Madhya Pradesh High Court, Jabalpur Bench 
ಸುದ್ದಿಗಳು

ಭೋಪಾಲ್ ಅನಿಲ ದುರಂತದ ತ್ಯಾಜ್ಯ ವಿಲೇವಾರಿ: ಸುಳ್ಳು ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ

ತ್ಯಾಜ್ಯ ವಿಲೇವಾರಿಯಿಂದ (ಭೋಪಾಲ್ ದುರಂತದಂತೆಯೇ) ಮತ್ತೊಂದು ಅನಾಹುತ ಸಂಭವಿಸಬಹುದು ಎಂಬ ವದಂತಿಯಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ ಎಂಬುದನ್ನು ಅರಿತ ನ್ಯಾಯಾಲಯ ಈ ಆದೇಶ ನೀಡಿದೆ.

Bar & Bench

ನಾಲ್ಕು ದಶಕಗಳ ಹಿಂದೆ ಸಂಭವಿಸಿದ್ದ ಭೋಪಾಲ್‌ ಅನಿಲ ದುರಂತಕ್ಕೆ ಸಂಬಂಧಿಸಿದ ತ್ಯಾಜ್ಯವನ್ನು ಭೋಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆ ಇರುವ ಜಾಗದಿಂದ ಪಿತಾಂಪುರಕ್ಕೆ  ವಿಲೇವಾರಿ ಮಾಡುವ ಸಂಬಂಧ ಸಾರ್ವಜನಿಕರಲ್ಲಿ ಭಯ ಮತ್ತು ಗೊಂದಲ ಮೂಡಿಸುವ ಸುದ್ದಿ ಪ್ರಕಟಿಸದಂತೆ ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ ಮಾಧ್ಯಮಗಳಿಗೆ ಆದೇಶಿಸಿದೆ.

ತ್ಯಾಜ್ಯ ವಿಲೇವಾರಿ ಅಪಾಯದ ಬಗ್ಗೆ ತಪ್ಪು ವರದಿಗಳಿಂದಾಗಿ ಪಿತಾಂಪುರದಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ವಿವೇಕ್ ಜೈನ್ ಅವರಿದ್ದ ವಿಭಾಗೀಯ ಪೀಠ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಈ ಆದೇಶ ನೀಡಿದೆ.

1984ರ ಡಿಸೆಂಬರ್ 3ರ ಮಧ್ಯರಾತ್ರಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು.

ಇಡೀ ವಿಷಕಾರಿ ತ್ಯಾಜ್ಯವನ್ನು ಕಾರ್ಖಾನೆ ಇರುವ ಸ್ಥಳದಿಂದ ಸುರಕ್ಷಿತವಾಗಿ ವಿಲೇವಾರಿ ಮಾಡಲು ಎಲ್ಲಾ ಕ್ರಮ ಕೈಗೊಳ್ಳುವಂತೆ ಡಿಸೆಂಬರ್ 2024 ರಲ್ಲಿ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿತ್ತು. 2004ರಿಂದ ಬಾಕಿ ಉಳಿದಿದ್ದ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ನೀಡಲಾಗಿತ್ತು.

ಪೊಲೀಸರು ಮತ್ತು ಆಡಳಿತಾಂಗದ ಸಹಕಾರದೊಂದಿಗೆ 12 ಅಗ್ನಿ ನಿರೋಧಕ ಮತ್ತು ಸೋರಿಕೆ ನಿರೋಧಕ ಕಂಟೈನರ್‌ಗಳಲ್ಲಿ ತ್ಯಾಜ್ಯವನ್ನು ಜನವರಿ 1ರ ರಾತ್ರಿ  ಕೊಂಡೊಯ್ಯಲಾಗಿದೆ. ವೈದ್ಯರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಕಾರ್ಮಿಕರ ನುರಿತ ತಂಡ ಈ ಕಾರ್ಯದಲ್ಲಿ ತೊಡಗಿತ್ತು. ತ್ಯಾಜ್ಯ ಸಾಗಿಸಲು ಹಸಿರು ಕಾರಿಡಾರ್‌ ರಚಿಸಲಾಗಿತ್ತು ಎಂದು ಅಡ್ವೊಕೇಟ್ ಜನರಲ್ ಪ್ರಶಾಂತ್ ಸಿಂಗ್ ಇಂದು ನ್ಯಾಯಾಲಯಕ್ಕೆ ತಿಳಿಸಿದರು.

ಆದರೂ ತ್ಯಾಜ್ಯ ವಿಲೇವಾರಿಯಿಂದ ಮತ್ತೊಂದು ಕೈಗಾರಿಕಾ ಅನಾಹುತ ಸಂಭವಿಸಬಹುದು ಎಂಬ ವದಂತಿಯಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ  ಮನೆ ಮಾಡಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಲಾಯಿತು.

ವಿಚಾರಣೆ ವೇಳೆ, ವಾಸ್ತವಿಕ ಮಾಹಿತಿ ನೀಡುವ ಮೂಲಕ ವದಂತಿ ತಡೆಯಲು ವಿವಿಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ವಿಶ್ವಾಸ ಗಳಿಸಲು ಆರು ವಾರಗಳ ಕಾಲಾವಕಾಶ ಅಗತ್ಯವಿದೆ ಎಂದು ಸರ್ಕಾರ ತಿಳಿಸಿತು. ಇದನ್ನು ನ್ಯಾಯಾಲಯ ದಾಖಲಿಸಿಕೊಂಡಿತು.

ತ್ಯಾಜ್ಯವನ್ನು ಪಿತಾಂಪುರದಲ್ಲಿ ಇಳಿಸಲು ಅನುಮತಿ ಬೇಕಾಗುತ್ತದೆ ಎಂದು ಸರ್ಕಾರ ನ್ಯಾಯಲಯವನ್ನು ಕೇಳಿತು. ಆಗ ಪೀಠ ಈಗಾಗಲೇ ನಿಯಮಾನುಸಾರ ತ್ಯಾಜ್ಯ ವಿಲೇವಾರಿಗೆ ನಿರ್ದೇಶನ ನೀಡಿರುವುದರಿಂದ ತ್ಯಾಜ್ಯ ಇಳಿಸುವ ಕುರಿತು ಮತ್ತೊಂದು ಆದೇಶ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಆದರೆ ತ್ಯಾಜ್ಯ ಇಳಿಸುವ ವೇಳೆ ವಿಲೇವಾರಿ ಆದೇಶ ಪಾಲಿಸುವಾಗ ಕೈಗೊಂಡಿದ್ದ ಎಲ್ಲಾ ಸುರಕ್ಷಿತ ಕ್ರಮಗಳನ್ನು ಪಾಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಆದೇಶ ಪಾಲನೆಗಾಗಿ ಇನ್ನೂ ಆರು ವಾರಗಳ ಕಾಲಾವಕಾಶ ನೀಡುತ್ತೇವೆ ಎಂದು ಅದು ಹೇಳಿತು.