ಮನ್ಸೂರ್ ಅಲಿ ಖಾನ್, ತ್ರಿಷಾ, ಚಿರಂಜೀವಿ ಮತ್ತು ಖುಷ್ಬೂ Instagram
ಸುದ್ದಿಗಳು

ನಟ ಮನ್ಸೂರ್‌ಗೆ ₹ 1 ಲಕ್ಷ ದಂಡ ಪ್ರಹಾರ; ತ್ರಿಷಾ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಮದ್ರಾಸ್ ಹೈಕೋರ್ಟ್ ನಕಾರ

Bar & Bench

ಸಿನಿ ಕಲಾವಿದರಾದ ತ್ರಿಶಾ, ಚಿರಂಜೀವಿ ಹಾಗೂ ಬಿಜೆಪಿ ಸಂಸದೆಯೂ ಆಗಿರುವ ಅಭಿನೇತ್ರಿ ಖುಷ್ಬೂ ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ತಮಿಳು ನಟ ಮನ್ಸೂರ್ ಅಲಿ ಖಾನ್ ಅವರಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಅನುಮತಿ ನಿರಾಕರಿಸಿದೆ.

ಖಾನ್ ಅವರು ಹೂಡಬೇಕೆಂದಿರುವ ಮಾನನಷ್ಟ ಮೊಕದ್ದಮೆ ಪ್ರಚಾರದ ಕಸರತ್ತಾಗಿ ತೋರುತ್ತಿದೆ ಎಂದಿರುವ ನ್ಯಾಯಾಲಯ ಮನ್ಸೂರ್‌ ಖಾನ್‌ಗೆ ₹ 1 ಲಕ್ಷ ದಂಡ ವಿಧಿಸಿದೆ.

ದಂಡದ ಮೊತ್ತವನ್ನು ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಸಂಸ್ಥೆಗೆ ಠೇವಣಿ ಇಡುವಂತೆ ನ್ಯಾಯಾಲಯವು ನಟನಿಗೆ ನಿರ್ದೇಶನ ನೀಡಿದೆ. ಮನ್ಸೂರ್‌ ಅವರ ಹೇಳಿಕೆಗಳಿಗೆ ತ್ರಿಷಾ ಮತ್ತಿತರರು ಯಾವುದೇ ಸಾಮಾನ್ಯ ವ್ಯಕ್ತಿಗಳಂತೆ ಪ್ರತಿಕ್ರಿಯಿಸಿದ್ದಾರೆ ಎಂದು ನ್ಯಾ.ಸತೀಶ್ ಕುಮಾರ್ ನುಡಿದಿದ್ದಾರೆ.

ತ್ರಿಷಾ, ಚಿರಂಜೀವಿ ಹಾಗೂ ಖುಷ್ಬೂ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಲು ಕೆಲ ದಿನಗಳ ಹಿಂದೆ ಅನುಮತಿ ಕೋರಿ ಮನ್ಸೂರ್‌ ಹೈಕೋರ್ಟ್ ಮೊರೆ ಹೋಗಿದ್ದರು.

ಲಿಯೋ ಚಿತ್ರದ ಪ್ರಚಾರದ ವೇಳೆಯ ಪತ್ರಿಕಾಗೋಷ್ಠಿಯಲ್ಲಿ ಮನ್ಸೂರ್‌ ಅವರು ತಾನು ಮತ್ತು ತ್ರಿಷಾ ಚಿತ್ರದ ಭಾಗವಾಗಿದ್ದರೂ, ತ್ರಿಷಾ ಅವರೊಂದಿಗೆ ತೆರೆ ಹಂಚಿಕೊಳ್ಳಲು ತನಗೆ ಸಾಧ್ಯವಾಗಲಿಲ್ಲ. ಅವರ ಜೊತೆಗಿನ ಯಾವುದೇ "ಬೆಡ್‌ರೂಂ ದೃಶ್ಯಗಳು" ಚಿತ್ರದಲ್ಲಿಲ್ಲ ಎಂದಿದ್ದರು. 

ಹೇಳಿಕೆ ಕುರಿತಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರು ಖಾನ್ ವಿರುದ್ಧ ಎಫ್ಐಆರ್ ಹೂಡಿದ್ದರು. ನಂತರ ತ್ರಿಷಾ ಹಾಗೂ ಇತರರ ವಿರುದ್ಧ ಮನ್ಸೂರ್‌ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದಲ್ಲಿ ತ್ರಿಷಾ ಮಾನನಷ್ಟ ಮೊಕದ್ದಮೆ ಹೂಡಬೇಕಿತ್ತೇ ವಿನಾ ಮನ್ಸೂರ್‌ ಅಲ್ಲ ಎಂದು ಡಿಸೆಂಬರ್‌ 11ರಂದು ನಡೆದ ವಿಚಾರಣೆ ವೇಳೆ ನ್ಯಾ. ಕುಮಾರ್‌ ಅವರು ಮನ್ಸೂರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.