NGT 
ಸುದ್ದಿಗಳು

ಎನ್‌ಜಿಟಿ ತಜ್ಞ ಸದಸ್ಯೆಯಾಗಿ ಗಿರಿಜಾ ವೈದ್ಯನಾಥನ್ ಅವರ ನೇಮಕ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಇದೇ ವೇಳೆ ನ್ಯಾಯಾಲಯ ಎನ್ಜಿಟಿ ಕಾಯಿದೆಯ ನಿಬಂಧನೆಗಳಿಗೆ ಹೆಚ್ಚಿನ ಸ್ಪಷ್ಟತೆ ಅವಶ್ಯಕತೆ ಇದೆ ಎಂದು ತಿಳಿಸಿದೆ.

Bar & Bench

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ತಜ್ಞ ಸದಸ್ಯೆಯಾಗಿ ಐಎಎಸ್‌ ಅಧಿಕಾರಿ ಗಿರಿಜಾ ವೈದ್ಯನಾಥನ್ ಅವರ ನೇಮಕ ಮಾಡಿರುವುದನ್ನು ಮದ್ರಾಸ್‌ ಹೈಕೋರ್ಟ್‌ ಶನಿವಾರ ಎತ್ತಿ ಹಿಡಿದಿದೆ.

ಇದೇ ವೇಳೆ ನ್ಯಾಯಾಲಯ, ಅಧಿಕಾರಿಗಳನ್ನು ನ್ಯಾಯಮಂಡಳಿಯ ತಜ್ಞ ಸದಸ್ಯರನ್ನಾಗಿ ನೇಮಿಸಲು ಇರುವ ಅರ್ಹತೆಗಳನ್ನು ವಿವರಿಸುವ ಎನ್‌ಜಿಟಿ ಕಾಯಿದೆಯ ನಿಬಂಧನೆಗಳಿಗೆ ಹೆಚ್ಚಿನ ಸ್ಪಷ್ಟತೆ ಒದಗಿಸುವ ಅವಶ್ಯಕತೆ ಇದೆ ಎಂದು ತಿಳಿಸಿದೆ. ಕಾಯಿದೆಯ ಸೆಕ್ಷನ್‌ 5ರ ಪ್ರಕಾರ ತಜ್ಞ ಸದಸ್ಯರ ನೇಮಕಾತಿ ನಡೆಯುತ್ತದೆ.

ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರಿದ್ದ ಪೀಠ ಏಪ್ರಿಲ್ 9 ರಂದು ಗಿರಿಜಾ ಅವರ ನೇಮಕವನ್ನು ತಡೆ ಹಿಡಿದಿತ್ತು. ಏಪ್ರಿಲ್ 19ರಂದು (ಸೋಮವಾರ) ಗಿರಿಜಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ನೇಮಕಾತಿ ವಿರೋಧಿಸಿ ಜಿ ಸುಂದರರಾಜನ್‌ ಎಂಬುವವರು ದೂರು ನೀಡಿದ್ದರು.

ಪರಿಸರ ಮತ್ತು ಅರಣ್ಯ ಇಲಾಖೆಯಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿಯಾಗಿ ಮತ್ತು ತಮಿಳುನಾಡು ಮಾಲಿನ್ಯ ನಿಯಂತ್ರಣದ ಅಧ್ಯಕ್ಷರಾಗಿ ಗಿರಿಜಾ ಅವರು ಸೇವೆ ಸಲ್ಲಿಸಿದ್ದು ಎನ್‌ಜಿಟಿ ಕಾಯಿದೆ ಸೆಕ್ಷನ್ 5 (2) (ಬಿ) ರ ಪ್ರಕಾರ ಮಂಡಳಿಯಲ್ಲಿ ಕೆಲಸ ನಿರ್ವಹಿಸುವ ಸಂಬಂಧ ಯಾವುದೇ ವಿವಾದ ಏಳುವುದಿಲ್ಲ. ಅಲ್ಲದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸರ್ಕಾರದ ಕಾರ್ಯದರ್ಶಿಯಾಗಿದ್ದಾಗ ಅವರು ಜೈವಿಕ ವೈದ್ಯಕೀಯ ತ್ಯಾಜ್ಯ (ನಿರ್ವಹಣೆ ಮತ್ತು ನಿಯಂತ್ರಣ) ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ನಿರ್ವಹಿಸಿದ್ದು ಇದು ಕೂಡ ಪರಿಸರ ಅನುಭವಕ್ಕೆ ಪೂರಕ. ಜೊತೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಕೂಡ ಪರಿಸರಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳಲ್ಲಿ ಅವರು ತೊಡಗಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಲಾಯಿತು.

ಆಗ ಪೀಠ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಗಿರಿಜಾ ಅವರ ಅನುಭವವೊಂದೇ, ಆಕೆ ಎನ್‌ಜಿಟಿ ತಜ್ಞ ಸದಸ್ಯೆಯಾಗಿ ನೇಮಕಗೊಳ್ಳಲು ಸಾಕು ಎಂದು ಸ್ಪಷ್ಟಪಡಿಸಿತು. ಗಿರಿಜಾ ಅವರನ್ನು ನೇಮಕ ಮಾಡಿದ ವಿಧಾನ ಕುರಿತಂತೆ ಸಾಕಷ್ಟು ಆಕ್ಷೇಪಗಳು ವಿಚಾರಣೆ ವೇಳೆ ವ್ಯಕ್ತವಾದರೂ ನ್ಯಾಯಾಲಯ ಅವುಗಳನ್ನು ತಿರಸ್ಕರಿಸಿತು. ಜೊತೆಗೆ ನೇಮಕಾತಿ ಆಕ್ಷೇಪ ಅರ್ಜಿಯನ್ನು ವಜಾ ಮಾಡಿತು.

ಆದೇಶದ ಸಂದರ್ಭದಲ್ಲಿ ನ್ಯಾಯಾಲಯ, ಅಧಿಕಾರಿಗಳನ್ನು ತಜ್ಞ ಸದಸ್ಯರಾಗಿ ನೇಮಕ ಮಾಡುವ ವಿಚಾರದಲ್ಲಿ ಎನ್‌ಜಿಟಿ ಕಾಯ್ದೆಯ ಸೆಕ್ಷನ್ 5 (2) (ಬಿ)ಯಲ್ಲಿರುವ ಅಸ್ಪಷ್ಟತೆ ಕುರಿತು ಧ್ವನಿ ಎತ್ತಿತು. ಕಾಯಿದೆಯ ಸೆಕ್ಷನ್‌ 5 (2) (ಬಿ)ಯಲ್ಲಿರುವಂತೆ ಆಡಳಿತಾತ್ಮಕ ಅನುಭವ ಸೆಕ್ಷನ್‌ 5 (2) (ಎ)ಯಲ್ಲಿ ವಿವರಿಸಿರುವ ನೈಜ ಪರಿಣತಿಗೆ ಸಮವೇ ಎಂಬುದನ್ನು ನಿರ್ಣಯಿಸುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ಪೀಠ ಈ ಸಂದರ್ಭದಲ್ಲಿ ತಿಳಿಸಿದೆ.