ಮಧ್ಯಪ್ರದೇಶ ಹೈಕೋರ್ಟ್
ಮಧ್ಯಪ್ರದೇಶ ಹೈಕೋರ್ಟ್ 
ಸುದ್ದಿಗಳು

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ಶೀಘ್ರ ವಿಲೇವಾರಿ: ಮಧ್ಯಪ್ರದೇಶ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

Bar & Bench

ಸಂಸತ್ತು ಮತ್ತು ವಿಧಾನಸಭೆಗಳ ಹಾಲಿ ಹಾಗೂ ಮಾಜಿ ಸದಸ್ಯರುಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಮೇಲ್ವಿಚಾರಣೆಗಾಗಿ ಮಧ್ಯಪ್ರದೇಶ ಹೈಕೋರ್ಟ್ ಸ್ವಯಂಪ್ರೇರಣಾ ಪ್ರಕರಣ ದಾಖಲಿಸಿದೆ.

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಿಯಾಯೋಜನೆ ರೂಪಿಸುವಂತೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದಕ್ಕೆ ಅನುಗುಣವಾಗಿ ಈ ಪ್ರಕರಣ ದಾಖಲಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಅಜಯ್ ಕುಮಾರ್ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಂಜಯ್ ಯಾದವ್ ಅವರಿದ್ದ ನ್ಯಾಯಪೀಠವು ಸ್ವಯಂಪ್ರೇರಣಾ ಪ್ರಕರಣ ದಾಖಲಿಸಿಕೊಳ್ಳಲು ಆದೇಶಿಸಿದ್ದು, ಕೇಂದ್ರ ಕಾನೂನು ಸಚಿವರು, ಮಧ್ಯಪ್ರದೇಶ ಸರ್ಕಾರ, ಮಧ್ಯಪ್ರದೇಶ ಹೈಕೋರ್ಟ್ ಹಾಗೂ ರಾಜ್ಯ ಕಾನೂನು ಇಲಾಖೆಗೆ ನೋಟಿಸ್ ನೀಡಿದೆ.

ಮಾಜಿ ಮತ್ತು ಹಾಲಿ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಈ ಹಿಂದೆ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅದರಂತೆ ಮಾಜಿ ಮತ್ತು ಪ್ರಸ್ತುತ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ಕ್ರೋಢೀಕರಿಸುವಂತೆ ದೇಶದೆಲ್ಲೆಡೆ ಇರುವ ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.

ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ವಿಜಯ್ ಹನ್ಸಾರಿಯಾ ಅವರು ದೇಶದೆಲ್ಲೆಡೆ ಸಂಸತ್ ಸದಸ್ಯರು (ಸಂಸದರು) ಮತ್ತು ಶಾಸಕಾಂಗ ಸಭೆಗಳ ಸದಸ್ಯರ (ಶಾಸಕರು) ವಿರುದ್ಧ ಒಟ್ಟು 4,442 ಪ್ರಕರಣಗಳು ಬಾಕಿ ಉಳಿದಿವೆ ಎಂದು ಸೆಪ್ಟೆಂಬರ್ 10 ರಂದು, ಸುಪ್ರೀಂಕೋರ್ಟಿಗೆ ತಿಳಿಸಿದ್ದರು, ಅದರಲ್ಲಿ 2,556 ಹಾಲಿ ಶಾಸಕರು ಇನ್ನೂ ವಿಚಾರಣೆ ಎದುರಿಸಬೇಕಿದೆ.

ಶಾಸಕರನ್ನು ಒಳಗೊಂಡ ಪ್ರಕರಣಗಳ ನಿರ್ವಹಣೆಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕೆಂದು ಅಮಿಕಸ್ ಕ್ಯೂರಿ ಅವರು ಶಿಫಾರಸು ಮಾಡಿದ್ದರು. ಜೊತೆಗೆ "ಅಪರೂಪದ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಮತ್ತು ದಾಖಲಿಸಬೇಕಾದ ಕಾರಣಗಳಿಗಾಗಿ" ಮಾತ್ರ ಪ್ರಕರಣಗಳನ್ನು ಮುಂದೂಡಲು ಅವಕಾಶ ನೀಡಬೇಕೆಂದು ಸೂಚಿಸಿದ್ದರು.

ಸಾಕ್ಷಿಗಳ ಅಸಹಾಯಕತೆ ಮತ್ತು ಶಾಸಕರ ಪ್ರಭಾವ ಆಧರಿಸಿ ಸಾಕ್ಷಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ಕೂಡ ಸಲಹೆ ನೀಡಲಾಗಿತ್ತು.

ಸುಪ್ರೀಂಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ, ಕಳೆದ ತಿಂಗಳು ಒರಿಸ್ಸಾ ಹೈಕೋರ್ಟ್, ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ಕೇಳಿ ಆದೇಶ ಹೊರಡಿಸಿತ್ತು.

ಪ್ರಸ್ತುತ ಪ್ರಕರಣದ ವಿಚಾರಣೆ ಮುಂದಿನ ಅಕ್ಟೋಬರ್ 19 ರಂದು ನಡೆಯಲಿದೆ.

ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಇಲ್ಲಿ ಓದಿ:

MP_HC_Order___suo_motu_case_re_cases_against_legislators.pdf
Preview