ಆಕ್ಸಿಸ್-ಮ್ಯಾಕ್ಸ್ ಲೈಫ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರ ವಿರುದ್ಧ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಅವರು ಆರೋಪ ಮಾಡಿದ್ದರೂ ಆಕೆಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪಕ್ಷಕಾರರನ್ನಾಗಿ ಮಾಡಿಲ್ಲ ಎಂದು ದೆಹಲಿ ಹೈಕೋರ್ಟ್ ಈಚೆಗೆ ಹೇಳಿದೆ.
ಒಪ್ಪಂದದಲ್ಲಿ ಸುಮಾರು ₹ 5,100 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿ ಸ್ವಾಮಿ ಅವರು ಸಲ್ಲಿಸಿದ್ದ ಮನವಿಯ ವಿಲೇವಾರಿ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ತಿಳಿಸಿತು.
ಫೆಬ್ರವರಿ 4, 2015 ರಿಂದ ಏಪ್ರಿಲ್ 3, 2017 ರವರೆಗೆ ಮ್ಯಾಕ್ಸ್ ಹೆಲ್ತ್‌ಕೇರ್ ಇನ್‌ಸ್ಟಿಟ್ಯೂಟ್ ಲಿಮಿಟೆಡ್‌ನಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಮಾಧಬಿ ಬುಚ್ ಅವರು ಕೆಲಸ ಮಾಡಿದ್ದರು. ಈ ನಂಟಿನಿಂದಾಗಿ ಆಕ್ಸಿಸ್-ಮ್ಯಾಕ್ಸ್ ಒಪ್ಪಂದವನ್ನು ಆಕೆ ಅಧ್ಯಕ್ಷರಾಗಿರುವ ಸೆಬಿ ತ್ವರಿತವಾಗಿ ತನಿಖೆ ಮಾಡುತ್ತಿಲ್ಲ ಎಂಬುದು ಸ್ವಾಮಿ ಅವರ ವಾದವಾಗಿತ್ತು.
ಆದರೆ ಮಾಧಬಿ ಅವರ ವಿರುದ್ಧ ಸ್ವಾಮಿ ಅವರು ವೈಯಕ್ತಿಕ ಆರೋಪಗಳನ್ನು ಮಾಡಿದ್ದರೂ ಅವರು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿಲ್ಲ ಇಲ್ಲವೇ ಅವರನ್ನು ಪಿಐಎಲ್‌ನ ಕಕ್ಷಿದಾರರನಾಗಿ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್‌ನ ಷೇರು ವಹಿವಾಟಿನ ಮೂಲಕ ಆಕ್ಸಿಸ್ "ಅನಾವಶ್ಯಕ ಲಾಭ" ಗಳಿಸಿದೆ ಎಂದು ಆರೋಪಿಸಿ ಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಮ್ಯಾಕ್ಸ್ ಫೈನಾನ್ಷಿಯಲ್ ಸರ್ವೀಸಸ್ ತಮ್ಮ ಷೇರುದಾರರಾದ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಅದರ ಸಮೂಹ ಕಂಪನಿಗಳಾದ ಆಕ್ಸಿಸ್ ಸೆಕ್ಯುರಿಟೀಸ್ ಲಿಮಿಟೆಡ್ ಹಾಗೂ ಆಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್‌ಗೆ ಮ್ಯಾಕ್ಸ್ ಲೈಫ್‌ನ ಈಕ್ವಿಟಿ ಷೇರುಗಳ ಖರೀದಿ ಮತ್ತು ಮಾರಾಟದಿಂದ ಅನಗತ್ಯ ಲಾಭ ಗಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ಈ ವಹಿವಾಟುಗಳು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ಕಡ್ಡಾಯ ನಿರ್ದೇಶನಗಳನ್ನು ಉಲ್ಲಂಘಿಸಿವೆ. ಆದ್ದರಿಂದ, ವಂಚನೆಯ ಬಗ್ಗೆ ತಜ್ಞರ ಸಮಿತಿ ತನಿಖೆ ನಡೆಸಬೇಕೆಂದು ಸ್ವಾಮಿ ಕೋರಿದ್ದರು.
ನಿಯಂತ್ರಕ ಸಂಸ್ಥೆಗಳಾದ ಸೆಬಿ ಮತ್ತು ಐಆರ್‌ಡಿಎಐ ಬೇಗ ಪ್ರಕರಣದ ತನಿಖೆ ಪೂರ್ಣಗೊಳಿಸಬೇಕು ಎಂದ ಹೈಕೋರ್ಟ್ಅರ್ಜಿ ವಿಲೇವಾರಿ ಮಾಡಿದೆ.