Dr BR Ambedkar 
ಸುದ್ದಿಗಳು

ತಮಿಳುನಾಡಿನ ಎಲ್ಲಾ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಕೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ನ್ಯಾಯಾಲಯದ ಚೇಂಬರ್‌ನಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರ ಅಳವಡಿಸುವ ಬಗ್ಗೆ ತಮ್ಮಿಂದಾದ ಲೋಪವನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಇದೇ ವೇಳೆ ತಿಳಿಸಿದರು.

Bar & Bench

ತಮಿಳುನಾಡಿನ ಎಲ್ಲಾ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಆದೇಶಿಸಿದೆ.

ಕಾಲೇಜಿನ ಕೊಠಡಿಯಲ್ಲಿ ಡಾ. ಅಂಬೇಡ್ಕರ್‌ ಭಾವಚಿತ್ರವನ್ನು ಅಳವಡಿಸದಿರುವ ಬಗ್ಗೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ಬಳಿಕ ಕಾಲೇಜು ಅಧಿಕಾರಿಗಳು ತನ್ನ ವಿರುದ್ಧ ಆರಂಭಿಸಿದ್ದ ಶಿಸ್ತು ಕ್ರಮ ರದ್ದುಗೊಳಿಸುವಂತೆ ಕೋರಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಹೊರಡಿಸಿತು.

"ಡಾ. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಶಿಲ್ಪಿ. ಅವರು ಸಾಮಾಜಿಕ ವಿಮೋಚನೆಯ ಮಹಾನ್‌ ದ್ಯೋತಕವಾಗಿದ್ದಾರೆ. ಅವರ ಪಾಂಡಿತ್ಯ ಅಪ್ರತಿಮವಾದುದು. ಅವರು ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಗೆ ಬಹುದೊಡ್ಡ ಸ್ಫೂರ್ತಿಯಾಗಬಲ್ಲರು. ತಮಿಳುನಾಡಿನ ಎಲ್ಲಾ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸಬೇಕು ಎಂಬ ಆದೇಶದ ಕುರಿತು ಚೆನ್ನೈನ ಕಾನೂನು ಅಧ್ಯಯನ ನಿರ್ದೇಶಕರು ಸುತ್ತೋಲೆ ಹೊರಡಿಸಲು ಕೋರಲಾಗಿದೆ'' ಎಂದು ನ್ಯಾಯಾಲಯ ಆದೇಶಿಸಿದೆ.

ಆಸಕ್ತಿಕರ ವಿಷಯವೆಂದರೆ, ಇದೇ ವೇಳೆ ನ್ಯಾ. ಸ್ವಾಮಿನಾಥನ್ ಅವರು ತಮ್ಮ ಚೇಂಬರ್‌ನಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರ ಅಳವಡಿಸದೆ ಇರುವ ಲೋಪವನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಹೇಳಿದರು.

“ಬದಲಾವಣೆ ಮನೆಯಿಂದಲೇ ಆರಂಭವಾಗಬೇಕು. ತೆರೆದ ನ್ಯಾಯಾಲಯದಲ್ಲಿ ಆದೇಶದ ಕರಡನ್ನು ಅಂತಿಮಗೊಳಿಸಿ ಸುತ್ತಲೂ ನೋಡುತ್ತೇನೆ. ಡಾ. ಅಂಬೇಡ್ಕರ್‌ ಅವರ ಭಾವಚಿತ್ರ ನನ್ನ ಕೊಠಡಿ ಗೋಡೆ ಮೇಲೆಯೇ ಇಲ್ಲ. ಆದಷ್ಟು ಬೇಗ ಲೋಪ ಸರಿಪಡಿಸಿಕೊಳ್ಳಲು ನಿರ್ಧರಿಸಿದ್ದೇನೆ” ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ಅರ್ಜಿದಾರ- ವಿದ್ಯಾರ್ಥಿಯನ್ನು ಅಧಿಕಾರಿಗಳು ಕಠೋರವಾಗಿ ನಡೆಸಿಕೊಂಡಿರಬಹುದು ಎಂಬುದನ್ನು ಪ್ರಸ್ತಾಪಿಸಿದ ನ್ಯಾಯಾಲಯ “ಅವರು ವ್ಯಾಸಂಗದ ಕೊನೆಯ ಹೊತ್ತಿಗೆ ಹುತಾತ್ಮರಾಗದೆ ವಕೀಲರಾಗಿ ಹೊರಹೊಮ್ಮಬೇಕು ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ. ಅರ್ಜಿದಾರರು ನೊಂದಿರುವ ಸಾಧ್ಯತೆಯಿದೆ” ಎಂದು ಹೇಳಿತು. ಬೇರೊಂದು ಪ್ರಕರಣದಲ್ಲಿ ಮತ್ತೊಬ್ಬ ಅರ್ಜಿದಾರರು ದಂಡದ ರೂಪದಲ್ಲಿ ಭರಿಸದ್ದ ₹10,000 ಮೊತ್ತವನ್ನು ಪ್ರಸಕ್ತ ಪ್ರಕರಣದ ಅರ್ಜಿದಾರ ವಿದ್ಯಾರ್ಥಿಗೆ ನೀಡಬೇಕು, ಇದು ಅವರು ಉತ್ತಮ ಕಾನೂನು ಪುಸ್ತಕಗಳನ್ನು ಕೊಳ್ಳಲು ಸಹಾಯಕವಾಗುತ್ತದೆ ಎಂದು ಕೂಡ ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿತು.