇನ್ನಾವುದೇ ವರದಿಯನ್ನು ಮುಂದಿನ ವಿಚಾರಣೆಯ ಒಳಗೆ ನ್ಯಾಯಾಲಯದ ಮುಂದೆ ಸಲ್ಲಿಸಬೇಕು. ಮುಂದಿನ ವಿಚಾರಣೆಯ ಮುನ್ನಾದಿನ ವರದಿಯನ್ನು ಲೋಕಾಯುಕ್ತ ಪೊಲೀಸರು ಸಲ್ಲಿಸಬೇಕು. ಅಲ್ಲಿಯವರೆಗೆ ಆಕ್ಷೇಪಣೆ ಅಥವಾ ಪ್ರತ್ಯುತ್ತರವನ್ನು ಪಕ್ಷಕಾರರು ಹಂಚಿಕೊಳ್ಳಬೇಕು” ಎಂದು ಆದೇಶಿಸಿ, ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಹಿರಿಯ ವಕೀಲ ಮಣೀಂದರ್ ಸಿಂಗ್ ಅವರನ್ನು ಕುರಿತು ಪೀಠವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆಗೆ ಸೀಮಿತವಾಗಿ ಮಾತ್ರವೇ ವಾದಿಸುವಂತೆ ಸೂಚಿಸಿತು.
ಇದಕ್ಕೆ ಸಮ್ಮತಿಸಿದ ವಕೀಲ ಮಣೀಂದರ್ ಸಿಂಗ್ ಅವರು “ಉನ್ನತ ಮಟ್ಟದಲ್ಲಿ ರಾಜಕಾರಣಿಗಳು ಪ್ರಕರಣದಲ್ಲಿ ಭಾಗಿಯಾದಾಗ ಸ್ವತಂತ್ರ ತನಿಖಾ ಸಂಸ್ಥೆ ತನಿಖೆ ನಡೆಸುವುದು ಅಗತ್ಯ. ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸುವುದಕ್ಕೂ ಮುನ್ನ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ ಮೂವರು ಅಧಿಕಾರಿಗಳ ಸಮಿತಿಯು ಮುಡಾ ದಾಖಲೆಗಳನ್ನು ಕೊಂಡೊಯ್ದಿದೆ. ಹೈಕೋರ್ಟ್ ತನಿಖೆಗೆ ಆದೇಶಿಸಿದ ಬೆನ್ನಿಗೇ ಪಾರ್ವತಿ ಅವರು 56 ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನು ವಾಪಸ್ ಮಾಡಿದ್ದು, ಮುಡಾ ಅಧಿಕಾರಿಗಳು ಶರವೇಗದಲ್ಲಿ ಅವುಗಳನ್ನು ವಾಪಸ್ ಪಡೆದಿದ್ದಾರೆ. ಇದು ಅಪರಾಧವನ್ನು ಒಪ್ಪಿಕೊಂಡಂತಾಗಿದೆ” ಎಂದರು.
“ಶರವೇಗದಲ್ಲಿ ನಿವೇಶನಗಳನ್ನು ಹಿಂಪಡೆದಿರುವ ಮುಡಾ ಆಯುಕ್ತರು ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಮತ್ತು ಯತೀಂದ್ರ ಅವರನ್ನು ರಕ್ಷಿಸಲು ಮುಂದಾಗಿರುವುದು ಗೋಚರಿಸುತ್ತಿದೆ. ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತ ತನಿಖೆಗೆ ಮುಂದಾಗುವುದಕ್ಕೂ ಮುನ್ನ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ ಮೂವರು ಅಧಿಕಾರಿಗಳ ಸಮಿತಿ ಮುಡಾ ದಾಖಲೆಗಳನ್ನು ಕೊಂಡೊಯ್ದಿದೆ. ಈಗ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯು ವಶಕ್ಕೆ ಪಡೆದಿರುವ ದಾಖಲೆಗಳನ್ನು ಹಿಂಪಡೆದು, ತನಿಖೆ ಮುಂದುವರಿಸಬೇಕು. 140 ಕಡತಗಳಿಗೆ ಏನಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಈ ದಾಖಲೆಗಳು ನಿರ್ಣಾಯಕ ಸಾಕ್ಷಿಗಳಾಗಿವೆ” ಎಂದರು.
ಇದಕ್ಕೆ ಆಕ್ಷೇಪಿಸಿದ ಪ್ರತಿವಾದಿಗಳ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಅನಗತ್ಯ ವಾದ ಮಂಡಿಸಲಾಗುತ್ತಿದೆ. ಸೆಪ್ಟೆಂಬರ್ 24ರಂದು ಹೈಕೋರ್ಟ್ ಮಾಡಿರುವ ಆದೇಶಕ್ಕೂ ಮುನ್ನ ನಡೆದಿರುವ ಘಟನೆಗಳನ್ನು ಹೇಳಲಾಗುತ್ತಿದೆ” ಎಂದರು.
ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು “ಅರ್ಜಿದಾರರು ಏನೇ ಹೇಳಬೇಕೆಂದಿದ್ದರು ಪ್ರತ್ಯುತ್ತರ ದಾಖಲಿಸಬೇಕು” ಎಂದರು.