Jana Nayagan and Madras High Court  
ಸುದ್ದಿಗಳು

ವಿಜಯ್ ಚಿತ್ರ ಜನ ನಾಯಗನ್ ಬಿಡುಗಡೆಗೆ ತಕ್ಷಣ ಅನುಮತಿ ನೀಡುವಂತೆ ಸಿಬಿಎಫ್‌ಸಿಗೆ ಮದ್ರಾಸ್ ಹೈಕೋರ್ಟ್ ಆದೇಶ

ನ್ಯಾಯಮೂರ್ತಿ ಪಿ.ಟಿ. ಆಶಾ ಇಂದು ಬೆಳಿಗ್ಗೆ ತೀರ್ಪು ಪ್ರಕಟಿಸಿದರು.

Bar & Bench

ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರ ಬಿಡುಗಡೆಗೆ ಅಂತಿಮ ಸೆನ್ಸಾರ್ ಅನುಮತಿಯನ್ನು ಕೂಡಲೇ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ)  ಮದ್ರಾಸ್ ಹೈಕೋರ್ಟ್ ಶುಕ್ರವಾರ  ಆದೇಶಿಸಿದ್ದು ಮಂಡಳಿಯ ಸೆನ್ಸಾರ್ ಪ್ರಮಾಣೀಕರಣ ಮರುಪರಿಶೀಲನಾ ನಿರ್ಧಾರ ದೋಷಪೂರಿತವಾಗಿದೆ ಎಂದು ಹೇಳಿದೆ.

ಬುಧವಾರದ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಪಿ ಟಿ ಆಶಾ ಇಂದು ಬೆಳಿಗ್ಗೆ ಪ್ರಕಟಿಸಿದರು. ಚಿತ್ರ ಇಂದು (ಶುಕ್ರವಾರ ಜನವರಿ 9) ತೆರೆ ಕಾಣಬೇಕಿತ್ತು. ಆದರೆ ಸಿಬಿಎಫ್‌ಸಿ ಚಿತ್ರ ಬಿಡುಗಡೆಗೆ ಅಂತಿಮ ಪ್ರಮಾಣಪತ್ರ ನೀಡಿರಲಿಲ್ಲ. ಹೀಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದ ನಿರ್ಮಾಪಕರು ಅಂತಿಮ ಸೆನ್ಸಾರ್ ಪ್ರಮಾಣಪತ್ರ ನೀಡುವಲ್ಲಿ ಸಿಬಿಎಫ್‌ಸಿ ವಿಳಂಬ ಮಾಡಿದೆ ಎಂದು ದೂರಿದ್ದರು. ವಿಜಯ್  ಅವರು ತಾವು ಈಚೆಗೆ ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಹಿನ್ನೆಲೆಯಲ್ಲಿ 'ಜನ ನಾಯಗನ್' ಅವರ ಕೊನೆಯ ಚಿತ್ರ ಎಂದು ಹೇಳಲಾಗುತ್ತಿದೆ.

ನಿರ್ಮಾಪಕರು 2025 ಡಿಸೆಂಬರ್ 18ರಂದು ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಿಬಿಎಫ್‌ಸಿ ಪರಿಶೀಲನಾ ಸಮಿತಿಯು ವೈಯಕ್ತಿಕ ವಿಚಾರಣೆಯ ನಂತರ, ಹಿಂಸಾಚಾರ, ಹೋರಾಟದ ದೃಶ್ಯಗಳು, ರಕ್ತಪಾತದ ದೃಶ್ಯಗಳು ಹಾಗೂ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಉಲ್ಲೇಖಗಳನ್ನು ಉಲ್ಲೇಖಿಸಿ ಕೆಲವು ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಹಾಗೆ ಮಾಡಿದರೆ ಚಿತ್ರಕ್ಕೆ ಯುಎ 16+ ಪ್ರಮಾಣ ಪತ್ರ ನೀಡುವಂತೆ ಶಿಫಾರಸ್ಸು ಮಾಡಿತ್ತು. ಸೂಚಿಸಿದ್ದ ಎಲ್ಲಾ ತಿದ್ದುಪಡಿ ಮಾಡಿದ್ದ ನಿರ್ಮಾಪಕರು ಚಿತ್ರದ ಹೊಸ ಆವೃತ್ತಿಯನ್ನು ಸಲ್ಲಿಸಿದ್ದರು. ನಂತರ ಚಿತ್ರಕ್ಕೆ ಯುಎ 16+ ಪ್ರಮಾಣಪತ್ರ ನೀಡಲಾಗುವುದು ಎಂದು ಅವರಿಗೆ ತಿಳಿಸಲಾಗಿತ್ತು.

ಇಷ್ಟೆಲ್ಲಾ ಆದರೂ ಧಾರ್ಮಿಕ ಭಾವನೆಗಳು ಮತ್ತು ಸಶಸ್ತ್ರ ಪಡೆಗಳ ಚಿತ್ರಣಕ್ಕೆ ಸಂಬಂಧಿಸಿದ ದೂರು ಬಂದಿರುವುದರಿಂದ ಚಲನಚಿತ್ರ (ಪ್ರಮಾಣೀಕರಣ) ನಿಯಮಾವಳಿ 24ರ ಅಡಿ ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಲಾಗಿದೆ ಎಂಬ ಇಮೇಲ್‌ ತಮಗೆ ಬಂದಿರುವುದನ್ನು ನಿರ್ಮಾಪಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಚಿತ್ರ ನಿರ್ಮಾಪಕರು ಈಗಾಗಲೇ ಸಿಬಿಎಫ್‌ಸಿ ಸೂಚಿಸಿದಂತೆ ಕೆಲ ದೃಶ್ಯಗಳನ್ನು ತೆಗೆದು ಹಾಕಿರುವುದರಿಂದ ನ್ಯಾಯಾಲಯ ಸಿಬಿಎಫ್‌ಸಿಗೆ ಯು/ಎ 16 ಪ್ರಮಾಣಪತ್ರವನ್ನು ತಕ್ಷಣವೇ ನೀಡುವಂತೆ ಆದೇಶಿಸಿದೆ.

ಜನವರಿ 6ರಂದು ನಡೆದ ಮೊದಲ ವಿಚಾರಣೆ ವೇಳೆ, ಸಾಮಾನ್ಯ ಜನರಲ್ಲಿ ಯಾರೂ ಚಿತ್ರವನ್ನು ವೀಕ್ಷಿಸದೇ ಇರುವಾಗ ಅದರ ವಿಷಯದ ಬಗ್ಗೆ ದೂರು ಹೇಗೆ ಸಲ್ಲಿಸಬಹುದು ಎಂದು ನಿರ್ಮಾಪಕರು ಪ್ರಶ್ನಿಸಿದ್ದರು. ನಂತರದ ವಿಚಾರಣೆಯಲ್ಲಿ, ಆ ದೂರನ್ನು ಪರಿಶೀಲನಾ ಸಮಿತಿಯ ಸದಸ್ಯರೊಬ್ಬರಿಂದಲೇ ಸಲ್ಲಿಸಲಾಗಿದೆ. ಅವರ ಆಕ್ಷೇಪಣೆಗಳನ್ನು ದಾಖಲಿಸಲಾಗಿಲ್ಲ ಎಂಬುದು ಬಹಿರಂಗವಾಗಿತ್ತು.

ನಿರ್ಮಾಪಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸತೀಶ್‌ ಪರಾಸರನ್‌  ಈ ವಿಷಯವನ್ನು ನಿರ್ಮಾಪಕರಿಗೆ ತಿಳಿಸದೇ ಇರಲು ಕಾರಣವೇನು ಎಂದು ಪ್ರಶ್ನಿಸಿದರು. ಅಲ್ಲದೆ ಸಿಬಿಎಫ್‌ಸಿ ಹೆಚ್ಚು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಚಿತ್ರಕ್ಕೆ ಸುಮಾರು ₹500 ಕೋಟಿ ಹೂಡಿಕೆ ಮಾಡಲಾಗಿದೆ ಎಂದರು.

ಆದರೆ ಸಿಬಿಎಫ್‌ಸಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎ ಆರ್‌ ಎಲ್‌ ಸುಂದರೇಶನ್‌ ಅವರು ಮಂಡಳಿಗೆ ಯಾವುದೇ ದುರುದ್ದೇಶ ಇರಲಿಲ್ಲ. ಸಿನಿಮಾವನ್ನು ಮರುಪರಿಶೀಲನಾ ಸಮಿತಿಗೆ ಒಪ್ಪಿಸುವ ಅಧಿಕಾರ ಸಿಬಿಎಫ್‌ಸಿ ಅಧ್ಯಕ್ಷರಿಗೆ ಇದೆ ಎಂದರು.

ಆದರೆ ಈ ವಾದ ತಿರಸ್ಕರಿಸಿದ ಹೈಕೋರ್ಟ್‌ ನಿರ್ಮಾಪಕರು ಈಗಾಗಲೇ ಸಿಬಿಎಫ್‌ಸಿ ಸೂಚಿಸಿದ ದೃಶ್ಯಾವಳಿಗಳನ್ನು ತೆಗೆದುಹಾಕಿರುವುದರಿಂದ ಕೂಡಲೇ ಚಿತ್ರಕ್ಕೆ ಪ್ರಮಾಣಪತ್ರ ನೀಡಬೇಕು ಎಂದು ಆದೇಶಿಸಿತು.