ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೋರಿದ್ದ ಮನವಿಯನ್ನು ಹೈಕೋರ್ಟ್‌ ವಜಾ ಮಾಡಿದ್ದೇಕೆ?

ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರು ನಗರದಲ್ಲೇ ಇದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನ್ಯಾಯಾಲಯಕ್ಕೆ ಬರುವ ಬದಲು ಅವರಿಗೆ ಹೋಗಿ ಮನವಿ ಮಾಡಿ. ಗೃಹ ಮಂತ್ರಿ, ಪ್ರಧಾನಿ ಮಾತನಾಡಬಹುದು ಎಂದ ಪೀಠ.
Shivakumar Swamiji
Shivakumar SwamijiFacebook
Published on

ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಗೌರವ ಪ್ರದಾನ ಮಾಡಲು ಶಿಫಾರಸ್ಸು ಮಾಡುವಂತೆ ಪ್ರಧಾನ ಮಂತ್ರಿ ಅವರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿತು.

ರೆಹಾನ್‌ ಖಾನ್‌ ಎಂಬುವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರರಿಗೆ ಸೂಕ್ತ ಹಕ್ಕು ಇದ್ದಾಗ ಮಾತ್ರ ನ್ಯಾಯಾಲಯ ನಿರ್ದೇಶನ ನೀಡಬಹುದು. ಇಲ್ಲಿ, ಆ ತರಹದ ಯಾವುದೇ ಹಕ್ಕು ಕಾಣುತ್ತಿಲ್ಲ ಎಂದು ಪೀಠವು ಹೇಳಿತು.

“ಭಾರತ ರತ್ನ ಸೇರಿದಂತೆ ಯಾವುದೇ ಪ್ರಶಸ್ತಿ ನೀಡುವ ವಿಚಾರವು ಸಂಪೂರ್ಣವಾಗಿ ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ. ಯಾವುದೇ ಪ್ರಶಸ್ತಿ ಅಥವಾ ಪಾರಿತೋಷಕ ನೀಡುವ ಕುರಿತಾಗಿ ಯಾವುದೇ ವ್ಯಕ್ತಿ ಹಕ್ಕು ಹೊಂದಿರುವುದಿಲ್ಲ ಮತ್ತು ಅಂಥ ನಿರ್ದೇಶನ ನೀಡುವುದನ್ನು ಪರಿಗಣಿಸುವಂತೆ ಕೋರಲಾಗದು. ಮೇರು ಸಾಧನೆ ಮಾಡಿರುವ ಯಾವುದೇ ವ್ಯಕ್ತಿಗೆ ಪಾರಿತೋಷಕ, ಪ್ರಶಸ್ತಿ ಅಥವಾ ಭಾರತ ರತ್ನ ನೀಡುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ನಿರ್ಧರಿಸಲಿದ್ದಾರೆ. ತಮ್ಮ ಮನವಿಯನ್ನು ಪರಿಗಣಿಸಲು ಪ್ರಧಾನ ಮಂತ್ರಿಗೆ ನಿರ್ದೇಶಿಸಿಬೇಕು ಎಂದು ಕೋರಿರುವ ಅರ್ಜಿದಾರರು ಯಾವುದೇ ಹಕ್ಕು ಹೊಂದಿಲ್ಲದಿರುವುದರಿಂದ ಮನವಿಯನ್ನು ವಜಾ ಮಾಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಮೊಹಮ್ಮದ್‌ ತಾಹೀರ್‌ ಅವರು “ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಭಾರತ ರತ್ನ ಕೊಡ ಮಾಡಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿ ಸರ್ಕಾರವು 1954ರ ಜನವರಿ 2ರಂದು ಅಧಿಸೂಚನೆ ಹೊರಡಿಸಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಿಸ್ವಾರ್ಥವಾಗಿ ಕೋಮು ಸೌಹಾರ್ದತೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಪ್ರಧಾನ ಮಂತ್ರಿ ಅವರು ಭಾರತ ರತ್ನ ಗೌರವಕ್ಕೆ ಸ್ವಾಮೀಜಿ ಅವರ ಹೆಸರನ್ನು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು 2021ರ ಅಕ್ಟೋಬರ್‌ 12ರಂದು ಮನವಿ ಸಲ್ಲಿಸಿದ್ದೇವೆ. ಈ ಮನವಿಯನ್ನು ಪರಿಗಣಿಸಲು ಪ್ರಧಾನ ಮಂತ್ರಿ ಅವರಿಗೆ ನಿರ್ದೇಶಿಸಬೇಕು” ಎಂದು ಕೋರಿದರು.

Also Read
ಐಟಿ ಕಾರಿಡಾರ್‌ ಭೂಮಿ ಅಕ್ರಮ ಡಿನೋಟಿಫಿಕೇಶನ್‌: ಯಡಿಯೂರಪ್ಪ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ

ಅದಕ್ಕೆ ಸಿಜೆ ಅವರು “ಈಚೆಗೆ ಉದ್ಯಮಿ ರತನ್ ಟಾಟಾ ಅವರಿಗೆ ಭಾರತ ರತ್ನ ನೀಡುವಂತೆ ಕೋರಿದ್ದ ಮನವಿ ಏನಾಗಿದೆ ಗೊತ್ತಿದೆಯಾ? (ದೆಹಲಿ ಹೈಕೋರ್ಟ್‌ ರತನ್‌ ಟಾಟಾ ಅವರಿಗೆ ಭಾರತ ರತ್ನ ನೀಡುವಂತೆ ಕೋರಿದ್ದ ಮನವಿಯನ್ನು ವಜಾ ಮಾಡಿತ್ತು) ನಿಮಗೆ ಹಕ್ಕು ಇದ್ದಾಗ ಮಾತ್ರ ನಾವು ನಿರ್ದೇಶನ ನೀಡಬಹುದು. ಇದನ್ನು ನಾವು ನಿರ್ಧರಿಸಬಹುದೇ? ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರು ನಗರದಲ್ಲೇ ಇದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನ್ಯಾಯಾಲಯಕ್ಕೆ ಬರುವ ಬದಲು ಅವರಿಗೆ ಹೋಗಿ ಮನವಿ ಮಾಡಿ. ಗೃಹ ಮಂತ್ರಿ, ಪ್ರಧಾನಿ ಮಾತನಾಡಬಹುದು” ಎಂದು ಲಘು ದಾಟಿಯಲ್ಲಿ ಹೇಳಿದರು.

Kannada Bar & Bench
kannada.barandbench.com