ಸುದ್ದಿಗಳು

ಇಂದೋರ್, ಉಜ್ಜಯಿನಿಯಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ನೀಟ್‌ಗೆ ಅಡ್ಡಿ: ಮರುಪರೀಕ್ಷೆಗೆ ಮ. ಪ್ರದೇಶ ಹೈಕೋರ್ಟ್ ಆದೇಶ

ಜೂನ್ 3 ರಂದು ತಾತ್ಕಾಲಿಕ ಉತ್ತರ ಪತ್ರ ಬಿಡುಗಡೆ ಮಾಡುವ ಮೊದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ತಾನು ನೀಡುತ್ತಿರುವ ಪರಿಹಾರ ಸೀಮಿತ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Bar & Bench

ಉಜ್ಜಯಿನಿ ಮತ್ತು ಇಂದೋರ್  ಕೇಂದ್ರಗಳಲ್ಲಿ ವಿದ್ಯುತ್‌ ಕಡಿತದಿಂದಾಗಿ ಪದವಿ ವೈದ್ಯಕೀಯ ಕಾಲೇಜು ಪ್ರವೇಶಾತಿಗಾಗಿ ರಾಷ್ಟ್ರೀಯ-ಅರ್ಹತೆ-ಮತ್ತು-ಪ್ರವೇಶ ಪರೀಕ್ಷೆ (ನೀಟ್) ಬರೆಯುವುದಕ್ಕೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಮತ್ತೆ ಪರೀಕ್ಷೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿದೆ [ಲಕ್ಷ್ಮಿ ದೇವಿ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇನ್ನಿತರರ ನಡುವಣ ಪ್ರಕರಣ].

ಗುಡುಗು ಸಹಿತ ಮಳೆಯಿಂದಾಗಿ ಇಂದೋರ್ ಮತ್ತು ಉಜ್ಜಯಿನಿಯ ಅನೇಕ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ, ವಿದ್ಯಾರ್ಥಿಗಳು ಕತ್ತಲಲ್ಲಿ ಪರೀಕ್ಷೆ ಬರೆಯುವ ಸ್ಥಿತಿ ನಿರ್ಮಾಣವಾಗಿತ್ತು ಎಂದು 100ಕ್ಕೂ ಹೆಚ್ಚು ಅರ್ಜಿಗಳ ಮುಖಾಂತರ ಅಭ್ಯರ್ಥಿಗಳು ದೂರಿದ್ದರು. 

ವಿದ್ಯುತ್ ಕಡಿತದಿಂದ ಅನಾನುಕೂಲತೆ ಅನುಭವಿಸಿದ ಅರ್ಜಿದಾರರು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಮಾನ್ಯವಾದ ಆಧಾರಗಳನ್ನು ಒದಗಿಸಿದ್ದಾರೆ ಎಂದು ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ತಿಳಿಸಿದರು.

ಆದ್ದರಿಂದ, ಅರ್ಜಿದಾರರ ಶ್ರೇಯಾಂಕಗಳನ್ನು ಅವರ ಮರು ಪರೀಕ್ಷೆಯ ಅಂಕಗಳ ಆಧಾರದ ಮೇಲಷ್ಟೇ ನಿರ್ಧರಿಸಲು ಅನುವಾಗುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸಾಧ್ಯವಾದಷ್ಟು ಬೇಗ ಮರು ಪರೀಕ್ಷೆ ನಡೆಸಿ ಫಲಿತಾಂಶ ಘೋಷಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.

ತಾನು ನೀಡುತ್ತಿರುವ ಪರಿಹಾರ ಜೂನ್ 3 ರಂದು ತಾತ್ಕಾಲಿಕ ಉತ್ತರ ಪತ್ರ  ಬಿಡುಗಡೆ ಮಾಡುವ ಮೊದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ ಎಂದು ನ್ಯಾಯಾಲಯ  ಇದೇ ವೇಳೆ ಸ್ಪಷ್ಟಪಡಿಸಿದೆ. ಎನ್‌ಟಿಎ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಇನ್ನಿತರರು ಹಾಗೂ ಅರ್ಜಿದಾರರ ಪರವಾಗಿ ವಿವಿಧ ವಕೀಲರು ವಾದ ಮಂಡಿಸಿದರು.