ಲೈಂಗಿಕ ಅಪರಾಧಗಳಲ್ಲಿ ಸಂತ್ರಸ್ತೆಯರ ಮೇಲೆ ವೈದ್ಯಕೀಯ ವೃತ್ತಿಪರರು ನಡೆಸುವ ಎರಡು ಬೆರಳು ಪರೀಕ್ಷೆಯನ್ನು ತಕ್ಷಣವೇ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ರಾಜೀವಗಾಂಧಿ ಮತ್ತು ಸರ್ಕಾರ ನಡುವಣ ಪ್ರಕರಣ].
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ - 2012ರ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಸಲ್ಲಿಸಲಾಗಿದ್ದ ಮೇಲ್ಮನವಿಯೊಂದರ ವಿಚಾರಣೆ ನ್ಯಾಯಮೂರ್ತಿಗಳಾದ ಆರ್ ಸುಬ್ರಮಣಿಯನ್ ಮತ್ತು ಎನ್ ಸತೀಶ್ ಕುಮಾರ್ ಅವರಿದ್ದ ಪೀಠದಲ್ಲಿ ನಡೆಯಿತು. ಆಗ ಎರಡೂ ಕಡೆಯ ವಕೀಲರು ಈ ಪರೀಕ್ಷೆ ನಿಷೇಧಿಸುವಂತೆ ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ಹಾಗೂ ಗುಜರಾತ್ ಹೈಕೋರ್ಟ್ ತಮ್ಮ ಕೆಲ ತೀರ್ಪುಗಳಲ್ಲಿ, ಪರೀಕ್ಷೆಯನ್ನು ಅಸಾಂವಿಧಾನಿಕ ಎಂದು ಪರಿಗಣಿಸಿವೆ. ಹೀಗಾಗಿ ಈ ಪದ್ಧತಿಯನ್ನು ಕೊನೆಗಾಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವುದು ಅಗತ್ಯ ಎಂದು ನ್ಯಾಯಾಲಯ ತಿಳಿಸಿತು.
“…ನ್ಯಾಯಾಂಗ ತೀರ್ಪುಗಳ ಹಿನ್ನೆಲೆಯಲ್ಲಿ ಎರಡು ಬೆರಳಿನ ಪರೀಕ್ಷೆ ಮುಂದುವರೆಸಲು ಅನುಮತಿ ನೀಡಬಾರದು ಎಂಬುದರಲ್ಲಿ ನಮಗೆ ಯಾವುದೇ ಅನುಮಾನ ಉಳಿದಿಲ್ಲ. ಆದ್ದರಿಂದ ಲೈಂಗಿಕ ಅಪರಾಧಗಳ ಸಂತ್ರಸ್ತೆಯರ ಮೇಲೆ ವೈದ್ಯಕೀಯ ವೃತ್ತಿಪರರು ನಡೆಸುವ ಎರಡು ಬೆರಳು ಪರೀಕ್ಷೆಯನ್ನು ತಕ್ಷಣವೇ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇವೆ” ಎಂದಿದೆ.
ಐಪಿಸಿ ಸೆಕ್ಷನ್ 363 (ಅಪಹರಣ) ಮತ್ತು ಪೋಕ್ಸೊ ಕಾಯಿದೆ ಸೆಕ್ಷನ್ 5(i) [ತೀವ್ರ ಲೈಂಗಿಕ ದೌರ್ಜನ್ಯ] ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಆರೋಪಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿದೆ. ಇದೇ ವೇಳೆ ವಿಚಾರಣಾ ನ್ಯಾಯಾಲಯ ಆರೋಪಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳಿಗೆ ಇಳಿಸಿ ಹೈಕೋರ್ಟ್ ಆದೇಶಿಸಿತು.