
ಸಂದರ್ಭ ಬದಿಗಿಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಲಯ ವಿಚಾರಣೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ಲಂಡನ್‌ನಲ್ಲಿರುವ ಬ್ರಿಟನ್‌ನ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ನಡೆದ ದುಂಡುಮೇಜಿನ ಸಭೆ ವೇಳೆ 'ನ್ಯಾಯಾಂಗದ ಧರ್ಮಸಮ್ಮತತೆಯ ಕಾಪಾಡುವಿಕೆ ಮತ್ತು ಸಾರ್ವಜನಿಕ ವಿಶ್ವಾಸದ ಗಳಿಕೆ' ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ಸಿಜೆಐ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಧ್ಯಮಗಳು ಕ್ರಿಯಾಶೀಲವಾಗಿ ನ್ಯಾಯಾಲಯದ ತೀರ್ಪುಗಳನ್ನು ವರದಿಮಾಡುತ್ತಿವೆಯಾದರೂ ನೇರ ಪ್ರಸಾರ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಅವಕಾಶ ದೊರೆತ ಮೇಲೆ ಸಾಮಾಜಿಕ ಮಾಧ್ಯಮಗಳು ತೀರ್ಪುಗಳನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿರುವ ಬಗ್ಗೆ ಕಳವಳ ಇದೆ ಎಂದು ಅವರು ನುಡಿದರು.
"ಭಾರತದಲ್ಲಿ ವರ್ಚುವಲ್ ನ್ಯಾಯಾಲಯಗಳು ಪ್ರಾರಂಭವಾದ ಬಳಿಕ ಅನೇಕರು ನ್ಯಾಯಾಲಯದ ಕಲಾಪಗಳ ತುಣುಕುಗಳನ್ನು ಹಿಡಿದು ತಪ್ಪಾಗಿ ಅರ್ಥೈಸುವ ಪ್ರವೃತ್ತಿ ನಡೆಯುತ್ತಿದೆ. ಭಾರತದಲ್ಲಿ ಇಂತಹುದನ್ನು ತಡೆಯಲು ಯಾವುದೇ ನಿಯಮಗಳು ಇಲ್ಲ. ಸಾಮಾಜಿಕ ಮಾಧ್ಯಮದ ಈ ಪಿಡುಗನ್ನು ಕಡಿಮೆ ಮಾಡಲು ಕಾರ್ಯಾಂಗವು ನಿಯಮಗಳನ್ನು ಜಾರಿಗೆ ತರಲು ಇದು ಸೂಕ್ತ ಸಮಯವಾಗಿದೆ," ಎಂದು ನ್ಯಾ. ಗವಾಯಿ ಅವರು ಹೇಳಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ಭಾರತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ನ್ಯಾಯಾಲಯ ಕಲಾಪಗಳ ದುರುಪಯೋಗ ತಡೆಯುವುದರಿಂದ ಆಗುವ ಲಾಭ ನ್ಯಾಯಾಧೀಶರು, ವಕೀಲರು ಮತ್ತು ಕಾನೂನು ಕ್ಷೇತ್ರದ ಜನರಿಗೆ ಮಾತ್ರವಲ್ಲದೆ ದಾವೆ ಹೂಡುವವರು ಮತ್ತು ಕಾನೂನು ವ್ಯವಸ್ಥೆಗೆ ಸಂಬಂಧಪಡದೆ ಇರುವವರಿಗೂ ಆಗಲಿದೆ ಎಂದರು..
ಇಂಗ್ಲೆಂಡ್ ಮತ್ತು ವೇಲ್ಸ್ ಮುಖ್ಯ ನ್ಯಾಯಮೂರ್ತಿ ಲೇಡಿ ಸ್ಯೂ ಕಾರ್ ಮಾತನಾಡಿ ನ್ಯಾಯಾಲಯಗಳ ವಿಚಾರಣೆಯನ್ನು ಹೆಚ್ಚು ಜನರು ನೋಡಿದಷ್ಟೂ ಅವರು ಅರ್ಥಮಾಡಿಕೊಂಡಷ್ಟೂ ನ್ಯಾಯಾಂಗದ ಮೇಲಿನ ಸಾರ್ವಜನಿಕ ವಿಶ್ವಾಸ ಹೆಚ್ಚುತ್ತದೆ ಎಂದರು.
ಆದರೆ ಹಾಗೆ ಸಾರ್ವಜನಿಕರಿಗೆ ತೆರೆದುಕೊಳ್ಳುವ ಮೂಲಕ ನ್ಯಾಯಾಧೀಶರು ಕೆಲ ಬಾರಿ ತಮ್ಮ ಭದ್ರತೆಗೆ ಬೆದರಿಕೆ ತಂದುಕೊಳ್ಳುತ್ತಾರೆ. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬಳಿಕ ನೇರ ಪ್ರಸಾರ ಮಾಡುವುದು ಉತ್ತಮ ಎಂದು ಅವರು ಸಲಹೆಯಿತ್ತರು.
ಇಂಗ್ಲೆಂಡ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಲಾರ್ಡ್ ಜಾರ್ಜ್ ಲೆಗ್ಗಾಟ್, ಹಿರಿಯ ವಕೀಲ ಗೌರಬ್ ಬ್ಯಾನರ್ಜಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.