ಸುದ್ದಿಗಳು

ತಮ್ಮ ವಿರುದ್ಧದ ಎಫ್‌ಐಆರ್‌ ಆದೇಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಸೆಬಿ ಮಾಜಿ ಅಧ್ಯಕ್ಷೆ ಮಾಧವಿ ಬುಚ್‌

ನ್ಯಾಯಮೂರ್ತಿ ಎಸ್ ಜಿ ಡಿಗೆ ಅವರ ಮುಂದೆ ಪ್ರಕರಣ ಪ್ರಸ್ತಾಪಿಸಲಾಗಿದ್ದು, ನಾಳೆ (ಮಂಗಳವಾರ) ವಿಚಾರಣೆ ನಡೆಯುವ ಸಾಧ್ಯತೆಯಿದೆ.

Bar & Bench

ಮೂರು ದಶಕಗಳ ಹಿಂದೆ ನಡೆದಿದ್ದ ಷೇರು ಮಾರುಕಟ್ಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಹಾಗೂ ಅದರ ಮೂವರು ಹಾಲಿ ಪೂರ್ಣಾವಧಿ ನಿರ್ದೇಶಕರು ಹಾಗೂ ಇಬ್ಬರು ಬಿಎಸ್‌ಇ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಮುಂಬೈ ನ್ಯಾಯಾಲಯ ಶನಿವಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ ) ನೀಡಿದ ನಿರ್ದೇಶನ ಪ್ರಶ್ನಿಸಿ ಬುಚ್‌ ಹಾಗೂ ಇತರರು ಬಾಂಬೆ ಹೈಕೋರ್ಟ್‌ ಕದ ತಟ್ಟಿದ್ದಾರೆ.

ನ್ಯಾಯಮೂರ್ತಿ ಎಸ್ ಜಿ ಡಿಗೆ ಅವರೆದುರು ಪ್ರಕರಣ ಪ್ರಸ್ತಾಪಿಸಲಾಗಿದ್ದು, ನಾಳೆ (ಮಂಗಳವಾರ) ವಿಚಾರಣೆ ನಡೆಯುವ ಸಾಧ್ಯತೆಯಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಸೆಬಿ ಅಧಿಕಾರಿಗಳ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಹಿರಿಯ ವಕೀಲ ಅಮಿತ್ ದೇಸಾಯಿ ಅವರು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ನ ಇಬ್ಬರು ಅಧಿಕಾರಿಗಳನ್ನು ಪ್ರತಿನಿಧಿಸಿದ್ದರು.

ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಭಾನುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದ ಸೆಬಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿತ್ತು.

ಆದೇಶ ಪ್ರಶ್ನಿಸುವ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿರುವ ಅದು   ಆರೋಪಿತರು ಆಗ ಸಂಬಂಧಪಟ್ಟ ಹುದ್ದೆಗಳನ್ನು ಅಲಂಕರಿಸದೆ ಇದ್ದರೂ ಸೆಬಿಗೆ ವಾಸ್ತವಾಂಶ ದಾಖಲಿಸಲು ಅವಕಾಶ ನೀಡದೆ ಎಸಿಬಿ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದೆ ಎಂದು ತಿಳಿಸಿತ್ತು.

ದೂರುದಾರರಿಗೆ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವ ಅಭ್ಯಾಸ ಮೊದಲಿನಿಂದಲೂ ಇದ್ದು ಈ ಹಿಂದೆ ಅವರು ಸಲ್ಲಿಸಿದ್ದ ಅರ್ಜಿಗಳನ್ನು ದಂಡ ಸಹಿತ ವಜಾಗೊಳಿಸಲಾಗಿದೆ. ನಿಯಂತ್ರಕಗಳನ್ನು ಪಾಲಿಸುವುದಕ್ಕೆ ತಾನು ಬದ್ಧ  ಎಂದು ಸೆಬಿ ಹೇಳಿತ್ತು.

1994ರಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಕಂಪನಿಯೊಂದಕ್ಕೆ ಸಂಬಂಧಿಸಿದ ಹಣಕಾಸಿನ ವಂಚನೆ ಮತ್ತು ನಿಯಂತ್ರಕಗಳನ್ನು ಉಲ್ಲಂಘಿಸಿದ ಆರೋಪ ಕುರಿತಂತೆ ನ್ಯಾಯಾಲಯ ಆದೇಶ ನೀಡಿತ್ತು.  

ಸೆಬಿಯ ಮೂವರು ಹಾಲಿ ಪೂರ್ಣಾವಧಿ ನಿರ್ದೇಶಕರಾದ ಅಶ್ವನಿ ಭಾಟಿಯಾ, ಅನಂತ್ ನಾರಾಯಣ ಜಿ ಮತ್ತು ಕಮಲೇಶ್ ಚಂದ್ರ ವರ್ಷ್ನಿ ಹಾಗೂ ಇಬ್ಬರು ಬಿಎಸ್ಇ ಅಧಿಕಾರಿಗಳಾದ ಪ್ರಮೋದ್ ಅಗರ್ವಾಲ್ ಮತ್ತು ಸುಂದರರಾಮನ್ ರಾಮಮೂರ್ತಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಬಂಗಾರ್ ಸೂಚಿಸಿದ್ದರು.

ತನಿಖೆಯ ಸ್ಥಿತಿಗತಿ ವರದಿಯನ್ನು 30 ದಿನಗಳ ಒಳಗಾಗಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸೆಬಿಯ ಉನ್ನತ ಅಧಿಕಾರಿಗಳ ಸಹಾಯದಿಂದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಕಂಪನಿಯೊಂದನ್ನು ಪಟ್ಟಿ ಮಾಡುವಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಡೊಂಬಿವಲಿಯ ಮಾಧ್ಯಮ ವರದಿಗಾರ ಸಪನ್ ಶ್ರೀವಾಸ್ತವ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿತ್ತು.

ಕಾನೂನು ಜಾರಿ ಸಂಸ್ಥೆಗಳು ಮತ್ತು ಸೆಬಿ ನಿಷ್ಕ್ರಿಯವಾಗಿರುವುದರಿಂದ ಸಿಆರ್‌ಪಿಸಿ ಸೆಕ್ಷನ್ 156(3) ಅಡಿಯಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿತ್ತು.

ಎಸಿಬಿ ನ್ಯಾಯಾಲಯದ ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ

Sapan_Shrivastava_v_Madhabi_Puri_Buch_and_Ors.pdf
Preview

ಸೆಬಿ ಪತ್ರಿಕಾ ಪ್ರಕಟಣೆ

SEBI_PR.pdf
Preview