

ನಟ ಹಾಗೂ ರಾಜಕಾರಣಿ, ವಿಜಯ್ ಅವರ ಮುಂಬರುವ ಸಿನಿಮಾ 'ಜನ ನಾಯಗನ್' ಚಿತ್ರ ಮರುಪರಿಶೀಲನೆಗೆ ಮುಂದಾದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರ್ಧಾರ ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ [ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಸಿಬಿಎಫ್‌ಸಿ ನಡುವಣ ಪ್ರಕರಣ].
ವಿಜಯ್ ಅವರು ತಾವು ಈಚೆಗೆ ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಹಿನ್ನೆಲೆಯಲ್ಲಿ 'ಜನ ನಾಯಗನ್' ಅವರ ಕೊನೆಯ ಚಿತ್ರ ಎಂದು ಹೇಳಲಾಗುತ್ತಿದೆ. ಚಿತ್ರ ಶುಕ್ರವಾರ (ಜನವರಿ 9) ತೆರೆ ಕಾಣಬೇಕಿತ್ತು. ಆದರೆ, ಸಿಬಿಎಫ್‌ಸಿ ಇನ್ನೂ ಚಿತ್ರ ಬಿಡುಗಡೆಗೆ ಅಂತಿಮ ಪ್ರಮಾಣಪತ್ರ ನೀಡಿಲ್ಲ. ಸಿಬಿಎಫ್‌ಸಿಯ ಪರಿಶೀಲನಾ ಸಮಿತಿ ಈ ಹಿಂದೆ ಚಿತ್ರದ ನಿರ್ದಿಷ್ಟ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದರೆ ಮಾತ್ರ 'ಯು/ಎ 16+' ಪ್ರಮಾಣಪತ್ರ ನೀಡಬೇಕೆಂದು ಶಿಫಾರಸು ಮಾಡಿತ್ತು.
ಆದರೆ ಚಿತ್ರ ನೋಡದ ವ್ಯಕ್ತಿಯೊಬ್ಬ ನೀಡಿದ ದೂರು ಆಧರಿಸಿ ಸಿಬಿಎಫ್‌ಸಿ ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ವಹಿಸಿದೆ ಎಂದು ನಿರ್ಮಾಕರು ದೂರಿದ್ದಾರೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಆರ್‌ಎಲ್ ಸುಂದರೇಶನ್ ಅವರು ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ಬೇಕು ಎಂದು ನ್ಯಾಯಮೂರ್ತಿ ಪಿ ಟಿ ಆಶಾ ಅವರನ್ನು ಕೋರಿದರು. ನಾಳೆಗೆ ವಿಚಾರಣೆ ಮುಂದೂಡಲಾಗಿದೆ.
ನಿರ್ಮಾಪಕರು 2025 ಡಿಸೆಂಬರ್ 18ರಂದು ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಿಬಿಎಫ್‌ಸಿ ಪರಿಶೀಲನಾ ಸಮಿತಿಯು ವೈಯಕ್ತಿಕ ವಿಚಾರಣೆಯ ನಂತರ, ಹಿಂಸಾಚಾರ, ಹೋರಾಟದ ದೃಶ್ಯಗಳು, ರಕ್ತಪಾತದ ದೃಶ್ಯಗಳು ಹಾಗೂ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಉಲ್ಲೇಖಗಳನ್ನು ಉಲ್ಲೇಖಿಸಿ ಕೆಲವು ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಹಾಗೆ ಮಾಡಿದರೆ ಚಿತ್ರಕ್ಕೆ ಯುಎ 16+ ಪ್ರಮಾಣ ಪತ್ರ ನೀಡುವಂತೆ ಶಿಫಾರಸ್ಸು ಮಾಡಿತ್ತು. ಸೂಚಿಸಿದ್ದ ಎಲ್ಲಾ ತಿದ್ದುಪಡಿ ಮಾಡಿದ್ದ ನಿರ್ಮಾಪಕರು ಚಿತ್ರದ ಹೊಸ ಆವೃತ್ತಿಯನ್ನು ಸಲ್ಲಿಸಿದ್ದರು. ನಂತರ ಚಿತ್ರಕ್ಕೆ ಯುಎ 16+ ಪ್ರಮಾಣಪತ್ರ ನೀಡಲಾಗುವುದು ಎಂದು ಅವರಿಗೆ ತಿಳಿಸಲಾಗಿತ್ತು.
ಇಷ್ಟೆಲ್ಲಾ ಆದರೂ ಧಾರ್ಮಿಕ ಭಾವನೆಗಳು ಮತ್ತು ಸಶಸ್ತ್ರ ಪಡೆಗಳ ಚಿತ್ರಣಕ್ಕೆ ಸಂಬಂಧಿಸಿದ ದೂರು ಬಂದಿರುವುದರಿಂದ ಚಲನಚಿತ್ರ (ಪ್ರಮಾಣೀಕರಣ) ನಿಯಮಾವಳಿ 24ರ ಅಡಿ ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಲಾಗಿದೆ ಎಂಬ ಇಮೇಲ್ ತಮಗೆ ಬಂದಿರುವುದಾಗಿ ನಿರ್ಮಾಪಕರು ತಿಳಿಸಿದ್ದು ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
'ಜನ ನಾಯಗನ್' ಚಿತ್ರ 24 ದೇಶಗಳಲ್ಲಿ ಸೆನ್ಸಾರ್ ಅನುಮತಿ ಪಡೆದಿದೆ. ದೇಶದಲ್ಲಿ ಬಿಡುಗಡೆ ವಿಳಂಬವಾದರೆ ಅದು ಪೈರಸಿಗೆ ದಾರಿ ಮಾಡಿಕೊಡಲಿದೆ. ನಿರ್ಮಾಪಕರಿಗೆ ಭಾರೀ ವಾಣಿಜ್ಯಾತ್ಮಕ ನಷ್ಟ ಉಂಟಾಗಲಿದ್ದು ಅವರ ವರ್ಚಸ್ಸಿಗೆ ಧಕ್ಕೆ ಒದಗಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ವಿಶ್ವದಾದ್ಯಂತ 5,000ಕ್ಕೂ ಹೆಚ್ಚು ಪರದೆಗಳಲ್ಲಿ ತೆರೆ ಕಾಣಲಿರುವ ಚಿತ್ರಕ್ಕೆ ಸುಮಾರು ₹500 ಕೋಟಿ ವ್ಯಯಿಸಲಾಗಿದೆ ಎಂದು ನಿರ್ಮಾಪಕರ ಪರವಾಗಿ ಹಿರಿಯ ವಕೀಲ ಸತೀಶ್ ಪರಾಸರನ್ ವಾದ ಮಂಡಿಸಿದರು.