ಯಾವ ಕಾನೂನಿನ ಅಡಿ ಮಸೀದಿಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿಸಲಾಗಿದೆ ಎಂದು ಹೈಕೋರ್ಟ್‌ ಪ್ರಶ್ನೆ

ಶಬ್ದ ಮಾಲಿನ್ಯ (ಸುಧಾರಣೆ ಮತ್ತು ನಿಯಂತ್ರಣ) ನಿಯಮಗಳು 2000 ಅನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೈಟ್‌ ಕ್ಲಬ್‌ಗಳು ಮತ್ತು ಸಂಸ್ಥೆಗಳ ಕಾರ್ಯುಚಟುವಟಿಕೆಯನ್ನು ಪರಿಗಣಿಸುವಂತೆ ಆದೇಶಿಸಿದ ಪೀಠ.
Karnataka High Court and Loud Speakers
Karnataka High Court and Loud Speakers

ತಮ್ಮ ಮುಂದೆ ಪ್ರತಿವಾದಿಗಳಾಗಿರುವ 16 ಮಸೀದಿಗಳಿಗೆ ಕಾನೂನಿನ ಯಾವ ಅಧಿನಿಯಮಗಳ ಅಡಿ ಧ್ವನಿವರ್ಧಕಗಳು ಮತ್ತು ಸಾರ್ವಜನಿಕ ಭಾಷಣಕ್ಕೆ ಬಳಸುವ ಪರಿಕರಗಳನ್ನು ಬಳಸಲು ಅನುಮತಿಸಲಾಗಿದೆ ಎಂದು ತಿಳಿಸುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. ಶಬ್ದ ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಅಂತಹ ಬಳಕೆಯನ್ನು ನಿರ್ಬಂಧಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯವು ಪ್ರಶ್ನಿಸಿದೆ.

ಬೆಂಗಳೂರಿನ ಕೆಲವು ಮಸೀದಿಗಳು ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿ ಪಿ ರಾಕೇಶ್‌ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಸಂಬಂಧಿತ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಕಾನೂನಿನ ಯಾವ ನಿಬಂಧನೆಗಳ ಅಡಿ ಪ್ರತಿವಾದಿ ಮಸೀದಿಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಭಾಷಣಕ್ಕೆ ಬಳಸುವ ಪರಿಕರಗಳನ್ನು ಬಳಸಲು ಅನುಮತಿಸಲಾಗಿದೆ. ಶಬ್ದ ಮಾಲಿನ್ಯ (ಸುಧಾರಣೆ ಮತ್ತು ನಿಯಂತ್ರಣ) ನಿಯಮಗಳು 2000ರ ಅಡಿ ಅದನ್ನು ನಿಯಂತ್ರಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರ ವಕೀಲ ಶ್ರೀಧರ್‌ ಪ್ರಭು ಅವರು “ಶಬ್ದ ಮಾಲಿನ್ಯ (ಸುಧಾರಣೆ ಮತ್ತು ನಿಯಂತ್ರಣ) ನಿಯಮಗಳು 2000ರ ಸೆಕ್ಷನ್‌ 5(3) ರ ಪ್ರಕಾರ ನಿರಂತರವಾಗಿ ಧ್ವನಿವರ್ಧಕಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಬಳಸುವ ಸಾಧನಗಳ ಬಳಕೆ ಅನುಮತಿಸಲಾಗದು. ಸೆಕ್ಷನ್‌ 5(3)ರ ಪ್ರಕಾರ ಧ್ವನಿವರ್ಧಕಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಬಳಸುವ ಪರಿಕರಗಳ (ಶಬ್ದ ಉಂಟು ಮಾಡುವ ಪರಿಕರಗಳ) ಬಳಕೆಗೆ ನಿರ್ಬಂಧವಿದೆ. ಸಾಂಸ್ಕೃತಿಕ, ಧಾರ್ಮಿಕ ಅಥವಾ ಹಬ್ಬ ಹರಿ ದಿನಗಳ ಸಂದರ್ಭದಲ್ಲಿ ಹದಿನೈದು ದಿನಗಳಿಗೂ ಹೆಚ್ಚು ಕಾಲ ಮೀರದಂತೆ ರಾತ್ರಿ ಸಂದರ್ಭದಲ್ಲಿ (ರಾತ್ರಿ 10ರಿಂದ ಮಧ್ಯರಾತ್ರಿ 12 ಗಂಟೆವರೆಗೆ) ಧ್ವನಿವರ್ಧಕ ಮತ್ತಿತರ ಸಾಧನಗಳ ಬಳಕೆಗೆ ಅನುಮತಿ ನೀಡಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕ ವಕ್ಫ್‌ ಮಂಡಳಿ ಸುತ್ತೋಲೆ ಆಧರಿಸಿ ಮಸೀದಿಗಳಲ್ಲಿ ಪ್ರತಿವಾದಿಗಳು ಧ್ವನಿವರ್ಧಕಗಳನ್ನು ಅಳವಡಿಸಿದ್ದಾರೆ. ಧ್ವನಿವರ್ಧಕ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಅನುಮತಿ ನೀಡಲು ವಕ್ಫ್‌ ಮಂಡಳಿ ಸಮರ್ಥ ಪ್ರಾಧಿಕಾರವಲ್ಲ” ಎಂದರು.

ಪ್ರತಿವಾದಿ ಮಸೀದಿಗಳನ್ನು ಪ್ರತಿನಿಧಿಸಿದ್ದ ವಕೀಲ ಪಿ ಉಸ್ಮಾನ್‌ ಅವರು “ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಅಗತ್ಯ ಅನುಮತಿ ಪಡೆಯಲಾಗಿದೆ. ಅನುಮತಿಸಿರುವ ಶಬ್ದ ಮೀರದಂತೆ ಧ್ವನಿವರ್ಧಕಗಳಿಗೆ ಸಾಧನಗಳನ್ನು ಅಳವಡಿಸಲಾಗಿದೆ. ಕಾಯಿದೆ ಅಡಿ ರಾತ್ರಿ 10ರಿಂದ ಬೆಳಗಿನ ಜಾವ 6 ಗಂಟೆಯವರೆಗೆ ಧ್ವನಿವರ್ಧಕ ಬಳಸದಂತೆ ನಿರ್ಬಂಧಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ಧ್ವನಿವರ್ಧಕ ಬಳಸುತ್ತಿಲ್ಲ” ಎಂದರು.

ವಾಹನಗಳು ಮತ್ತು ನೈಟ್‌ ಕ್ಲಬ್‌ಗಳಿಂದ ಶಬ್ದ ಮಾಲಿನ್ಯ

ಮೋಟಾರು ವಾಹನ ಕಾಯಿದೆಯ ನಿಯಮಗಳ ಅಡಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಸುಧಾರಿತ/ಹೆಚ್ಚು ಶಬ್ದ ಉಂಟು ಮಾಡುವ ಸೈಲೆನ್ಸರ್‌ಗಳನ್ನು ಅಳವಡಿಸುವುದರಿಂದ ಆಗುತ್ತಿರುವ ಶಬ್ದ ಮಾಲಿನ್ಯವನ್ನು ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.

Also Read
[ಬ್ರೇಕಿಂಗ್] ಕೃಷ್ಣ ಜನ್ಮಭೂಮಿಯಲ್ಲಿ ಈದ್ಗಾ ಮಸೀದಿ ತೆರವು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ಮಥುರಾ ನ್ಯಾಯಾಲಯ

“ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡ ಕಡೆ ನೆಲೆಸಿದರೆ ಸುಧಾರಿತ ಸೈಲೆನ್ಸರ್‌ಗಳನ್ನು ಅಳವಡಿಸಿರುವ ವಾಹನಗಳು ಉಂಟು ಮಾಡುವ ಶಬ್ದ ಮಾಲಿನ್ಯ ಎಷ್ಟರಮಟ್ಟಿಗೆ ಇರುತ್ತದೆ. ಅದನ್ನು ಸಹಿಸುವುದು ಎಷ್ಟು ಕಷ್ಟ ಎಂಬುದು ನಿಮಗೆ ತಿಳಿಯುತ್ತದೆ” ಎಂದು ಮೌಖಿಕವಾಗಿ ಹೇಳಿದ ಪೀಠವು ಇದಕ್ಕೆ ತಡೆಯೊಡ್ಡಲು ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸಿದೆ. ಇಂಥ ವಾಹನಗಳನ್ನು ಪತ್ತೆ ಹಚ್ಚಲು ಅಭಿಯಾನ ಆರಂಭಿಸಬೇಕು ಮತ್ತು ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.

“ಶಬ್ದ ಮಾಲಿನ್ಯ (ಸುಧಾರಣೆ ಮತ್ತು ನಿಯಂತ್ರಣ) ನಿಯಮಗಳು 2000 ಅನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೈಟ್‌ ಕ್ಲಬ್‌ಗಳು ಮತ್ತು ಸಂಸ್ಥೆಗಳ ಕಾರ್ಯುಚಟುವಟಿಕೆಯನ್ನು ಪರಿಗಣಿಸಬೇಕು. ಮುಂದಿನ ವಿಚಾರಣೆಯ ವೇಳೆಗೆ ಕ್ರಮಕೈಗೊಂಡ ವರದಿಯನ್ನು ಸಲ್ಲಿಸಬೇಕು” ಎಂದು ಸಂಬಂಧಪಟ್ಟ ಇಲಾಖೆಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com