ಕಾನೂನಿನ ಯಾವ ನಿಬಂಧನೆಯಡಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಅನುಮತಿಸಲಾಗಿದೆ ಮತ್ತು ಅದಕ್ಕೆ ಪರವಾನಗಿ ನೀಡುವ ಪ್ರಾಧಿಕಾರ ಯಾವುದು, ಎಷ್ಟು ದಿನಗಳ ಮಟ್ಟಿಗೆ ಪರವಾನಗಿ ನೀಡಬಹುದಾಗಿದೆ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮಸೀದಿಗಳಲ್ಲಿ ಕಾನೂನಿನ ಯಾವ ನಿಬಂಧನೆಯಡಿ ಧ್ವನಿವರ್ಧಕ ಬಳಕೆಗೆ ಶಾಶ್ವತ ಪರವಾನಗಿ ನೀಡಬಹುದಾಗಿದೆ ಎಂಬ ವಿಸ್ತೃತ ವಿಚಾರ ನಮ್ಮ ಮುಂದಿದೆ. ನಾವು ಯಾವುದೇ ವ್ಯಕ್ತಿ ಅಥವಾ ಯಾರ ವಿರುದ್ಧವೂ ಇಲ್ಲ ಎಂದು ನ್ಯಾಯಾಲಯವು ವಿಚಾರಣೆ ವೇಳೆ ತಿಳಿಸಿತು.
ಬೆಂಗಳೂರಿನ ಕೆಲವು ಮಸೀದಿಗಳು ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿ ಪಿ ರಾಕೇಶ್ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಗೂ ಸಂಬಂಧಿತ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ಧ್ವನಿವರ್ಧಕ ಬಳಸಲು ಯಾರಿಗೆ ಅನುಮತಿಸಬೇಕು ಅಥವಾ ಅನುಮತಿಸಬಾರದು ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಇದು ಕಾನೂನಿನ ಪ್ರಕಾರ ಇರಬೇಕು. ಧ್ವನಿವರ್ಧಕ ಬಳಸಲು ಪರವಾನಗಿ ನೀಡಲು ಬೇರೆ ನಿಬಂಧನೆಗಳೇನಾದರೂ ಇವೆಯೇ? ಕಾನೂನುಬಾಹಿರವಾಗಿ ಧ್ವನಿವರ್ಧಕ ಬಳಸುತ್ತಿಲ್ಲ ಎಂಬುದನ್ನು ತಿಳಿಯಲು ಸರ್ಕಾರ ಏನು ಪ್ರಯತ್ನ ಮಾಡಿದೆ?” ಎನ್ನುವುದನ್ನು ತಿಳಿಸಲು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
“ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಸರ್ಕಾರದ ವಕೀಲರು ಕೋರಿದ್ದಾರೆ. ಅದಕ್ಕೆ ಅನುಮತಿಸಲಾಗಿದ್ದು, ಪ್ರಕರಣದ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್ ಪ್ರಭು ಅವರು “ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಪೊಲೀಸರು ಧ್ವನಿ ವರ್ಧಕಗಳನ್ನು ಬಳಸಲು ಪರವಾನಗಿ ನೀಡುತ್ತಿದ್ದಾರೆ. ಪರವಾನಗಿ ಪಡೆದು ಧ್ವನಿವರ್ಧಕ ಬಳಕೆ ಮಾಡುತ್ತಿರುವುದು ಒಂದೆಡೆಯಾದರೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಕ್ರಮವಾಗಿ ಧ್ವನಿವರ್ಧಕ ಬಳಕೆ ಮಾಡಿದರೆ 10 ಸಾವಿರ ರೂಪಾಯಿ ದಂಡ ವಿಧಿಸಬೇಕು ಎಂಬ ನಿರ್ದೇಶನವಿದ್ದರೂ ಅದನ್ನು ಮಾಡುತ್ತಿಲ್ಲ" ಎಂದು ಗಮನಸೆಳೆದರು.
ಮುಂದುವರೆದು, "ಅಕ್ರಮ ಧ್ವನಿವರ್ಧಕಗಳನ್ನು ವಶಕ್ಕೆ ಪಡೆಯುತ್ತಿಲ್ಲ. ಕಾನೂನು ಪ್ರಕಾರ ಏನು ಮಾಡಲಾಗುತ್ತಿಲ್ಲವೋ ಅದನ್ನು ತಾರತಮ್ಯ ವಿಧಾನದ ಮೂಲಕ ಪೊಲೀಸರು ಮಾಡುತ್ತಿದ್ದಾರೆ. ಕೆಲವು ಪ್ರತಿವಾದಿಗಳು ಧ್ವನಿವರ್ಧಕಗಳನ್ನು ತೆರವುಗೊಳಿಸಿಲ್ಲ. ಬೇಕಾದರೆ ಅವರ ಹೆಸರುಗಳನ್ನು ನಾನು ಹೇಳಬಲ್ಲೆ. ಎಷ್ಟು ಧ್ವನಿವರ್ಧಕಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಎಷ್ಟು ದಂಡ ವಸೂಲಿ ಮಾಡಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ತಿಳಿಸಬೇಕು” ಎಂದು ಒತ್ತಾಯಿಸಿದರು.
“ಪ್ರತಿವಾದಿಗಳು ಧ್ವನಿವರ್ಧಕಗಳನ್ನು ತೆರವು ಮಾಡುವುದಿಲ್ಲ ಎಂದು ದಾಖಲೆಯಲ್ಲಿ ಉಲ್ಲೇಖಿಸಿ ಹೇಳಿದ್ದಾರೆ. ವಕ್ಫ್ ಮಂಡಳಿ ಸುತ್ತೋಲೆ ಹೊರಡಿಸಿದ್ದು, ಯಾವಾಗಬೇಕಾದರೂ ಧ್ವನಿವರ್ಧಕ ಬಳಸಲು ವಕ್ಫ್ ಮಂಡಳಿ ಅನುಮತಿಸಿದೆ ಎಂದು ಆಕ್ಷೇಪಣೆಯಲ್ಲಿ ವಿವರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಯನ್ನೂ ಅವರು ಸಲ್ಲಿಸಿದ್ದಾರೆ. ಒಂದು ಕಡೆ ರಾಜ್ಯ ಸರ್ಕಾರ ತಾನು ಪರವಾನಗಿ ನೀಡುತ್ತಿಲ್ಲ ಎನ್ನುತ್ತಿದೆ. ಆದರೆ, ಪ್ರತಿವಾದಿಗಳು ಪರವಾನಗಿ ಪಡೆದಿರುವುದನ್ನು ಮುಂದಿಡುತ್ತಿದ್ದಾರೆ. ರಾಜ್ಯ ಸರ್ಕಾರದ ನಿಲುವಿನಲ್ಲಿ ಗೊಂದಲವಿದೆ. ಹೀಗಾಗಿ, ಧ್ವನಿವರ್ಧಕ ಬಳಕೆ ಮಾಡುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಫಿಡವಿಟ್ ಸಲ್ಲಿಸಲು ಆದೇಶಿಸಬೇಕು” ಎಂದು ಮನವಿ ಮಾಡಿದರು.
ಆಗ ಪೀಠವು “ಧ್ವನಿವರ್ಧಕ ಬಳಕೆಗೆ ಪೊಲೀಸರು ಶಾಶ್ವತ ಪರವಾನಗಿ ನೀಡುತ್ತಿದ್ದಾರೆ ಎಂಬುದು ಸೇರಿದಂತೆ ವಾಸ್ತವಿಕ ಅಂಶಗಳನ್ನು ಉಲ್ಲೇಖಿಸಿ ನೀವು ಯಾವುದಾದರೂ ಮನವಿ ಸಲ್ಲಿಸಿದ್ದೀರಾ? ರಾಜ್ಯ ಸರ್ಕಾರ ಪರವಾನಗಿ ನೀಡುತ್ತಿದೆ ಎಂದು ನೀವು ಹೇಳುತ್ತಿದ್ದೀರಿ. ಇದಕ್ಕೆ ಪುರಾವೆ ಏನಾದರೂ ಇದೆಯೇ?” ಎಂದು ಪ್ರಶ್ನಿಸಿತು.
ಇದಕ್ಕೆ ಶ್ರೀಧರ್ ಪ್ರಭು ಅವರು “ವಾಸ್ತವಿಕ ಅಂಶಗಳನ್ನು ಒಳಗೊಂಡ ದಾಖಲೆ ಸಲ್ಲಿಸಲು ನಮಗೆ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠವು ಧ್ವನಿವರ್ಧಕ ಬಳಕೆ ಮಾಡುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಫಿಡವಿಟ್ ಸಲ್ಲಿಸಲು ಆದೇಶಿಸಬೇಕು ಎಂಬ ಕೋರಿಕೆಯನ್ನು ನಿರಾಕರಿಸಿತು.
ಇತ್ತ ರಾಜ್ಯ ಸರ್ಕಾರವನ್ನು ಉದ್ದೇಶಿಸಿ ಪೀಠವು “2021ರ ನವೆಂಬರ್ 16ರ ಆದೇಶದ ಬಳಿಕ ಸರ್ಕಾರವು ಪ್ರತಿಕ್ರಿಯೆ ಸಲ್ಲಿಸಿದೆಯೇ? ಶಾಶ್ವತವಾಗಿ ಧ್ವನಿವರ್ಧಕ ಬಳಸಲು ಕಾನೂನಿನ ಯಾವ ನಿಬಂಧನೆಯಡಿ ಪರವಾನಗಿ ನೀಡಲಾಗಿದೆ. ಶಬ್ದ ಮಾಲಿನ್ಯ ಮತ್ತು ಪರಿಮಾಣ ನಿಯಂತ್ರಣ ನಿಯಮ 2000ದ ಪ್ರಕಾರ ರಾತ್ರಿ 10ರಿಂದ 12 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳ ಬಳಕೆಗೆ ಅನುಮತಿಸಬಹುದು. ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಸೀಮಿತ ಅವಧಿಗೆ, 15 ದಿನಕ್ಕೂ ಮೀರದಂತೆ ಮಾತ್ರ ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಿರುವಾಗ, ಕಾನೂನಿನ ಯಾವ ನಿಬಂಧನೆಯಡಿ ಮತ್ತು ಎಷ್ಟು ಅವಧಿಯವರೆಗೆ ಸರ್ಕಾರವು ಧ್ವನಿವರ್ಧಕ ಬಳಸಲು ಪರವಾನಗಿ ನೀಡಿದೆ? ನ್ಯಾಯಾಲಯದ ಆದೇಶಕ್ಕೆ ಸರ್ಕಾರದ ಪ್ರತಿಕ್ರಿಯೆ ಏನು? ರಾಜ್ಯ ಸರ್ಕಾರ ಎಂದಿನಿಂತೆ ಮೂಕ ಪ್ರೇಕ್ಷಕವಾಗಿದೆ” ಎಂದು ಮೌಖಿಕವಾಗಿ ಛೇಡಿಸಿತು.
“ಅಕ್ರಮವಾಗಿರುವ ಎಷ್ಟು ಧ್ವನಿವರ್ಧಕಗಳನ್ನು ತೆರವುಗೊಳಿಸಿದ್ದೀರಿ? ಆರ್ ಕೆ ನಗರ ಮತ್ತು ಕಲ್ಯಾಣ ನಗರ ಎರಡು ಕಡೆ ಮಾತ್ರ ಧ್ವನಿವರ್ಧಕ ಬಳಕೆ ತೆರವುಗೊಳಿಸಲಾಗಿದೆ ಎಂದು ವಸ್ತುಸ್ಥಿತಿ ವರದಿಯಲ್ಲಿ ತಿಳಿಸಲಾಗಿದೆ. ಒಂದು ದಿನ ಸಬ್ ಇನ್‌ಸ್ಪೆಕ್ಟರ್ ಧ್ವನಿವರ್ಧಕ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ತಮ್ಮ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ ಅಷ್ಟೆ. ರಾಜ್ಯ ಸರ್ಕಾರ ಸಲ್ಲಿಸಿರುವ ವಸ್ತುಸ್ಥಿತಿ ವರದಿಯ ಪ್ರಕಾರ ನಗರದಲ್ಲಿ ಕಾನೂನುಬಾಹಿರವಾಗಿ ಎಲ್ಲಿಯೂ ಧ್ವನಿವರ್ಧಕ ಬಳಸುತ್ತಿಲ್ಲ” ಎಂದರು.
ಪ್ರತಿವಾದಿಗಳ ಪರ ವಕೀಲ ಪಿ ಉಸ್ಮಾನ್ ಅವರು “ನಮ್ಮ ಕಕ್ಷಿದಾರರು ಧ್ವನಿವರ್ಧಕ ಬಳಸಲು ಅನುಮತಿ ಪಡೆದಿದ್ದಾರೆ” ಎಂದು ಪೀಠಕ್ಕೆ ವಿವರಿಸಿದರು.