[‌ಮಾಡಾಳ್‌ ಪ್ರಕರಣ ರದ್ದು] ದೂರಿನಲ್ಲಿ ವಿರೂಪಾಕ್ಷಪ್ಪ ಲಂಚಕ್ಕೆ ಬೇಡಿಕೆ, ಸ್ವೀಕಾರ ವಿಚಾರವೇ ಇಲ್ಲ: ಹೈಕೋರ್ಟ್‌

ಇಡೀ ದೂರಿನಲ್ಲಿ ಮಾಡಾಳ್‌ ಹೆಸರೇ ಪ್ರಸ್ತಾಪವಾಗಿಲ್ಲ. ಮಾಡಾಳ್‌ ವಿರೂಪಾಕ್ಷಪ್ಪ ಅವರ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್‌ 7(ಎ) ಮತ್ತು (ಬಿ) ಅನ್ವಯಿಸುವ ಯಾವುದೇ ಆರೋಪವಿಲ್ಲ ಎಂದಿರುವ ಹೈಕೋರ್ಟ್‌.
Madal Virupakshappa
Madal Virupakshappa

ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಭಾರಿ ಸದ್ದು ಮಾಡಿದ್ದ ಬಿಜೆಪಿ ಮಾಜಿ ಶಾಸಕ ಕೆ ಮಾಡಾಳ್‌ ವಿರೂಪಾಕ್ಷಪ್ಪ ಅವರ ವಿರುದ್ಧದ ಲಂಚ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್‌ಡಿಎಲ್) ಕಚ್ಚಾ ತೈಲ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿತ್ತು.

“ಇಡೀ ದೂರಿನಲ್ಲಿ ಮಾಡಾಳ್‌ ವಿರೂಪಾಕ್ಷಪ್ಪ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಅಥವಾ ಸ್ವೀಕರಿಸಿದ್ದರು ಎಂಬ ವಿಚಾರವೇ ಇಲ್ಲ. ಹೀಗಿರುವಾಗ ಅವರ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಹೇಗೆ ಅನುಮತಿಸಬೇಕು ಎಂಬುದೇ ಅರ್ಥವಾಗುತ್ತಿಲ್ಲ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿದೆ.

“ಮಾಡಾಳ್‌ ಪುತ್ರ ಹಾಗೂ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಬೆಂಗಳೂರಿನ ಜಲ ಮಂಡಳಿಯಲ್ಲಿ ಪ್ರಧಾನ ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್‌, ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಅಥವಾ ಪಡೆದಿರುವುದಕ್ಕೆ ಮೇಲ್ನೋಟಕ್ಕೆ ಅಪರಾಧಿಯಾಗಿದ್ದಾರೆ. ಇಡೀ ದೂರಿನಲ್ಲಿ ಮಾಡಾಳ್‌ ಹೆಸರೇ ಪ್ರಸ್ತಾಪವಾಗಿಲ್ಲ. ಮಾಡಾಳ್‌ ವಿರೂಪಾಕ್ಷಪ್ಪ ಅವರ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್‌ 7(ಎ) ಮತ್ತು (ಬಿ) ಅನ್ವಯಿಸುವ ಯಾವುದೇ ಆರೋಪವಿಲ್ಲ” ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ.

“ಲೋಕಾಯುಕ್ತ ಪರ ವಕೀಲರು ಪುತ್ರ (ಪ್ರಶಾಂತ್‌) ಸಿಲುಕಿರುವ ಪ್ರಕರಣದಲ್ಲಿ ತಂದೆ (ಮಾಡಾಳ್‌) ಭಾಗಿಯಾಗಿಲ್ಲ ಎಂದು ಹೇಳಲಾಗದು. ಹೀಗಾಗಿ, ನೈತಿಕ ಹೊಣೆಗಾರಿಕೆ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿಯಲು ಅನುಮತಿಸಬೇಕು ಎಂದು ಕೋರಿರುವುದನ್ನು ಒಪ್ಪಲಾಗದು. ಇದು ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ಆಗಿರುವುದರಿಂದ ಕನಿಷ್ಠ ಪಕ್ಷ ಮೇಲ್ನೋಟಕ್ಕೆ ಕಾಣುವ ದಾಖಲೆಗಳು ಇರಬೇಕಾಗುತ್ತದೆ. ದೂರಿನಲ್ಲಿ ಯಾವುದೇ ಆರೋಪಿಯ ವಿರುದ್ಧ ಅಸ್ಪಷ್ಟ ಅಥವಾ ನಿರಾಧಾರ ಆರೋಪಗಳು ಅಪರಾಧವನ್ನು ನಿರ್ನಾಮ ಮಾಡುತ್ತವೆ. ಆಕ್ಷೇಪಾರ್ಹವಾದ ದೂರಿನಲ್ಲಿ ಮಾಡಾಳ್‌ ವಿರುದ್ಧ ಮಾತ್ರ ಅಸ್ಪಷ್ಟ ಮತ್ತು ನಿರಾಧಾರ ಆರೋಪಗಳು ಇವೆ” ಎಂದು ನ್ಯಾಯಾಲಯ ಬೊಟ್ಟು ಮಾಡಿದೆ.

“ಮಾಡಾಳ್‌ ಅವರು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದು, ಅವರು ಯಾವುದೇ ರೀತಿಯಲ್ಲೂ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಅವರ ಸಹೋದ್ಯೋಗಿಗಳ ಮೂಲಕ ಟೆಂಡರ್‌ ಪ್ರಕ್ರಿಯೆ ನಡೆಯುತ್ತದೆ. ದೂರಿನ ಭಾಗವಾದ ಟೆಂಡರ್‌ ದಾಖಲೆಯನ್ನೂ ನ್ಯಾಯಾಲಯದ ಮುಂದೆ ಇಡಲಾಗಿದೆ. ಇಡೀ ಪ್ರಕ್ರಿಯೆಯಲ್ಲಿ ಮಾಡಾಳ್‌ ಅವರು ಇಲ್ಲವೇ ಇಲ್ಲ. ಈ ಎಲ್ಲಾ ವಿಚಾರಗಳ ಮಧ್ಯೆಯೂ ಮಾಡಾಳ್‌ ಅವರ ವಿರುದ್ಧ ಪ್ರಕ್ರಿಯೆ ಮುಂದುವರಿಯಲು ಅವಕಾಶ ಮಾಡಿಕೊಡುವುದು ಕಾನೂನಿನ ದುರ್ಬಳಕೆಯಾಗಲಿದ್ದು, ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

“ಲಂಚಕ್ಕೆ ಬೇಡಿಕೆ ಮತ್ತು ಅದನ್ನು ಪಡೆದಿರುವುದಕ್ಕೆ ಮೇಲ್ನೋಟಕ್ಕೆ ಪ್ರಶಾಂತ್‌ ಅಪರಾಧಿಯಾಗಿದ್ದು, ಪ್ರಶಾಂತ್‌ ಮನೆ ಮತ್ತು ಕಚೇರಿಯಲ್ಲಿ ಪತ್ತೆಯಾಗಿರುವ ಹಣಕ್ಕೆ ಅವರು ಉತ್ತರಿಸಬೇಕಿದೆ. ಈ ಯಾವುದೇ ವಿಚಾರದಲ್ಲಿ ಮಾಡಾಳ್‌ ಅವರು ಇಲ್ಲ. ಮಾಡಾಳ್‌ ಅವರು ಪ್ರಶಾಂತ್‌ ಅವರ ತಂದೆ ಆಗಿರುವ ಮಾತ್ರಕ್ಕೆ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿಸಲಾಗದು” ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಮಾಡಾಳ್‌ ವಿರುದ್ಧದ ಎಫ್ಐಆರ್‌ ಮತ್ತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಬಾಕಿಯಿದ್ದ ವಿಚಾರಣೆಯನ್ನು ರದ್ದುಪಡಿಸಿದೆ.

ತೀರ್ಪಿನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ವಿರೂಪಾಕ್ಷಪ್ಪ ಅವರ ಪ್ರಕರಣಕ್ಕೆ ಮಾತ್ರ ಅನ್ವಯಿಸಲಿದೆ. ಇದು ಪ್ರಕರಣದ ಇತರೆ ಆರೋಪಿಗಳ ವಿರುದ್ಧದ ತನಿಖೆ ಮತ್ತು ಯಾವುದೇ ನ್ಯಾಯಾಲಯದ ವಿಚಾರಣೆ ಮೇಲೆ ಪ್ರಭಾವ ಬೀರುವುದಿಲ್ಲ ಹಾಗೂ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಾಡಾಳ್‌ ಅವರು ಲಂಚಕ್ಕೆ ಬೇಡಿಕೆ ಅಥವಾ ಪಡೆದಿರುವ ಸಂದರ್ಭದಲ್ಲಿ ಇರಲಿಲ್ಲ ಎಂಬುದಕ್ಕೆ ನ್ಯಾಯಾಲಯ ಉತ್ತರಿಸಿರುವುದರಿಂದ ಕಾಯಿದೆಯ ಸೆಕ್ಷನ್‌ 17ಎ ಅಡಿ ಮಾಡಾಳ್‌ ವಿರುದ್ಧ ಪ್ರಕರಣದ ದಾಖಲಿಸಲು ಪೂರ್ವಾನುಮತಿ ಪಡೆಯಬೇಕಾಗಿತ್ತೆ ಎಂಬ ವಿಚಾರಕ್ಕೆ ಹೋಗುವ ಅಗತ್ಯ ಕಾಣುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಾಡಾಳ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಅವರು “ಅರ್ಜಿದಾರರು ಲಂಚಕ್ಕೆ ಬೇಡಿಕೆಯನ್ನೂ ಇಟ್ಟಿಲ್ಲ ಅಥವಾ ಲಂಚದ ಹಣವನ್ನು ಪಡೆದೂ ಇಲ್ಲ. ಮಾಡಾಳ್‌ ಅವರು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದರು ಮತ್ತು ಎರಡನೇ ಆರೋಪಿ ಹಾಗೂ ಪುತ್ರ ಪ್ರಶಾಂತ್‌ ತಂದೆಯಾಗಿದ್ದು, ಅವರ ಪರವಾಗಿ ಹಣ ಪಡೆದಿರಬಹುದು ಎಂಬ ಕಾರಣಕ್ಕೆ ಅವರನ್ನು ಅಪರಾಧದ ಜಾಲಕ್ಕೆ ಎಳೆದು ತರಲಾಗಿದೆ. ಮಾಡಾಳ್‌ ಅವರು ಸಾರ್ವಜನಿಕ ಸೇವಕರಾಗಿದ್ದು, ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್‌ 17ಎ ಅಡಿ ಮಾಡಾಳ್‌ ವಿರುದ್ಧ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಪೂರ್ವಾನುಮತಿ ಪಡೆದಿಲ್ಲ. ಹೀಗಾಗಿ, ಪ್ರಕರಣ ವಜಾ ಮಾಡಬೇಕು” ಎಂದು ಕೋರಿದ್ದರು.

“ಮಾಡಾಳ್‌ ಅವರು ಪ್ರಕರಣದಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಲ್ಲವಾದ್ದರಿಂದ ಇದು ಟ್ರ್ಯಾಪ್‌ ಪ್ರಕರಣವಲ್ಲ. ಪ್ರಶಾಂತ್‌ ಅವರನ್ನು ಟ್ರ್ಯಾಪ್‌ನಲ್ಲಿ ಬೀಳಿಸಲಾಗಿದೆ. ಮಾಡಾಳ್‌ ಅವರ ಮನೆಯಲ್ಲಿ ಶೋಧ ನಡೆಸುವುದು ಟ್ರ್ಯಾಪ್‌ ಆಗುವುದಿಲ್ಲ. ಹೀಗಾಗಿ, ಕಾಯಿದೆಯ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದನ್ನು ಪಾಲಿಸದಿದ್ದರೆ ಎಫ್‌ಐಆರ್‌ ವಜಾ ಮಾಡಬೇಕಾಗುತ್ತದೆ” ಎಂದು ಪ್ರತ್ಯುತ್ತರಿಸಿದ್ದರು.

ಲೋಕಾಯುಕ್ತ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ಲಂಚಕ್ಕೆ ಬೇಡಿಕೆ ಅಥವಾ ಪಡೆಯುವಾಗ ಮಾಡಾಳ್ ಸ್ಥಳದಲ್ಲಿ ಇರದಿದ್ದರೂ ಅವರು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದರು. ಮಾಡಾಳ್‌ ಪುತ್ರ ಅವರ ಪರವಾಗಿ ಲಂಚಕ್ಕೆ ಬೇಡಿಕೆ ಇಟ್ಟು, ಪಡೆದಿದ್ದಾರೆ. ಲಂಚದ ಹಣ ಮಾಡಾಳ್‌ ಅವರಿಗಾ ಅಥವಾ ಪ್ರಶಾಂತ್‌ ಅವರಿಗಾ ಎಂಬುದು ತನಿಖೆಯಿಂದ ತಿಳಿಯಬೇಕು. ಇದು ಟ್ರ್ಯಾಪ್‌ ಪ್ರಕರಣವಾಗಿದ್ದು, ಟ್ರ್ಯಾಪ್‌ ಪ್ರಕರಣಗಳಲ್ಲಿ ಕಾಯಿದೆಯ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಪಡೆಯುವುದು ಕಾನೂನಲ್ಲ. ಸೆಕ್ಷನ್‌ 17ಎ ಪ್ರಾವಿಸೋ ಪ್ರಕಾರ ಟ್ರ್ಯಾಪ್‌ ಪ್ರಕರಣಗಳಲ್ಲಿ ಪೂರ್ವಾನುಮತಿ ಪಡೆಯದೇ ಅಪರಾಧ ನೋಂದಾಯಿಸಲು ಅವಕಾಶವಿದೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶ್ರೇಯಸ್‌ ಕಶ್ಯಪ್‌ ಅವರು ಕೆ ಆರ್‌ ರಸ್ತೆಯಲ್ಲಿ ಕೆಮಿಕಲ್ಸ್ ಕಾರ್ಪೊರೇಶನ್‌ ಎಂಬ ಪಾಲುದಾರಿಕೆ ಕಂಪೆನಿ ಹೊಂದಿದ್ದು, ಅವರ ಪರಿಚಯಸ್ಥರಾದ ಟಿ ಎ ಎಸ್‌ ಮೂರ್ತಿ ಅವರು ಚಾಮರಾಜಪೇಟೆಯಲ್ಲಿ ಡೆಲಿಸಿಯಾ ಕೆಮಿಕಲ್ಸ್‌ ಎಂಬ ಪಾಲುದಾರಿಕೆ ಕಂಪೆನಿ ಹೊಂದಿದ್ದಾರೆ. ಈ ಕಂಪೆನಿಗಳು ಕೆಎಸ್‌ಡಿಎಲ್‌ಗೆ ರಾಸಾಯನಿಕ ಆಯಿಲ್‌ ಪೂರೈಸಲು 2023ರ ಜನವರಿಯಲ್ಲಿ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದವು. ಈ ಸಂಬಂಧ ಕಾರ್ಯಾದೇಶ ಮತ್ತು ಹಣ ಬಿಡುಗಡೆ ಮಾಡಿಸಲು ₹81 ಲಕ್ಷ ಲಂಚ ನೀಡುವಂತೆ ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್‌ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಶ್ರೇಯಸ್‌ ಕಶ್ಯಪ್‌ ಬೆಂಗಳೂರಿನ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ದೂರು ನೀಡಿದ್ದರು.

ಕುಮಾರ ಪಾರ್ಕ್‌ನ ಕ್ರೆಸೆಂಟ್‌ ರಸ್ತೆಯಲ್ಲಿರುವ ಪ್ರಶಾಂತ್‌ ಅವರ ಖಾಸಗಿ ಕಚೇರಿಗೆ ಗುತ್ತಿಗೆದಾರ ₹40 ಲಕ್ಷ ಲಂಚದ ಹಣ ತಲುಪಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಆನಂತರ ಶೋಧನೆಯ ಸಂದರ್ಭದಲ್ಲಿ ಪ್ರಶಾಂತ್‌ ಅವರ ಮನೆಯಲ್ಲಿ 6.10 ಕೋಟಿ ಹಣ ಪತ್ತೆಯಾದ ಆರೋಪ ಸಂಬಂಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಗ್ರಹ ಕಾಯಿದೆಯ-1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾರ್ಚ್‌ 2ರಂದು ಎಫ್‌ಐಆರ್ ದಾಖಲಿಸಿದ್ದರು.

Attachment
PDF
K Madal Virupakashappa Vs State of Karnataka.pdf
Preview
Kannada Bar & Bench
kannada.barandbench.com