Akhanda 2 with Madras High Court 
ಸುದ್ದಿಗಳು

'ಅಖಂಡ 2ʼ ಬಿಡುಗಡೆಗೆ ತಡೆ: ಇರೊಸ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ಇರೊಸ್ ಇಂಟರ್‌ನ್ಯಾಷನಲ್‌ ಮೀಡಿಯಾ ಲಿಮಿಟೆಡ್‌ ಪರವಾಗಿ ಮಧ್ಯಂತರ ತಡೆಯಾಜ್ಞೆ ನೀಡಲು ನ್ಯಾಯಮೂರ್ತಿ ಆನಂದ್ ವೆಂಕಟೇಶ್ ನಿರಾಕರಿಸಿದರು.

Bar & Bench

ತೆಲುಗು ಚಿತ್ರ ಅಖಂಡ 2 ಬಿಡುಗಡೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ [ಇರೋಸ್ ಇಂಟರ್‌ನ್ಯಾಷನಲ್‌ ಮತ್ತು 14 ರೀಲ್ಸ್ ಎಂಟರ್‌ಟೈನ್‌ಮೆಂಟ್ ನಡುವಣ ಪ್ರಕರಣ].

2021ರ ಹಿಟ್ ಚಿತ್ರ 'ಅಖಂಡ'ದ ಎರಡನೇ ಭಾಗ ಅಖಂಡ 2. ₹27.7 ಕೋಟಿಗೂ ಹೆಚ್ಚಿನ ಮೊತ್ತದ ಪಾವತಿ ಬಾಕಿ ಇರುವ ಕಾರಣ, ಚಿತ್ರದ ನಿರ್ಮಾಪಕರು ಚಿತ್ರ ಬಿಡುಗಡೆ ಮಾಡದಂತೆ ಅಥವಾ ವಾಣಿಜ್ಯಕ ಬಳಕೆ ಮಾಡದಂತೆ ತಡೆ ನೀಡಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಇರೊಸ್‌ ಇಂಟರ್ನ್ಯಾಷನಲ್ ಮೀಡಿಯಾ ಲಿಮಿಟೆಡ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಲು ನ್ಯಾಯಮೂರ್ತಿ ಆನಂದ್ ವೆಂಕಟೇಶ್ ನಿರಾಕರಿಸಿದರು.

ಚಿತ್ರ ನಿರ್ಮಾಣ ಮಾಡಿದ್ದ 14 ರೀಲ್ಸ್ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ₹27.70 ಕೋಟಿ ನೀಡುವ ಸಂಬಂಧ ಮಧ್ಯಸ್ಥಿಕೆ ತೀರ್ಪು ನೀಡಲಾಗಿತ್ತು. 14 ರೀಲ್ಸ್ ಕಂಪೆನಿ ಈ ಹಣ ಪಾವತಿಸದೆ 14 ರೀಲ್ಸ್ ಪ್ಲಸ್ ಎಂಬ ಹೊಸ ಕಂಪೆನಿ ಆರಂಭಿಸಿ ಅದೇ ಚಿತ್ರದ ನಿರ್ಮಾಣ ಇಲ್ಲವೇ ವಿತರಣೆ ಕೆಲಸ ಮಾಡುತ್ತಿದೆ. ಕಂಪೆನಿಯ ಹೆಸರು ಬದಲಿಸಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು. ಈ ಎರಡು ಕಂಪನಿಗಳು ಒಂದೇ ಎಂದು ಪರಿಗಣಿಸಿ ಚಿತ್ರ ಬಿಡುಗಡೆ ನಿಲ್ಲಿಸಬೇಕು ಎಂದು ಇರೊಸ್‌ ಕೋರಿತ್ತು.

2021ರ ಹಿಟ್‌ ಚಿತ್ರ ʼಅಖಂಡʼ  ₹130 ಕೋಟಿಗೂ ಹೆಚ್ಚು ಆದಾಯ ಗಳಿಸಿದೆ. ಜೊತೆಗೆ ಡಿಜಿಟಲ್, ಸ್ಯಾಟಲೈಟ್ ಹಕ್ಕುಗಳಿಂದಲೂ ದೊಡ್ಡ ಮಟ್ಟದ ಆದಾಯ ಬಂದಿತ್ತು. ಅಖಂಡ 2 ಚಿತ್ರವನ್ನು 14 ರೀಲ್ಸ್ ಪ್ಲಸ್‌ ಹೆಸರಿನಲ್ಲಿ ಬಿಡುಗಡೆ ಮಾಡಿದರೆ 019ರಲ್ಲಿ ನೀಡಲಾದ ₹27.70 ಕೋಟಿ ಮಧ್ಯಸ್ಥಿಕೆ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅದು ವಾದಿಸಿತ್ತು.

₹27.70 ಕೋಟಿ ತೀರ್ಪಿನ ಮೊತ್ತವನ್ನು ಠೇವಣಿ ಇಡುವವರೆಗೆ ಅಖಂಡ 2 ಚಿತ್ರದ ಬಿಡುಗಡೆ ವಿತರಣೆ, ಪ್ರಸಾರ ಮಾಡುವುದು ಅಥವಾ ಮೂರನೇ ವ್ಯಕ್ತಿಯ ಹಕ್ಕು ರಚನೆಯಾಗದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು. ಅಖಂಡ 2 ನಿಂದ ಗಳಿಸಿದ ಯಾವುದೇ ಆದಾಯವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸೂಚಿಸಬೇಕು ಎಂದು ಅದು ಕೋರಿತು.

ಆದರೆ ವಾದ ಆಲಿಸಿದ ಮದ್ರಾಸ್ ಹೈಕೋರ್ಟ್ ಅಖಂಡ 2 ಬಿಡುಗಡೆ ಅಥವಾ ಹಣಗಳಿಕೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು .