Madurai Bench of Madras High Court  Madras High Court website
ಸುದ್ದಿಗಳು

ನಿರ್ದಿಷ್ಟ ಸಮುದಾಯದ ಸದಸ್ಯರ ಅಂತಿಮ ಯಾತ್ರೆ ಪ್ರಶ್ನಿಸಿದ್ದ ಅರ್ಜಿ ಅಮಾನವೀಯ ಎಂದ ಮದ್ರಾಸ್ ಹೈಕೋರ್ಟ್: ₹25 ಸಾವಿರ ದಂಡ

ನಿರ್ದಿಷ್ಟ ಸಮುದಾಯವೊಂದರ ಸದಸ್ಯರು ತಮ್ಮ ಹಳ್ಳಿಯ ಬೀದಿಗಳಲ್ಲಿ ಶವಯಾತ್ರೆ ನಡೆಸದಂತೆ ನಿರ್ಬಂಧ ವಿಧಿಸಬೇಕೆಂದು ಕೋರಿ ಸ್ಥಳೀಯ ಸಂಘವೊಂದು ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಜಾಗೊಳಿಸಿತು.

Bar & Bench

ನಿರ್ದಿಷ್ಟ ಸಮುದಾಯವೊಂದರ ಸದಸ್ಯರು ತಮ್ಮ ಜಾತಿಯ ಸದಸ್ಯರಿರುವ ಬೀದಿಗಳಲ್ಲಿ ಅಂತಿಮ ಯಾತ್ರೆ ನಡೆಸದಂತೆ ನಿರ್ಬಂಧ ವಿಧಿಸಬೇಕೆಂದು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವ ಮದ್ರಾಸ್‌ ಹೈಕೋರ್ಟ್‌ ಮಧುರೈ ಪೀಠ ಈ ಸಂಬಂಧ ಅರ್ಜಿ ಸಲ್ಲಿಸಿದ್ದ ಸಂಘಕ್ಕೆ ₹ 25,000 ದಂಡ ವಿಧಿಸಿದೆ.

ಪಂಚಾಯತ್‌ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಬೀದಿಗಳು ಮತ್ತು ರಸ್ತೆಗಳು ಯಾವುದೇ ಸಮುದಾಯ ಇಲ್ಲವೇ ಜಾತಿಯನ್ನು ಲೆಕ್ಕಿಸದೆ ಎಲ್ಲ ನಿವಾಸಿಗಳಿಗೂ ಮೀಸಲಾಗಿವೆ ಎಂದು ನ್ಯಾಯಾಲಯ ಹೇಳಿದೆ.

ರಿಟ್‌ ಅರ್ಜಿಗೆ ಪೂರಕವಾಗಿ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಮಾಡಿರುವ ಮನವಿಗಳು ಸಂವಿಧಾನದ 15ನೇ ವಿಧಿಯಡಿ ತಾರತಮ್ಯ ಎಸಗುವುದಕ್ಕೆ ಸಮನಾಗಿರುತ್ತದೆ. ಆ ರೀತಿಯ ಪ್ರತಿಪಾದನೆಗಳು ಸಾರ್ವಜನಿಕ ಬೀದಿಗಳಿಗೆ ಸಂಬಂಧಿಸಿದಂತೆ ಎಂದಿಗೂ ಇರಬಾರದು. ಸಂಬಂಧಪಟ್ಟ ಪಂಚಾಯತ್‌ಗೆ ಸೇರಿದ ರಸ್ತೆಗಳು ಜಾತಿ, ಧರ್ಮ ಮತ್ತು ಸಮುದಾಯವನ್ನು ಲೆಕ್ಕಿಸದೆ ಪ್ರತಿಯೊಬ್ಬ ಗ್ರಾಮಸ್ಥರು ಅಥವಾ ಸಾರ್ವಜನಿಕರ ಇತರ ವರ್ಗಗಳು ಉಚಿತವಾಗಿ ಬಳಸಲು ಮುಕ್ತವಾಗಿರುತ್ತವೆ ಎಂದು ನ್ಯಾಯಾಲಯ ವಿವರಿಸಿದೆ.

ಆದ್ದರಿಂದ ಕಮ್ಮವರ್ ಸಮುಗ ನಾಲಾ ಸಂಘಮ್‌ ಸಲ್ಲಿಸಿದ ಮನವಿಯನ್ನು  "ಅಮಾನವೀಯ" ಎಂದು ಬಣ್ಣಿಸಿದ , ನ್ಯಾಯಮೂರ್ತಿಗಳಾದ ಎಂಎಸ್ ರಮೇಶ್  ಮತ್ತು  ಎಡಿ ಮರಿಯಾ ಕ್ಲೀಟ್ ಅವರಿದ್ದ ಪೀಠ ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ.

ಅರ್ಜಿ ಸಲ್ಲಿಸಿರುವ ಸಂಘ ಅಂತಿಮ ಯಾತ್ರೆಯನ್ನು ಸಾರ್ವಜನಿಕರಿಗೆ ಉಂಟಾಗುವ ತೊಂದರೆ ಎಂದು ಹೇಗೆ ಹೇಳುತ್ತದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಸಂಘ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಅದು ತನ್ನ ಸದಸ್ಯರ ಕಲ್ಯಾಣ ಕ್ರಮಗಳನ್ನು ಕೈಗೊಳ್ಳಬಾರದು. ತನ್ನನ್ನು ತಾನೇ ಅಧಃಪತನಕ್ಕೆ ಕೊಂಡೊಯ್ಯಬಾರದು. ಇಂತಹ ಬೇಜವಾಬ್ದಾರಿ ರಿಟ್ ಅರ್ಜಿಗಳನ್ನು ಸಲ್ಲಿಸುವ ಮೂಲಕ ಗ್ರಾಮಸ್ಥರಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವ ಸಂಘದ ಅಮಾನವೀಯ ಧೋರಣೆ ನಮ್ಮ ಅಸಮಾಧಾನಕ್ಕೆ ಕಾರನವಾಗಿದೆ. ಈ ರಿಟ್‌ ಅರ್ಜಿಯನ್ನು ಪುರಸ್ಕರಿಸಿದರೆ ಗ್ರಾಮಸ್ಥರಲ್ಲಿ ಅಶಾಂತಿ ಮತ್ತು ಅವ್ಯವಸ್ಥೆ ತಲೆದೋರಬಹುದು ಎಂದು ಅದು ಹೇಳಿದೆ.

ಅಂತೆಯೇ ಯಾವುದೇ ಕಾನೂನು ಆಧಾರವಿಲ್ಲದ ಕಾರಣ ಸಂಘವು ಮಾಡಿದ ಮನವಿಯನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿತು. ಹೈಕೋರ್ಟ್‌ನ ಮಧುರೈ ಪೀಠದಲ್ಲಿರುವ ಕಾನೂನು ಸೇವಾ ಸಮಿತಿಗೆ ದಂಡದ ಮೊತ್ತ ಪಾವತಿಸುವಂತೆ ಅದು ಇದೇ ವೇಳೆ ಸೂಚಿಸಿತು.