Justice SM Subramaniam
Justice SM Subramaniam  
ಸುದ್ದಿಗಳು

ನಿರ್ಲಕ್ಷ್ಯ ತೋರಿದ ಸಾರ್ವಜನಿಕ ಸೇವಕರಿಂದಲೇ ಸರ್ಕಾರಿ ಖಜಾನೆಗೆ ಉಂಟಾದ ನಷ್ಟ ವಸೂಲಿ ಮಾಡಬೇಕು: ಮದ್ರಾಸ್ ಹೈಕೋರ್ಟ್

Bar & Bench

ಸರ್ಕಾರಿ ಅಧಿಕಾರಿ ಅಥವಾ ಸಾರ್ವಜನಿಕ ನೌಕರನ ಕರ್ತವ್ಯಲೋಪದಿಂದ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಸಂದರ್ಭ ಬಂದರೆ ಆಗ ಅಂತಹ ತಪ್ಪಿತಸ್ಥ ಅಧಿಕಾರಿಯಿಂದಲೇ ಸರ್ಕಾರಿ ಖಜಾನೆಗೆ ಉಂಟಾದ ನಷ್ಟ ವಸೂಲಿ ಮಾಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. [ದಿ ಡೀನ್‌ ಮತ್ತು ವಿಜಯಕುಮಾರಿ ನಡುವಣ ಪ್ರಕರಣ].

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ ಎಂ ಸುಬ್ರಮಣ್ಯಂ ಅವರು ಶುಕ್ರವಾರ ನೀಡಿದ ತೀರ್ಪಿನಲ್ಲಿ “ಇಂತಹ ಸಂದರ್ಭಗಳಲ್ಲಿ, ಸಾರ್ವಜನಿಕ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದರೆ, ಸರ್ಕಾರದ ಬೊಕ್ಕಸಕ್ಕೆ ಉಂಟಾದ ಹಣಕಾಸು ನಷ್ಟವನ್ನು ಅದಕ್ಕೆ ಜವಾಬ್ದಾರರಾದ ಆ ಸರ್ಕಾರಿ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ. ತಮಿಳುನಾಡಿನ ತಿರುವರೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದು ಸಲ್ಲಿಸಿದ್ದ ಸಿವಿಲ್ ಪರಿಷ್ಕರಣೆ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.  

ಆಸ್ಪತ್ರೆಯ ಕೆಲವರು ಶಸ್ತ್ರಚಿಕಿತ್ಸೆ ವೇಳೆ ಲೋಪ ಎಸಗಿದ್ದರಿಂದ ರೋಗಿಯ ಎರಡೂ ಕಣ್ಣು ಕಾಣದಂತಾಗಿತ್ತು. ಸಂತ್ರಸ್ತ ರೋಗಿ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಸಂತ್ರಸ್ತರಿಗೆ  ₹5 ಲಕ್ಷ ಪರಿಹಾರ ನೀಡುವಂತೆ ಆಸ್ಪತ್ರೆಗೆ ಆದೇಶಿಸಿತ್ತು. ಆದರೆ ಆಸ್ಪತ್ರೆ ಇತ್ತ ಮೇಲ್ಮನವಿಯನ್ನೂ ಸಲ್ಲಿಸಿರಲಿಲ್ಲ. ಅತ್ತ ಪರಿಹಾರದ ಮೊತ್ತವನ್ನೂ ನೀಡಿರಲಿಲ್ಲ. ಹೀಗಾಗಿ ಆಸ್ಪತ್ರೆಯ ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೆಪ್ಟೆಂಬರ್ 2022ರಲ್ಲಿ ಕೆಳ ನ್ಯಾಯಾಲಯ ಆದೇಶಿಸಿತು. ಈ ಆದೇಶ ಪ್ರಶ್ನಿಸಿ ಆಸ್ಪತ್ರೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಆಸ್ಪತ್ರೆ ನಿರ್ಲಕ್ಷ್ಯವಹಿಸಿರುವುದು ಸ್ಪಷ್ಟವಾಗಿದ್ದು ಸಂತ್ರಸ್ತ  ಸಂಪೂರ್ಣ ದೃಷ್ಟಿ ಕಳೆದುಕೊಳ್ಳುವಂತಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ  ಮೇಲ್ಮನವಿ ಸಲ್ಲಿಸದಿರುವ ಅಂಶ ಪರಿಗಣಿಸಿ ಅದು ಪರಿಹಾರ ಮೊತ್ತ ಪಾವತಿಸಬೇಕು ಎಂದು ತೀರ್ಪಿನ ವೇಳೆ ನ್ಯಾ. ಸುಬ್ರಮಣಿಯಂ ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ವಾದಿಸಿದ್ದ ಆದರೆ ತಡವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅದು ವಜಾಗೊಳಿಸಿತು.