Madras High Court
Madras High Court 
ಸುದ್ದಿಗಳು

ಬುದ್ಧ ಪ್ರತಿಮೆ ಪತ್ತೆ: ಹಿಂದೂ ದೇವಾಲಯ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸೂಚಿಸಿದ ಮದ್ರಾಸ್ ಹೈಕೋರ್ಟ್, ಪೂಜೆಗೆ ತಡೆ

Bar & Bench

ಸೇಲಂನಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ಬುದ್ಧನ ಮೂರ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ದೇಗುಲವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ತಮಿಳುನಾಡು ಪುರಾತತ್ವ ಇಲಾಖೆಗೆ ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿದೆ [ಪಿ ರಂಗನಾಥನ್ ವಿರುದ್ಧ ತಮಿಳುನಾಡು ಸರ್ಕಾರ ನಡುವಣ ಪ್ರಕರಣ].

ಸಾರ್ವಜನಿಕರು ದೇಗುಲ ಪ್ರವೇಶಿಸಲು ಅವಕಾಶ ನೀಡಲಾಗಿದ್ದು ಬುದ್ಧನ ಮೂರ್ತಿಗೆ ಯಾವುದೇ ಹಿಂದೂ ಪೂಜೆ ಅಥವಾ ಧಾರ್ಮಿಕ ವಿಧಿವಿಧಾನ ಕೈಗೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

"ಶಿಲ್ಪವು ಬುದ್ಧನದು ಎಂಬ ತೀರ್ಮಾನಕ್ಕೆ ಬಂದ ನಂತರ ತಪ್ಪು ಗುರುತನ್ನು ಮುಂದುವರೆಸಲು ಅನುಮತಿಸಲಾಗದು" ಎಂದು ಏಕ ಸದಸ್ಯ ಪೀಠ ತಿಳಿಸಿತು.

ಸೇಲಂನ ತಲೈವೆಟ್ಟಿ ಮುನಿಯಪ್ಪನ್‌ ದೇಗುಲದಲ್ಲಿ ಬುದ್ಧನ ಮೂರ್ತಿ ಇದೆ. ಹೀಗಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿಯಂತ್ರಣದಲ್ಲಿರುವ ವಿವಾದಿತ ಭೂಮಿ ಮತ್ತು ದೇಗುಲದ ಆವರಣವನ್ನು ಬೌದ್ಧವಿಹಾರವಾಗಿ ಮರುಸ್ಥಾಪಿಸಬೇಕೆಂದು ಕೋರಿ ಬೌದ್ಧ ಟ್ರಸ್ಟ್‌ ಅರ್ಜಿ ಸಲ್ಲಿಸಿತ್ತು.

ಇಡೀ ವಿವಾದಕ್ಕೆ ತೆರೆ ಎಳೆಯುವ ಸಲುವಾಗಿ ನ್ಯಾಯಾಲಯ ಪುರಾತತ್ವ ಇಲಾಖೆಯಿಂದ ವರದಿ ಕೇಳಿತ್ತು. ಪುರಾತತ್ವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಸಲ್ಲಿಸಿದ ವರದಿ ಆಧರಿಸಿ ದೇಗುಲದೊಳಗಿನ ಶಿಲ್ಪ ಬುದ್ಧನದ್ದು ಎಂದು ನ್ಯಾಯಾಲಯ ನಿರ್ಧರಿಸಿದೆ.

ವಿಗ್ರಹದ ಸಮೀಕ್ಷೆ ನಡೆಸಿದ ಪುರಾತತ್ವ ಇಲಾಖೆಯು, ದೇವರ ವಿಗ್ರಹವನ್ನು ಸ್ವಚ್ಛಗೊಳಿಸಿದ ನಂತರ ವಿಗ್ರಹದ ತಲೆಯ ಭಾಗವು ಬುದ್ಧನ ರೀತಿಯಲ್ಲಿ ಗುಂಗುರು ಕೂದಲನ್ನು, ತಲೆಯ ಮೇಲೆ ಬುದ್ಧನ ರೀತಿಯ ಜಟೆಯನ್ನು (ಉಷ್ಣೀಷ) ಹಾಗೂ ಉದ್ದನೆಯ ಕಿವಿಯ ಆಲೆಯನ್ನೂ ಹೊಂದಿರುವುದು ಕಂಡುಬಂದಿದೆ. ಹಾಗಾಗಿ ವಿಗ್ರಹವು ಬುದ್ಧ ಗುರುವಿನ ಹಲವು ಮಹಾಲಕ್ಷಣಗಳನ್ನು ಹೊಂದಿದೆ ಎಂದು ವರದಿಯಲ್ಲಿ ಹೇಳಿತ್ತು.