Madras High Court
Madras High Court 
ಸುದ್ದಿಗಳು

ವಿಧವೆ ದೇಗುಲ ಪ್ರವೇಶಕ್ಕೆ ಮದ್ರಾಸ್ ಹೈಕೋರ್ಟ್‌ ನಿರ್ದೇಶನ: ಮಹಿಳೆಯ ಅಸ್ಮಿತೆ ವೈವಾಹಿಕ ಸ್ಥಿತಿ ಅವಲಂಬಿಸಿಲ್ಲ ಎಂದ ಪೀಠ

Bar & Bench

ತಮಿಳುನಾಡಿನಲ್ಲಿ ವಿಧವೆಯೊಬ್ಬರಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸಿದ್ದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಬೇಸರ ವ್ಯಕ್ತಪಡಿಸುವುದರೊಟ್ಟಿಗೆ ವಿಧವೆಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ಮಾಡಿಕೊಟ್ಟಿದೆ.

ವಿಧವೆ ಮತ್ತು ಆಕೆಯ ಮಗ ಸ್ಥಳೀಯ ದೇವಸ್ಥಾನದ ಉತ್ಸವದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ತಮಿಳುನಾಡಿನ ಈರೋಡ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ.

ಮಹಿಳೆಯ ಸ್ಥಾನಮಾನ ಮತ್ತು ಅಸ್ಮಿತೆಯು ಆಕೆಯ ವೈವಾಹಿಕ ಸ್ಥಿತಿಯ ಮೇಲೆ ಅವಲಂಬಿತವಾಗಿಲ್ಲ. ಆದ್ದರಿಂದ ಕೇವಲ ವಿಧವೆ ಎಂಬ ಕಾರಣಕ್ಕೆ ಮಹಿಳೆ ದೇವಸ್ಥಾನ ಪ್ರವೇಶಿಸುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ನ್ಯಾಯಮೂರ್ತಿ ಆನಂದ್‌ ವೆಂಕಟೇಶ್ ಹೇಳಿದ್ದಾರೆ.

ತನ್ನನ್ನು ಹಾಗೂ ತನ್ನ ಮಗನನ್ನು ಸ್ಥಳೀಯ ದೇವಾಲಯ ಪ್ರವೇಶಿಸದಂತೆ ತಡೆಹಿಡಿಯಲಾಗಿದ್ದು ಮುಂಬರುವ ರಥೋತ್ಸವದಲ್ಲಿ ಪಾಲ್ಗೊಳ್ಳದಂತೆ ಕೆಲ ಗ್ರಾಮಸ್ಥರು ತಡೆಯುತಿದ್ದಾರೆ ಎಂದು ಆರೋಪಿಸಿ ಈರೋಡ್ ಜಿಲ್ಲೆಯ ನಿವಾಸಿ ತಂಗಮಣಿ ಎಂಬುವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಧವೆ ದೇಗುಲ ಪ್ರವೇಶಿಸಿದರೆ ದೇಗುಲದ ಆವರಣ ಅಶುದ್ಧಗೊಳ್ಳಬಹುದು ಎಂಬ ಪ್ರತೀತಿಯಿಂದಾಗಿ ಕೆಲ ಸ್ಥಳೀಯರು ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅರ್ಜಿದಾರೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಆಕೆಯ ಮೃತ ಪತಿ ತಾನು ಪ್ರಾರ್ಥನೆ ಸಲ್ಲಿಸಲು ಬಯಸಿದ್ದ ದೇವಸ್ಥಾನದಲ್ಲೇ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂಬ ಅಂಶದ ಹೊರತಾಗಿಯೂ ಹೀಗೆ ನಡೆದುಕೊಳ್ಳಲಾಗಿದೆ ಎಂದು ಅವರು ದೂರಿದ್ದರು.

ಇಂತಹ ಹಳೆಯ ನಂಬಿಕೆಗಳು ರಾಜ್ಯದಲ್ಲಿ ಇನ್ನೂ ಚಾಲ್ತಿಯಲ್ಲಿರುವುದು ವಿಷಾದನೀಯ ಎಂದು ನ್ಯಾ. ವೆಂಕಟೇಶ್ ಹೇಳಿದರು.

ವೈವಾಹಿಕ ಸ್ಥಿತಿ ಅವಲಂಬಿಸಿ ಆಕೆಯನ್ನು ಯಾವುದೇ ರೀತಿ ಕೀಳಾಗಿ ಕಾಣಲು ಅಥವಾ ಕಡೆಗಣಿಸಲು ಸಾಧ್ಯವಾಗದಂತಹ ಸ್ಥಾನಮಾನ ಮತ್ತು ಅಸ್ಮಿತೆ ಮಹಿಳೆಗೆ ಇದೆ ಎಂದು ನ್ಯಾಯಾಲಯ ಹೇಳಿದೆ.

ಹಾಗಾಗಿ, ಅರ್ಜಿದಾರೆ  ಮತ್ತು ಅವರ ಮಗ ಉತ್ಸವಕ್ಕೆ ಹಾಜರಾಗುವುದನ್ನು ಮತ್ತು ಅವರು ಸಲ್ಲಿಸುವ ದೇವರ ಪೂಜೆ ತಡೆಯುವ ಹಕ್ಕು ಸ್ಥಳೀಯರಿಗೆ ಇಲ್ಲ ಎಂದು ನ್ಯಾಯಾಲಯ ಒತ್ತಿಹೇಳಿತು.

ವಿಧವೆಯೊಬ್ಬಳು ದೇವಸ್ಥಾನವನ್ನು ಪ್ರವೇಶಿಸಿದರೆ ಅಶುದ್ಧತೆ ಉಂಟಾಗುತ್ತದೆ ಎಂಬ ಹಳೆಯ  ನಂಬಿಕೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವುದು ತುಂಬಾ ದುರದೃಷ್ಟಕರ. ಸುಧಾರಕರು ಈ ಎಲ್ಲಾ ಅರ್ಥಹೀನ ನಂಬಿಕೆಗಳನ್ನು ಮುರಿಯಲು ಯತ್ನಿಸುತ್ತಿದ್ದರೂ, ಕೆಲವು ಹಳ್ಳಿಗಳಲ್ಲಿ ಇದು ಆಚರಣೆಯಲ್ಲಿದೆ. ಇಂತಹವು ಪುರುಷನು ತನ್ನ ಅನುಕೂಲಕ್ಕೆ ತಕ್ಕಂತೆ ರೂಪಿಸಿದ ಸಿದ್ಧಾಂತಗಳಾಗಿದ್ದು ವಾಸ್ತವವಾಗಿ ಪತಿಯನ್ನು ಕಳೆದುಕೊಂಡ ಕಾರಣಕ್ಕೆ ಮಹಿಳೆಯನ್ನು ಅಪಮಾನಿಸುತ್ತವೆ ಎಂದು ನ್ಯಾಯಾಲಯವು ತನ್ನ ಅದೇಶದಲ್ಲಿ ಹೇಳಿದೆ.

ಮುಂದುವರೆದು, ಕಾನೂನಿನ ಆಳ್ವಿಕೆಯಲ್ಲಿರುವ ಸುಸಂಸ್ಕೃತ ಸಮಾಜದಲ್ಲಿ ಇದೆಲ್ಲವೂ ಮುಂದುವರಿಯಲು ಸಾಧ್ಯವಿಲ್ಲ. ವಿಧವೆಯರು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ತಡೆಯಲು ಯಾರಾದರೂ ಪ್ರಯತ್ನ ಮಾಡಿದರೆ, ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ, ಅರ್ಜಿದಾರರಿಗೆ ಬೆದರಿಕೆ ಹಾಕಿರುವ ವ್ಯಕ್ತಿಗಳನ್ನು ಕರೆಸಿ, ಈ ವರ್ಷ ಆಗಸ್ಟ್ 9 ಮತ್ತು 10 ರಂದು ನಡೆಯಲಿರುವ ಉತ್ಸವದಲ್ಲಿ ಅರ್ಜಿದಾರರು ಮತ್ತು ಅವರ ಮಗ ದೇವಸ್ಥಾನ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವಂತೆ ನ್ಯಾಯಾಲಯ ಸ್ಥಳೀಯ ಪೊಲೀಸರಿಗೆ ಸೂಚಿಸಿದೆ.