ಹದಿನಾರು ವರ್ಷಕ್ಕಿಂತಲೂ ಕಡಿಮೆ ವಯೋಮಾನದ ಮಕ್ಕಳು ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಟಿಕ್‌ಟಾಕ್ ರೀತಿಯ ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ಆಸ್ಟ್ರೇಲಿಯಾ ಕಾನೂನು ಜಾರಿಗೆ ತಂದಿದ್ದು ಅಂಥದ್ದೇ ಕಾಯಿದೆ ತರುವ ಸಂಬಂಧ ಕೇಂದ್ರ ಸರ್ಕಾರ ಗಣನೆಗೆ ತೆಗೆದುಕಜೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ಕಿವಿಮಾತು ಹೇಳಿದೆ [ಎಸ್ ವಿಜಯಕುಮಾರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಆ ರೀತಿಯ ಕಾನೂನು ಜಾರಿಗೆ ತರುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುವವರೆಗೂ ಮಕ್ಕಳಿಗೆ ಅಶ್ಲೀಲತೆಯ ಅಪಾಯದ ಬಗ್ಗೆ ಹೆಚ್ಚು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಲಭ್ಯವಿರುವ ಎಲ್ಲಾ ಮಾಧ್ಯಮಗಳ ಮೂಲಕ ಅಸುರಕ್ಷಿತ ವರ್ಗಗಳಿಗೆ ಈ ಸಂದೇಶವನ್ನು ತಲುಪಿಸಬೇಕು. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಈ ವಿಷಯದಲ್ಲಿ ಕ್ರಿಯಾಯೋಜನೆ ರೂಪಿಸಿ ಅದನ್ನು ಅಕ್ಷರಶಃ ಜಾರಿಗೆ ತರಬೇಕು ಎಂದು ನ್ಯಾಯಮೂರ್ತಿಗಳಾದ ಜಿ ಜಯಚಂದ್ರನ್ ಮತ್ತು ಕೆ ಕೆ ರಾಮಕೃಷ್ಣನ್ ಅವರನ್ನೊಳಗೊಂಡ ಪೀಠ ಹೇಳಿತು.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಜಾರಿಗೆ ಬಂದಿರುವ ಕಾನೂನಿನ ಪ್ರಕಾರ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಕಂಪೆನಿಗಳು ತಮ್ಮ ಜಾಲತಾಣಗಳಲ್ಲಿ ಖಾತೆ ತೆರಯಲು ಅವಕಾಶ ನೀಡಬಾರದು. ನಿಯಮ ಉಲ್ಲಂಘಿಸಿದ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾನೂನು ಮಕ್ಕಳನ್ನಾಗಲಿ ಅಥವಾ ಅವರ ಪೋಷಕರನ್ನಾಗಲಿ ಗುರಿಯಾಗಿಸಿಲ್ಲ.
ಅಶ್ಲೀಲ ವಸ್ತು ವಿಷಯಗಳು ಮಕ್ಕಳಿಗೆ ಸುಲಭವಾಗಿ ದಕ್ಕುತ್ತಿರುವ ಕುರಿತು ಸಲ್ಲಿಸಲಾದ ಅರ್ಜಿಯಲ್ಲಿ, ಇಂಟರ್‌ನೆಟ್ ಸೇವಾ ಪೂರೈಕೆದಾರರು (ಐಎಸ್‌ಪಿ) ಪೋಷಕರ ನಿಯಂತ್ರಣ ಅಥವಾ ʼಪೇರೆಂಟಲ್ ವಿಂಡೋʼ ಸೇವೆ ಒದಗಿಸಬೇಕೆಂದು ಕೂಡ ಮನವಿ ಮಾಡಲಾಗಿತ್ತು.
2005ರ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ರಾಷ್ಟ್ರೀಯ ಆಯೋಗ ಕಾಯಿದೆಯಡಿ ರೂಪುಗೊಂಡಿರುವ ಮಕ್ಕಳ ಹಕ್ಕು ಆಯೋಗಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವೆಂದು ನ್ಯಾಯಾಲಯ ಇದೇ ವೇಳೆ ಬೇಸರ ವ್ಯಕ್ತಪಡಿಸಿತು.
“ಶಾಲೆಗಳಲ್ಲಿನ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಕೆಲವು ಜಾಗೃತಿ ಅಭಿಯಾನಗಳು ನಡೆಯುತ್ತಿರುವುದು ನಿಜವಾದರೂ ಅವು ಸಾಕಷ್ಟು ಪರಿಣಾಮಕಾರಿಯಾಗಿಲ್ಲ,” ಎಂದು ಅದು ಹೇಳಿತು.
ಆದರೆ, ಇದೇ ರೀತಿಯ ವಿಷಯದಲ್ಲಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಇತರ ಪಾಲುದಾರರಿಗೆ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದ ಮಕ್ಕಳ ಹಕ್ಕುಗಳ ಕುರಿತು ಕೆಲವು ಸಲಹೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಅದು ಯಾವುದೇ ಪ್ರಮುಖ ನಿರ್ದೇಶನ ಇಲ್ಲವೇ ಮಾರ್ಗಸೂಚಿ ನೀಡಲಿಲ್ಲ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಾದ ವಿಷಯಗಳನ್ನು (ಸಿಎಸ್‌ಎಎಂ) ಹೊಂದಿರುವ ವೆಬ್‌ಸೈಟ್‌ಗಳು ಇನ್ನೂ ಸಕ್ರಿಯವಾಗಿ ಲಭ್ಯವಿರುವುದುನ್ನು ಉಲ್ಲೇಖಿಸಿದ ನ್ಯಾಯಾಲಯ, ಬಳಕೆದಾರರ ಮಟ್ಟದಲ್ಲೇ ನಿಯಂತ್ರಣ ಇರಬೇಕೆಂದು ಅಭಿಪ್ರಾಯಪಟ್ಟಿತು. ಇಂಟರ್‌ನೆಟ್ ಸಾಧನದಲ್ಲಿ ಪೋಷಕರು ನಿಯಂತ್ರಿಸುವಂತಹ ಅಪ್ಲಿಕೇಷನ್ ಲಭ್ಯವಿದ್ದರೆ ಮಾತ್ರ ಇದು ಸಾಧ್ಯವೆಂದು ಅದು ನುಡಿಯಿತು
“ಈ ಉದ್ದೇಶಕ್ಕಾಗಿ, ಬಳಕೆದಾರರಿಗೆ ಮಕ್ಕಳ ಕುರಿತಾದ ಅಶ್ಲೀಲತೆಯ ಹಾವಳಿ ಹಾಗೂ ಅದನ್ನು ತಡೆಯುವ ಕ್ರಮಗಳ ಬಗ್ಗೆ ಕಡ್ಡಾಯವಾಗಿ ಜಾಗೃತಿ ಮೂಡಿಸಬೇಕು. ಅಂತಿಮವಾಗಿ, ಇಂತಹ ಅಸಹ್ಯಕರ ವಿಷಯವನ್ನು ಪ್ರವೇಶಿಸುವುದೇ ಅಥವಾ ಅದನ್ನು ತಪ್ಪಿಸಿಕೊಳ್ಳುವುದೇ ಎಂಬುದು ವ್ಯಕ್ತಿಯ ಸ್ವಂತ ಆಯ್ಕೆಯೂ ಹಕ್ಕೂ ಆಗಿದೆ. ಆದರೆ ಮಕ್ಕಳ ವಿಚಾರದಲ್ಲಿ ಅವರು ಸುಲಭಕ್ಕೆ ತುತ್ತಾಗುವುದು ಹೆಚ್ಚಾಗಿರುತ್ತದೆ. ಆದ್ದರಿಂದ ಪೋಷಕರ ಜವಾಬ್ದಾರಿಯೂ ಹೆಚ್ಚಾಗುತ್ತದೆ,” ಎಂದು ನ್ಯಾಯಾಲಯ ಹೇಳಿ ಅರ್ಜಿಯನ್ನು ವಿಲೇವಾರಿ ಮಾಡಿತು.