WhatsApp  
ಸುದ್ದಿಗಳು

ವಿಚಾರಣೆ ತ್ವರಿತಗತಿಯಲ್ಲಿ ನಡೆಸುವುದಕ್ಕಾಗಿ ವಾಟ್ಸಾಪ್ ಗ್ರೂಪ್ ರಚಿಸಿ: ಪೊಲೀಸರಿಗೆ ಮಧ್ಯಪ್ರದೇಶ ಹೈಕೋರ್ಟ್ ಸಲಹೆ

ವಾಟ್ಸಾಪ್ ಗ್ರೂಪ್ ರಚಿಸಿಕೊಳ್ಳುವಂತೆ ತಾನು ಈ ಹಿಂದೆ ನೀಡಿದ್ದ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವಂತೆ ನ್ಯಾಯಾಲಯ ಡಿಜಿಪಿ ಮತ್ತು ಪ್ರಾಸಿಕ್ಯೂಷನ್ ನಿರ್ದೇಶಕರಿಗೆ ಸೂಚಿಸಿತು.

Bar & Bench

ವಿಚಾರಣಾ ನ್ಯಾಯಾಲಯಗಳಲ್ಲಿ ಸಾಕ್ಷಿಗಳನ್ನು ಕರೆಸಿ,  ತ್ವರಿತವಾಗಿ ವಿಚಾರಣೆ ನಡೆಯುವಂತೆ ನೋಡಿಕೊಳ್ಳಲು  ಪ್ರತಿ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್ ರಚಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಕಿವಿಮಾತು ಹೇಳಿದೆ [ವಿಜೇಂದ್ರ ಸಿಂಗ್‌ ಸಿಕರ್ವರ್‌ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಈ ವಿಚಾರವಾಗಿ ಕಾರ್ಯಾಗಾರ ನಡೆಸುವಂತೆ ಮತ್ತು ವಾಟ್ಸಾಪ್ ಗ್ರೂಪ್‌ ರಚಿಸುವ ಕುರಿತು ತಜ್ಞರ ಸಲಹೆ ಪಡೆಯುವಂತೆ ನ್ಯಾಯಮೂರ್ತಿ ಆನಂದ್ ಪಾಠಕ್ ಅವರು ಕಳೆದ ವಾರ ಹೊರಡಿಸಿದ ಆದೇಶದಲ್ಲಿ ಡಿಜಿಪಿ ಮತ್ತು ಪ್ರಾಸಿಕ್ಯೂಷನ್ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಾನು ನೀಡಿದ್ದ  ಸಲಹೆಗಳನ್ನು ನ್ಯಾಯಾಲಯ ಪುನರುಚ್ಚರಿಸಿತು. ವಿಚಾರಣೆಗಳು ತ್ವರಿತ ಗತಿಯಲ್ಲಿ ನಡೆಯುವುದಕ್ಕಾಗಿ ಪ್ರತಿಯೊಂದು ಪೊಲೀಸ್‌ ಠಾಣೆಯೂ ದೂರುದಾರರು, ಸಾಕ್ಷಿಗಳು, ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮತ್ತಿತರ ಅಧಿಕಾರಿಗಳನ್ನು ಒಳಗೊಂಡ ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸುವಂತೆ ನ್ಯಾಯಾಲಯ ಆಗ ಶಿಫಾರಸು ಮಾಡಿತ್ತು.

ಈ ಬಗೆಯ ವಾಟ್ಸಾಪ್ ಗುಂಪುಗಳನ್ನು ರಚಿಸುವುದರಿಂದ ಸಾಕ್ಷಿಗಳಿಗೆ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಾದ ದಿನಾಂಕದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ದೊರೆಯುತ್ತದೆ. ಅಲ್ಲದೆ, ನ್ಯಾಯಾಲಯದ ಗುಮಾಸ್ತರು ಅಥವಾ ಮುನ್ಷಿಗಳು ಸಮನ್ಸ್‌ ಆದೇಶಗಳನ್ನು ಸಾಮಾನ್ಯ ಮಾರ್ಗದಲ್ಲಿ ತಲುಪಿಸುವುದಷ್ಟೇ ಅಲ್ಲದೆ ವಾಟ್ಸಪ್‌ ಗುಂಪಿನ ಮೂಲಕವೂ ತಲುಪಿಸಲು ಸಾಧ್ಯವಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸಿದಾಗ ಅಂತಹ ಗ್ರೂಪ್‌ಗಳನ್ನು ರಚಿಸಿರುವ ಬಗ್ಗೆ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿಯೂ ಉಲ್ಲೇಖಿಸಬಹುದು ಎಂದು ಅದು ಇದೀಗ ಸಲಹೆ ನೀಡಿದೆ. ವಿಚಾರಣೆ ಮುಗಿದ ಬಳಿಕ ಗ್ರೂಪ್‌ಗಳನ್ನು ಡಿಲೀಟ್‌ ಮಾಡಬಹುದು ಎಂದು ಕೂಡ ಅದು ತಿಳಿಸಿದೆ.

ಸುಮಾರು ಐದು ವರ್ಷಗಳ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಸಾಕ್ಷಿಗಳು ಹಾಜರಾಗದ ಕಾರಣ ಪ್ರಕರಣದ ವಿಚಾರಣೆ ವಿಳಂಬವಾಗಿತ್ತು. ವಾಟ್ಸಾಪ್‌ ಗ್ರೂಪ್‌ ರಚನೆ ಕುರಿತಂತೆ ತನ್ನ ಆದೇಶ ಪಾಲನೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಂಬಂಧ ನ್ಯಾಯಾಲಯ ನವೆಂಬರ್‌ನಲ್ಲಿ ಈ ಪ್ರಕರಣವನ್ನು ಮತ್ತೆ ಆಲಿಸಲಿದೆ.