ಕಳೆ ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್‌ಡಿಎಲ್) ಕಚ್ಚಾ ತೈಲ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಜೆಪಿ ಮಾಜಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಮತ್ತು ಎಸ್ ಸುರೇಂದ್ರ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಈಚೆಗೆ ಆರೋಪ ಮುಕ್ತಗೊಳಿಸಿದೆ.
ಎರಡನೇ ಆರೋಪಿ ಬಿಡಬ್ಲ್ಯುಎಸ್‌ಎಸ್‌ಬಿ ಆರ್ಥಿಕ ಸಲಹೆಗಾರ ಮತ್ತು ಪ್ರಧಾನ ಲೆಕ್ಕಪರಿಶೋಧಕ ಪ್ರಶಾಂತ್ ಕುಮಾರ್ ಎಂ ವಿ ಅಲಿಯಾಸ್ ಪ್ರಶಾಂತ್ ಮಾಡಾಳ್ ಮತ್ತು ಮೂರನೇ ಆರೋಪಿ ಎಸ್ ಸುರೇಂದ್ರ ಸಲ್ಲಿಸಿದ್ದ ಅರ್ಜಿಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಪುರಸ್ಕರಿಸಿದ್ದಾರೆ.
“ಇದೊಂದು ವಿಶಿಷ್ಟ ಪ್ರಕರಣವಾಗಿದ್ದು, ಆರೋಪಗಳಲ್ಲಿ ನಿರ್ದಿಷ್ಟತೆ ಕಾಣುತ್ತಿಲ್ಲ. ಗೊಂದಲ ಮತ್ತು ವಿರೋಧಾಭಾಸಗಳಿಂದ ಪ್ರಕರಣ ತುಂಬಿದೆ. ದೂರಿನಲ್ಲಿ ವ್ಯತ್ಯಯಗಳಿಂದಾಗಿ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದ್ದು, ಆರೋಪ ಪಟ್ಟಿಯಲ್ಲಿನ ಆರೋಪಗಳಿಗೆ ವಿರುದ್ಧವಾಗಿವೆ. ಆರೋಪವು ನಂಬಿಕೆಗೆ ಬದಲಾಗಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ” ಎಂದು ನ್ಯಾಯಾಲಯ ವಿವರಿಸಿದೆ.
ಆರೋಪಿಗಳಾದ ಪ್ರಶಾಂತ್ ಮತ್ತು ಸುರೇಂದ್ರ ಅವರನ್ನು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 7(A) ಮತ್ತು 12ರ ಆರೋಪದಿಂದ ಮುಕ್ತಗೊಳಿಸಲಾಗಿದೆ. ಒಂದೊಮ್ಮೆ ಈಗಾಗಲೇ ದೂರುದಾರರಿಗೆ 40 ಲಕ್ಷ ರೂಪಾಯಿ ಪಾವತಿಸಿದ್ದರೆ ಮೇಲ್ಮನವಿ ಅವಧಿ ಮುಗಿದ ಬಳಿಕ 40 ಲಕ್ಷ ರೂಪಾಯಿಯನ್ನು ಸರ್ಕಾರದ ಬೊಕ್ಕಸಕ್ಕೆ ತುಂಬಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ದೂರುದಾರರು ಸ್ಮಾರ್ಟ್ ವಾಚ್‌ನಲ್ಲಿ ದಿನಾಂಕ ಮತ್ತು ಸಮಯ ಸೆಟ್ ಮಾಡಿರದ ಕಾರಣ ರೆಕಾರ್ಡಿಂಗ್‌ನಲ್ಲಿ 2-2-2023 ಎಂದು ರೆಕಾರ್ಡ್ ಆಗಿರುತ್ತದೆ ಎಂಬುದನ್ನು ನಂಬಲಾಗದು ಎಂದು ನ್ಯಾಯಾಲಯ ಹೇಳಿದೆ.
ಪ್ರಶಾಂತ್ ಮಾಡಾಳ್ ಅವರನ್ನು 2023ರ ಜನವರಿ 12ರ ಸಂಜೆ 5.30ಕ್ಕೆ ಭೇಟಿ ಮಾಡಿಲ್ಲ ಎಂಬುದನ್ನು ವಾಟ್ಸಾಪ್ ಚಾಟ್ ಖಾತರಿಪಡಿಸುತ್ತದೆ. ಇದು ಕೆಎಸ್‌ಡಿಎಲ್‌ನಿಂದ ಟೆಂಡರ್ ಸಂಬಂಧಿತ ಕೆಲಸ ಮಾಡಿಸಲು ಪ್ರಶಾಂತ್ ಲಂಚ ಕೇಳಿಲ್ಲ ಎಂಬುದನ್ನು ನಿರ್ಧರಿಸಲು ಪ್ರಮುಖ ಸಾಕ್ಷಿಯಾಗಿದೆ. ಇದು 12.1.2023ರಂದು ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಪ್ರಾಸಿಕ್ಯೂಷನ್ ವಾದವನ್ನು ತಲೆಕೆಳಗಾಗಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚು ಗೌಪ್ಯತೆ ಕಾಪಾಡಿಕೊಳ್ಳುವುದು ಸಂಬಂಧ ಇಲಾಖೆ ಮತ್ತು ಸಮಿತಿಗಳ ಕೆಲಸವಾಗಿದೆ. ಟೆಂಡರ್ ಸಂಬಂಧಿತ ಮಾಹಿತಿಯ ಸೋರಿಕೆ ಮತ್ತು ಮೂರನೇ ವ್ಯಕ್ತಿಗಳಾದ ಪ್ರಶಾಂತ್ ಮಾಡಾಳ್‌ರಂಥವರು ಅಧಿಕಾರಿಗಳು ಭಾಗಿಯಾಗದೇ ಮಧ್ಯಪ್ರವೇಶಿಸಲಾಗದು ಎಂದು ನ್ಯಾಯಾಲಯ ಅನುಮಾನ ವ್ಯಕ್ತಪಡಿಸಿದೆ.
2023ರ ಡಿಸೆಂಬರ್ 20ರಂದು ಕರ್ನಾಟಕ ಹೈಕೋರ್ಟ್ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಪ್ರಶ್ನಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶ್ರೇಯಸ್ ಕಶ್ಯಪ್ ಅವರು ಕೆ ಆರ್ ರಸ್ತೆಯಲ್ಲಿ ಕೆಮಿಕಲ್ಸ್ ಕಾರ್ಪೊರೇಶನ್ ಎಂಬ ಪಾಲುದಾರಿಕೆ ಕಂಪೆನಿ ಹೊಂದಿದ್ದು, ಅವರ ಪರಿಚಯಸ್ಥರಾದ ಟಿ ಎ ಎಸ್ ಮೂರ್ತಿ ಅವರು ಚಾಮರಾಜಪೇಟೆಯಲ್ಲಿ ಡೆಲಿಸಿಯಾ ಕೆಮಿಕಲ್ಸ್ ಎಂಬ ಪಾಲುದಾರಿಕೆ ಕಂಪೆನಿ ಹೊಂದಿದ್ದಾರೆ. ಈ ಕಂಪೆನಿಗಳು ಕೆಎಸ್‌ಡಿಎಲ್‌ಗೆ ರಾಸಾಯನಿಕ ಆಯಿಲ್ ಪೂರೈಸಲು 2023ರ ಜನವರಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದವು. ಈ ಸಂಬಂಧ ಕಾರ್ಯಾದೇಶ ಮತ್ತು ಹಣ ಬಿಡುಗಡೆ ಮಾಡಿಸಲು ₹81 ಲಕ್ಷ ಲಂಚ ನೀಡುವಂತೆ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಶ್ರೇಯಸ್ ಕಶ್ಯಪ್ ಬೆಂಗಳೂರಿನ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ಕುಮಾರ ಪಾರ್ಕ್‌ನ ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರಶಾಂತ್ ಅವರ ಖಾಸಗಿ ಕಚೇರಿಗೆ ಗುತ್ತಿಗೆದಾರ ₹40 ಲಕ್ಷ ಲಂಚದ ಹಣ ತಲುಪಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣ ಜಪ್ತಿ ಮಾಡಿದ್ದರು.