Madras High Court 
ಸುದ್ದಿಗಳು

ಅರಬಿಂದೋ ಆಶ್ರಮ ಟ್ರಸ್ಟ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: 2012ರ ತನಿಖೆ ಆದೇಶ ಬದಿಗೆ ಸರಿಸಿದ ಮದ್ರಾಸ್ ಹೈಕೋರ್ಟ್

ತಾವು ಸಾಮಾನ್ಯವಾಗಿ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ, ಆದರೆ ಪ್ರಸ್ತುತ ಪ್ರಕರಣದಲ್ಲಿ ತನಿಖೆ ಮುಂದುವರಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ನ್ಯಾ. ಅನಿತಾ ಸುಮಂತ್ ಅವರು ಹೇಳಿದರು.

Bar & Bench

ಲೈಂಗಿಕ ದೌರ್ಜನ್ಯ ಮತ್ತು ನಿಧಿ ದುರುಪಯೋಗದ ಆರೋಪದ  ಹಿನ್ನೆಲೆಯಲ್ಲಿ ಅರಬಿಂದೋ ಆಶ್ರಮ ಟ್ರಸ್ಟ್ (ಟ್ರಸ್ಟ್) ವಿರುದ್ಧ ತನಿಖೆ ನಡೆಸಬೇಕೆಂದು 2012ರಲ್ಲಿ ಪಾಂಡಿಚೆರಿ ಜಿಲ್ಲಾಧಿಕಾರಿ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಬದಿಗೆ ಸರಿಸಿದೆ. ಆಶ್ರಮಕ್ಕೆ ಸೇರಿದ ವಿಷ್ಣು ಲಲಿತ್‌ ಸಿಂಗ್‌ ಹಾಗೂ ಅಂದಿನ ಶಾಸಕ ಅಶೋಕ್‌ ಆನಂದ್‌ ಸಲ್ಲಿಸಿದ್ದ ಅರ್ಜಿ ಇದಾಗಿದೆ.

ಟ್ರಸ್ಟ್‌ ವಿರುದ್ಧ ತನಿಖೆ ಆರಂಭಿಸುವಂತೆ ಅಕ್ಟೋಬರ್ 1, 2012 ರಂದು ಜಿಲ್ಲಾಧಿಕಾರಿಗಳು ನೀಡಿದ್ದ ನೋಟಿಸ್ ಅನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಜಿಲ್ಲಾಡಳಿತ ತನಿಖೆ ನಡೆಸದಂತೆ ಕೋರಿ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿ 2012ರಿಂದ ವಿಚಾರಣೆಗೆ ಬಾಕಿ ಉಳಿದಿತ್ತು. ಅದನ್ನೀಗ ನ್ಯಾ. ಅನಿತಾ ಸುಮಂತ್‌ ವಿಲೇವಾರಿ ಮಾಡಿದ್ದಾರೆ.

ತಾನು ಸಾಮಾನ್ಯವಾಗಿ ಶಾಸನಬದ್ಧ ವಿಚಾರಣೆಯಲ್ಲಿ ಅದರಲ್ಲಿಯೂ ಗಂಭೀರ ಆರೋಪಗಳು ಕಂಡು ಬಂದ ಪ್ರಕರಣಗಳಲ್ಲಿ  ಮಧ್ಯಪ್ರವೇಶಿಸುವುದಿಲ್ಲ, ಮೂಲ ದೂರುದಾರರು ಬಹಳ ವರ್ಷಗಳ ಹಿಂದೆ ಮಾಡಿದ್ದ ಆರೋಪಗಳನ್ನು ಈಗ ನಿಲ್ಲಿಸಿದ್ದಾರೆ. ಹೀಗಾಗಿ ತನಿಖೆ ಮುಂದುವರಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿದರು.

ಅರ್ಜಿದಾರರು ಆಶ್ರಮದ ಆವರಣದಲ್ಲಿ ನಡೆದ ಹಲವಾರು ಅಹಿತಕರ ಘಟನೆಗಳು ಮತ್ತು ಕೃತ್ಯಗಳನ್ನು ದಾಖಲಿಸಿದ್ದಾರೆ. ಇವುಗಳಲ್ಲಿ ಲೈಂಗಿಕ ಕಿರುಕುಳ, ಕೆಲವು ಆಶ್ರಮವಾಸಿಗಳ ಆತ್ಮಹತ್ಯೆ ಮತ್ತು ಶಾಲಾ ಕಾರ್ಯಚಟುವಟಿಕೆಯಲ್ಲಿನ ಗಂಭೀರ ಅವ್ಯವಹಾರದ ಆರೋಪಗಳು ಸೇರಿವೆ. ನಿಸ್ಸಂದೇಹವಾಗಿ ಇಂತಹ ಸಂದರ್ಭಗಳು ತ್ವರಿತ ಮತ್ತು ಗಂಭೀರವಾದ ಕ್ರಮ ಕೈಗೊಳ್ಳುವಂತೆ ಕರೆ ನೀಡುತ್ತವೆ. ಆದರೂ ಈ ಘಟನೆಗಳು ಹಿಂದೆ ಸಲ್ಲಿಸಲಾಗಿದ್ದ ರಿಟ್‌ ಅರ್ಜಿ ಮತ್ತು ಸಿವಿಲ್‌ ಮೊಕದ್ದಮೆಗಳ ಕಾಲಕ್ಕೆ ಸೇರಿದ್ದು ವಿವರವಾದ ಚರ್ಚೆಯ ನಂತರ ಅರ್ಜಿದಾರ ಟ್ರಸ್ಟ್‌ ಪರವಾಗಿ ಪ್ರಕರಣ ಮುಕ್ತಾಯಗೊಳಿಸಲಾಗಿದೆ. ಈಗ ಈ ತೀರ್ಪನ್ನು ಮರುಪರಿಶೀಲಿಸಲು ಯಾವುದೇ ಕಾರಣ ಇಲ್ಲ” ಎಂದು ಹೈಕೋರ್ಟ್‌ ಹೇಳಿದೆ.