Madras High Court and a representation of crypto currency 
ಸುದ್ದಿಗಳು

ಭಾರತೀಯ ಕಾನೂನಿನಡಿ ಕ್ರಿಪ್ಟೋಕರೆನ್ಸಿ ಆಸ್ತಿ: ಮದ್ರಾಸ್ ಹೈಕೋರ್ಟ್

ವಜಿರ್‌ಎಕ್ಸ್‌ ವೇದಿಕೆ ವಿರುದ್ಧ 1996ರ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ ಸೆಕ್ಷನ್ 9ರ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

Bar & Bench

ಭಾರತೀಯ ಕಾನೂನಿನಡಿ ಕ್ರಿಪ್ಟೋಕರೆನ್ಸಿ ಆಸ್ತಿ ಎನಿಸಿಕೊಳ್ಳಲಿದ್ದು ಅದರ ಒಡೆತನ ಮತ್ತು ಹಸ್ತಾಂತರ ಮಾಡಬಹುದಾಗಿದೆ ಎಂದು ಎಂದು ಮದ್ರಾಸ್ ಹೈಕೋರ್ಟ್ ಶನಿವಾರ ತೀರ್ಪು ನೀಡಿದೆ [ಋತಿಕುಮಾರಿ ಮತ್ತು  ಜನ್ಮೈ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ಕ್ರಿಪ್ಟೋಕರೆನ್ಸಿ ಅಮೂರ್ತವಾಗಿದ್ದು ಕಾನೂನುಬದ್ಧ ನಗದು ಅಲ್ಲದಿದ್ದರೂ, ಅದು ಆಸ್ತಿಯ ಅಗತ್ಯ ಗುಣಲಕ್ಷಣ ಹೊಂದಿದೆ ಎಂದು ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅಭಿಪ್ರಾಯಪಟ್ಟರು.

"ಕ್ರಿಪ್ಟೋ ಕರೆನ್ಸಿ ಎಂಬುದು ಆಸ್ತಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದು ಸ್ಪಷ್ಟ ಆಸ್ತಿ ಅಲ್ಲ ಅಥವಾ ನಗದು ಅಲ್ಲ. ಆದರೂ ಇದು (ಪ್ರಯೋಜನಕಾರಿ ವಿಧಾನದಲ್ಲಿ) ಅನುಭವಿಸಲು ಮತ್ತು ಒಡೆತನ ಹೊಂದಲು ಸಾಧ್ಯವಿರುವ ಆಸ್ತಿಯಾಗಿದೆ. ಅದನ್ನು ಹಸ್ತಾಂತರ ಮಾಡಬಹುದಾಗಿದೆ" ಎಂದು ನ್ಯಾಯಾಲಯ ಹೇಳಿದೆ.

2024ರಲ್ಲಿ ನಡೆದ ಸೈಬರ್ ದಾಳಿಯ ನಂತರ ವಜಿರ್‌ಎಕ್ಸ್ ವೇದಿಕೆಯಲ್ಲಿ ಕ್ರಿಪ್ಟೋಕರೆನ್ಸಿ ಮೊತ್ತ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು (ಅರ್ಜಿದಾರರು) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ಪ್ರಕಟಿಸಲಾಗಿದೆ.

ಅರ್ಜಿದಾರರು ಜನವರಿ 2024 ರಲ್ಲಿ ಜನ್ಮೈ ಲ್ಯಾಬ್ಸ್ ನಿರ್ವಹಿಸುವ ವಜಿರ್‌ಎಕ್ಸ್ ವಿನಿಮಯ ವೇದಿಕೆಯಲ್ಲಿ ₹1,98,516 ಹೂಡಿಕೆ ಮಾಡಿ 3,532.30 ಕ್ರಿಪ್ಟೋಕರೆನ್ಸಿ ನಾಣ್ಯಗಳನ್ನು ಖರೀದಿಸಿದ್ದರು. ಅವರಿಗೆ ಪೋರ್ಟ್‌ಫೋಲಿಯೊ ಖಾತೆ ಹಂಚಿಕೆ ಮಾಡಲಾಗಿತ್ತು. ಅವರ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸದೊಂದಿಗೆ ನೋಂದಾಯಿಸಲಾಗಿತ್ತು.

ತಾನು ಕ್ರಿಪ್ಟೋಕರೆನ್ಸಿಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ (ಕೋಲ್ಡ್‌ ವ್ಯಾಲೆಟ್‌) ಸೈಬರ್‌ ದಾಳಿಗೆ ತುತ್ತಾದ ಪರಿಣಾಮ ಎಥೆರಿಯಮ್‌ ಕ್ರಿಪ್ಟೋಕರೆನ್ಸಿ ನಷ್ಟವಾಗಿದೆ. ತನಗೆ 230 ದಶಲಕ್ಷ ಡಾಲರ್‌ ನಷ್ಟ ಉಂಟಾಗಿದೆ ಎಂದು ಜುಲೈ 18, 2024ರಂದು, ವಜಿರ್‌ಎಕ್ಸ್‌ ತನ್ನ ಜಾಲತಾಣದಲ್ಲಿ ಪ್ರಕಟಿಸಿತು. ನಂತರ ಅರ್ಜಿದಾರರ ಖಾತೆ ಸೇರಿದಂತೆ ಎಲ್ಲಾ ಬಳಕೆದಾರರ ಖಾತೆ ಸ್ಥಗಿತಗೊಳಿಸಿತು. ಪರಿಣಾಮ ಬಳಕೆದಾರರು ಕ್ರಿಪ್ಟೋಕರೆನ್ಸಿ ಇರಿಸಿದ್ದ ಖಾತೆಯನ್ನು ಬಳಸುವುದಕ್ಕೆ ಅಥವಾ ಅವುಗಳನ್ನು ಮಾರಾಟ ಮಾಡುವುದಕ್ಕೆ ಅಡ್ಡಿ ಉಂಟಾಯಿತು.

ಆದರೆ ಸೈಬರ್‌ ದಾಳಿಗೆ ತುತ್ತಾದ ಎಥೆರಿಯಮ್‌ ಟೋಕನ್‌ಗಳಿಗಿಂತಲೂ ತಮ್ಮ ಸ್ವತ್ತು ಭಿನ್ನವಾದುವು. ಹೀಗಾಗಿ ತಮ್ಮ ಖಾತೆಯನ್ನು ವಜಿರ್‌ಎಕ್ಸ್‌ ಮರುಹಂಚಿಕೆ ಅಥವಾ ಪುನರ್‌ ನಿಯುಕ್ತಿ ಮಾಡದಂತೆ 1996 ರ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್ 9ರ ಪ್ರಕಾರ ತಡೆಯಾಜ್ಞೆ ನೀಡುವಂತೆ ಕೋರಿದ್ದರು.

ಪ್ರತಿವಾದಿಗಳಾದ ನಿಶ್ಚಲ್ ಶೆಟ್ಟಿ ಸೇರಿದಂತೆ ವಜಿರ್‌ಎಕ್ಸ್‌ನ ಸಿಂಗಾಪುರ ಮೂಲದ ಮಾತೃ ಕಂಪನಿ ಜನ್ಮೈ ಲ್ಯಾಬ್ಸ್ ನಿರ್ದೇಶಕರು ಮನವಿಗೆ ವಿರೋಧ ವ್ಯಕ್ತಪಡಿಸಿದರು.

ಸೈಬರ್ ದಾಳಿಯ ನಂತರ ಝೆಟ್ಟೈ ಪ್ರೈವೇಟ್ ಲಿಮಿಟೆಡ್ ಪುನಾರಚನೆ ಪ್ರಕ್ರಿಯೆ ಆರಂಭಿಸಿದ್ದು ಸಿಂಗಾಪುರ ಹೈಕೋರ್ಟ್ ನೀಡಿರುವ ತೀರ್ಪಿನಂತೆ ಎಲ್ಲಾ ಬಳಕೆದಾರರು ನಷ್ಟವನ್ನು ಅನುಪಾತದ ಆಧಾರದ ಮೇಲೆ ಹಂಚಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.

ಕ್ರಿಪ್ಟೋ ವ್ಯಾಲೆಟ್‌ಗಳನ್ನು ಝೆಟ್ಟೈ ನಿರ್ವಹಿಸುತ್ತಿದ್ದರೆ, ಜನ್ಮೈ ಲ್ಯಾಬ್ಸ್ ಭಾರತೀಯ ರೂಪಾಯಿ ವಹಿವಾಟುಗಳನ್ನು ಮಾತ್ರ ನಿರ್ವಹಿಸುತ್ತಿದೆ ಮತ್ತು ಸಿಂಗಾಪುರದಲ್ಲಿ ನಡೆದ ವಿಚಾರಣೆಗಳು ಸ್ವತ್ತುಗಳನ್ನು ಹೇಗೆ ವಿತರಿಸಬೇಕೆಂದು ತೀರ್ಪು ನೀಡಿವೆ ಎಂದು ವಾದಿಸಲಾಯಿತು.

ಕ್ರಿಪ್ಟೋಕರೆನ್ಸಿ ಎಂಬುದು ಆಸ್ತಿಯ ಸ್ಥಾಪಿತ ಕಾನೂನು ಕಲ್ಪನೆಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ನ್ಯಾಯಮೂರ್ತಿ ವೆಂಕಟೇಶ್ ಅವರು 54 ಪುಟಗಳ ತೀರ್ಪಿನ ಬಹುಭಾಗದಲ್ಲಿ ವಿವರಿಸಿದ್ದಾರೆ.

ಕ್ರಿಪ್ಟೋಕರೆನ್ಸಿಗಳು ಕೇವಲ ದತ್ತಾಂಶವನ್ನು ಒಳಗೊಂಡಿದ್ದರೂ ಅವು ಸ್ಪಷ್ಟವಾಗಿ ಗುರುತಿಸಬಹುದಾದ, ಹಸ್ತಾಂತರಿಸಬಹುದಾದ ಮತ್ತು ಖಾಸಗಿ ಕೀ ಮೂಲಕ ನಿಯಂತ್ರಿಸಬಹುದಾದ ಸ್ವತ್ತು ಎಂದು ಅವರು ಹೇಳಿದ್ದಾರೆ.

ಅಹ್ಮದ್ ಜಿ.ಎಚ್. ಆರಿಫ್  ಮತ್ತು ಸಿಡಬ್ಲ್ಯೂಟಿ ನಡುವಣ ಪ್ರಕರಣದಲ್ಲಿ ನೀಡಿದ ತೀರ್ಪು ಹಾಗೂ ಜಿಲುಭಾಯಿ ನಾನ್ಭಾಯಿ ಖಾಚರ್ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಲಾದ ಆದೇಶದಂತೆ ಭಾರತೀಯ ಕಾನೂನಿನಡಿ ಆಸ್ತಿ ಎಂಬುದು ಎಲ್ಲಾ ರೀತಿಯ ಅಮೂಲ್ಯ ಹಕ್ಕು ಮತ್ತು ಹಿತಾಸಕ್ತಿಗಳನ್ನು ಒಳಗೊಂಡಿದೆ. ಅಲ್ಲದೆ ಕ್ರಿಪ್ಟೋಕರೆನ್ಸಿ ಹಸ್ತಾಂತರಿಸಬಹುದಾದ ಸ್ವತ್ತು ಎಂದು ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ಹೈಕೋರ್ಟ್‌ಗಳು ಕೂಡ ಹೇಳಿವೆ ಎಂಬುದಾಗಿ ಪೀಠ ನುಡಿಯಿತು.

ಭಾರತೀಯ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 2 (47ಎ) ಪ್ರಕಾರ, ಕ್ರಿಪ್ಟೋಕರೆನ್ಸಿಗಳನ್ನು ವರ್ಚುವಲ್ ಡಿಜಿಟಲ್ ಆಸ್ತಿ ಎಂದು ಗುರುತಿಸಲಾಗಿದೆ ಎಂದ ಅದು ಹೇಳಿತು. ಅಲ್ಲದೆ ಸಿಂಗಾಪುರದಲ್ಲಿ ಮಧ್ಯಸ್ಥಿಕೆ ನಡೆದಿರುವುದರಿಂದ ಮದ್ರಾಸ್ ಹೈಕೋರ್ಟ್‌ಗೆ ವಿಚಾರಣೆ ನಡೆಸಲು ಅಧಿಕಾರವಿಲ್ಲ ಎಂಬ ಆಕ್ಷೇಪಣೆಯನ್ನೂ ಏಕಸದಸ್ಯ ಪೀಠ ತಿರಸ್ಕರಿಸಿತು.  ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಭಾರತದಲ್ಲಿ ಹೂಡಿಕೆ ಮಾಡಲಾಗಿದ್ದು, ಹೂಡಿಕೆದಾರರು ಭಾರತದಿಂದ ವಜಿರ್‌ಎಕ್ಸ್ ವೇದಿಕೆಗೆ ಪ್ರವೇಶಿಸಿದ್ದಾರೆ. ಹೀಗಾಗಿ ಪ್ರಕರಣದ ವಿಚಾರಣೆ ನಡೆಸಲು ಮದ್ರಾಸ್‌ ಹೈಕೋರ್ಟ್‌ಗೆ ಪ್ರಾದೇಶಿಕ ಅಧಿಕಾರ ಇದೆ ಎಂದಿತು.

ಅಂತೆಯೇ ಮಧ್ಯಸ್ಥಿಕೆ ಕೇಂದ್ರ ವಿವಾದ ಇತ್ಯರ್ಥಪಡಿಸುವವರೆಗೆ ಅರ್ಜಿದಾರರ ಖಾತೆಯನ್ನು ಮರುಹಂಚಿಕೆ ಇಲ್ಲವೇ ಪುನರ್‌ನಿಯುಕ್ತಿ ಮಾಡದಂತೆ ಜನ್ಮೈ ಲ್ಯಾಬ್ಸ್ ಮತ್ತು ಅದರ ನಿರ್ದೇಶಕರಿಗೆ ಅದು ತಡೆಯಾಜ್ಞೆ ನೀಡಿತು.

[ತೀರ್ಪಿನ ಪ್ರತಿ]

Rhutikumari_Vs_Zanmai_Labs.pdf
Preview