Madras High Court, TVK flag, Vijay  
ಸುದ್ದಿಗಳು

ಆದಾಯ ತೆರಿಗೆ ದಂಡ ಪ್ರಶ್ನಿಸಿ ನಟ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

2015ರಲ್ಲಿ ವಿಜಯ್ ಅವರ ನಿವಾಸದಲ್ಲಿ ನಡೆಸಿದ ಶೋಧದ ಸಮಯದಲ್ಲಿ ಇಲಾಖೆ ಸುಮಾರು ₹16 ಕೋಟಿ ಬಹಿರಂಗಪಡಿಸದ ಆದಾಯ ಪತ್ತೆಹಚ್ಚಿತ್ತು.

Bar & Bench

ಆದಾಯ ಬಹಿರಂಗಪಡಿಸದ ಆರೋಪದಡಿ ಆದಾಯ ತೆರಿಗೆ ಇಲಾಖೆಯಿಂದ ವಿಧಿಸಲಾದ ₹1.5 ಕೋಟಿ ದಂಡ ಪ್ರಶ್ನಿಸಿ ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ಜೋಸೆಫ್ ವಿಜಯ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಚಂದ್ರಶೇಖರನ್‌ ಜೋಸೆಫ್‌ ವಿಜಯ್‌ ಮತ್ತು ಡಿಸಿಐಟಿ ನಡುವಣ ಪ್ರಕರಣ]̤

ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ. 2015ರಲ್ಲಿ ನಟ ವಿಜಯ್ ಅವರ ನಿವಾಸದಲ್ಲಿ ನಡೆಸಿದ ಆದಾಯ ತೆರಿಗೆ ದಾಳಿ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿತ್ತು. ಆ ವೇಳೆ ಸುಮಾರು ₹16 ಕೋಟಿ ಮೊತ್ತದ ಬಹಿರಂಗಪಡಿಸದ ಆದಾಯ ಪತ್ತೆಯಾಗಿದೆ ಎಂದು ಇಲಾಖೆ ಹೇಳಿತ್ತು.

ಆದಾಯ ತೆರಿಗೆ ಅಧಿಕಾರಿಗಳ ಪ್ರಕಾರ, ಈ ಮೊತ್ತ 2015ರ ತಮಿಳು ಚಿತ್ರ ʼಪುಲಿʼಗಾಗಿ ವಿಜಯ್ ಅವರಿಗೆ ದೊರೆತ ಸಂಭಾವನೆಯಾಗಿದ್ದು, ಅದರಲ್ಲಿ ಸುಮಾರು ₹5 ಕೋಟಿ ನಗದು ರೂಪದಲ್ಲಿ ಪಾವತಿಸಲಾಗಿತ್ತು. ಈ ವಿಚಾರವನ್ನು ಸ್ವಯಂಪ್ರೇರಿತವಾಗಿ ಆದಾಯ ತೆರಿಗೆ ವಿವರಗಳಲ್ಲಿ ಬಹಿರಂಗಪಡಿಸಿರಲಿಲ್ಲ ಎಂದು ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಾಯಿದೆಯಡಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿತು. ಪರಿಣಾಮ ಜೂನ್ 30, 2022ರಂದು ₹1.5 ಕೋಟಿ ದಂಡ ವಿಧಿಸಲಾಗಿತ್ತು.

ಸೂಕ್ತ ಸಂದರ್ಭಗಳಲ್ಲಿ ದಂಡ ವಿಧಿಸುವ ಅಧಿಕಾರ  ಇಲಾಖೆಗೆ ಇದೆ ಎಂಬುದನ್ನು ಹೈಕೋರ್ಟ್ ಮುಂದೆ ಪ್ರಶ್ನಿಸದ ವಿಜಯ್‌ ಪರ ವಕೀಲರು  ದಂಡದ ಆದೇ  ಕಾಲಮಿತಿಯನ್ನು ಮೀರಿದೆ ಎಂದು ವಾದಿಸಿದರು. ದಂಡ ವಿಧಿಸಲು ಕಾನೂನಿನಲ್ಲಿ ನಿಗದಿಪಡಿಸಿದ ಅಂತಿಮ ಅವಧಿ ಜೂನ್ 30, 2019ಕ್ಕೆ ಮುಕ್ತಾಯವಾಗಿದ್ದು, ಅದರ ಮೂರು ವರ್ಷಗಳ ನಂತರ ನೀಡಲಾದ ಆದೇಶ ಕಾನೂನುಬದ್ಧವಲ್ಲ ಎಂದರು.

ಈ ವಾದಕ್ಕೆ ಆಕ್ಷೇಪಿಸಿದ ಆದಾಯ ತೆರಿಗೆ ಇಲಾಖೆ ಯಾವುದೇ ಪ್ರಕ್ರಿಯಾತ್ಮಕ ಅಥವಾ ಕಾನೂನು ಉಲ್ಲಂಘನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿತು. 2015ರ ದಾಳಿ ಬಳಿಕ ನಡೆದ ಮೌಲ್ಯಮಾಪನ ಪ್ರಕ್ರಿಯೆ ಹಾಗೂ ನಂತರದ ಕ್ರಮಗಳ ಸ್ವಭಾವವನ್ನು ಆಧರಿಸಿ ಕಾಲಮಿತಿಯನ್ನು ಸರಿಯಾಗಿ ಲೆಕ್ಕ ಹಾಕಲಾಗಿದೆ ಹಾಗೂ ಕಾನೂನಿನ ಪ್ರಕಾರವೇ ದಂಡ ವಿಧಿಸಲಾಗಿದೆ ಎಂದು ಇಲಾಖೆ ತಿಳಿಸಿತು.

ವಾದ ಆಲಿಸಿದ ಹೈಕೋರ್ಟ್‌ ವಿಜಯ್‌ ಅವರ ಮನವಿ ತಿರಸ್ಕರಿಸಿ ದಂಡ ವಿಧಿಸುವ ಆದಾಯ ತೆರಿಗೆ ಇಲಾಖೆ ಪ್ರಕ್ರಿಯೆಯ ಮಾನ್ಯತೆಯನ್ನು ಎತ್ತಿಹಿಡಿಯಿತು.