Madras High Court and Jaggi vasudev Jaggi vasudev - Facebook
ಸುದ್ದಿಗಳು

ಜಗ್ಗಿ ವಾಸುದೇವ್‌ಗೆ ನೀಡಲಾಗಿರುವ ಪದ್ಮ ವಿಭೂಷಣ ರದ್ದತಿ ಕೋರಿ ಸಲ್ಲಿಸಿದ್ದ ಪಿಐಎಲ್ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ಪ್ರಶಸ್ತಿ ಪ್ರದಾನಕ್ಕೆ ಅಗತ್ಯವಾದ ಮಾನದಂಡಗಳಿಗೆ ಕೇಂದ್ರ ಸರ್ಕಾರ ಬದ್ಧವಾಗಿರುವುದು ತನಗೆ ತೃಪ್ತಿ ನೀಡಿದೆ ಎಂದು ಹೈಕೋರ್ಟ್ ಹೇಳಿದೆ.

Bar & Bench

ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರಿಗೆ 2017ರಲ್ಲಿ ನೀಡಲಾದ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರ ಪದ್ಮ ವಿಭೂಷಣ ಪ್ರಶಸ್ತಿ ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮದ್ರಾಸ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

2017ರಲ್ಲಿ ವಕೀಲ ಎಂ ವೆಟ್ರಿಸೆಲ್ವನ್  ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಕೆ ಆರ್ ಶ್ರೀರಾಮ್ ಮತ್ತು ನ್ಯಾಯಮೂರ್ತಿ ಸೆಂಥಿಲ್‌ ಕುಮಾರ್ ರಾಮಮೂರ್ತಿ ಅವರಿದ್ದ ಪೀಠ ವಜಾಗೊಳಿಸಿದೆ.

ಪ್ರಶಸ್ತಿ ಪ್ರದಾನಕ್ಕೆ ಅಗತ್ಯವಾದ ಮಾನದಂಡಗಳಿಗೆ ಕೇಂದ್ರ ಸರ್ಕಾರ ಬದ್ಧವಾಗಿರುವುದು ತನಗೆ ತೃಪ್ತಿ ನೀಡಿದೆ ಎಂದು ಹೈಕೋರ್ಟ್ ಹೇಳಿದೆ.

ವಾಸುದೇವ್ ಅವರ ಈಶ ಪ್ರತಿಷ್ಠಾನ ಅನೇಕ ಆರೋಪಗಳನ್ನು ಎದುರಿಸುತ್ತಿದ್ದು ಹಲವಾರು ಪ್ರಕರಣಗಳು ಅದರ ವಿರುದ್ಧ ಇರುವುದರಿಂದ ಅವರ ಪದ್ಮವಿಭೂಷಣ ಪ್ರಶಸ್ತಿಯನ್ನು ರದ್ದುಗೊಳಿಸಬೇಕೆಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಆದರೆ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ರಾಷ್ಟ್ರಪತಿಗಳ ಕಾರ್ಯದರ್ಶಿ ಮುಂತಾದ ಸದಸ್ಯರನ್ನೊಳಗೊಂಡ ಸಮಿತಿಯ ಶಿಫಾರಸು ಮತ್ತು ಪರಿಶೀಲನೆ ನಂತರ ಗಣ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ ಆರ್‌ ಎಲ್ ಸುಂದರೇಶನ್ ನ್ಯಾಯಾಲಯಕ್ಕೆ ತಿಳಿಸಿದರು.  

ಸೂಕ್ತ ಪರಿಗಣನೆಯ ನಂತರವೇ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಅಂತಿಮಗೊಳಿಸಲಾಗಿದೆ. ವಾಸುದೇವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೊದಲು ಸರ್ಕಾರ "ಗುಪ್ತಚರ ಸಂಸ್ಥೆಗಳಿಂದ ಯಾವುದೇ ಪ್ರತಿಕೂಲ ಮಾಹಿತಿ ಸ್ವೀಕರಿಸಿಲ್ಲ" ಎಂದು ಎಎಸ್‌ಜಿ ಹೇಳಿದರು.