Madras High Court 
ಸುದ್ದಿಗಳು

ವೀರಪ್ಪನ್ ಶೋಧದ ನೆವದಲ್ಲಿ ವಾಚಾತಿ ಅತ್ಯಾಚಾರ ಪ್ರಕರಣ: 215 ಸರ್ಕಾರಿ ನೌಕರರ ಶಿಕ್ಷೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಸರ್ಕಾರಿ ಅಧಿಕಾರಿಗಳಿಂದ 1992ರಲ್ಲಿ ಅತ್ಯಾಚಾರಕ್ಕೀಡಾದ 18 ಮಹಿಳೆಯರಿಗೆ ₹10 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

Bar & Bench

ಕಾಡುಗಳ್ಳ, ದಂತಚೋರ, ನರಹಂತಕ ವೀರಪ್ಪನ್‌ ಶೋಧ ಕಾರ್ಯಾಚರಣೆ ನೆಪದಲ್ಲಿ 1992ರಲ್ಲಿ ಧರ್ಮಪುರಿ ಜಿಲ್ಲೆಯ ವಾಚಾತಿ ಗ್ರಾಮದಲ್ಲಿ ಆದಿವಾಸಿಗಳ ಮೇಲೆ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ ದೌರ್ಜನ್ಯ ನಡೆಸಿದ್ದ ತಮಿಳುನಾಡಿನ ಅರಣ್ಯ ಮತ್ತು ಕಂದಾಯ ಇಲಾಖೆಯ ಅಂದಿನ ಸಿಬ್ಬಂದಿ ತಮಗೆ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಪ್ರಕರಣದ 215 ಅಪರಾಧಿಗಳಿಗೆ ವಿಧಿಸಲಾದ ಶಿಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಾಗೂ 2011 ರಿಂದ ಬಾಕಿ ಉಳಿದಿದ್ದ ಕಿಮಿನಲ್‌ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪಿ ವೇಲ್‌ಮುರುಗನ್‌ ತೀರ್ಪು ನೀಡಿದರು. ಎಲ್ಲಾ ಅಪರಾಧಿಗಳನ್ನು ಬಂಧಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ನ್ಯಾಯಮೂರ್ತಿಗಳು ಸೆಷನ್ಸ್‌ ನ್ಯಾಯಾಲಯಕ್ಕೆ ಸೂಚಿಸಿದರು.

ಸರ್ಕಾರಿ ಅಧಿಕಾರಿಗಳಿಂದ 1992ರಲ್ಲಿ ಅತ್ಯಾಚಾರಕ್ಕೀಡಾದ 18 ಮಹಿಳೆಯರಿಗೆ ₹10 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಘಟನೆಯ ನಂತರ ಸಾವನ್ನಪ್ಪಿದ ಮೂವರು ಸಂತ್ರಸ್ತರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಅದು ಹೇಳಿದೆ.

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ತಪ್ಪಿತಸ್ಥ ಸರ್ಕಾರಿ ಅಧಿಕಾರಿಗಳಿಂದಲೇ ಪರಿಹಾರ ಮೊತ್ತದ ಶೇಕಡಾ 50 ರಷ್ಟು ಹಣವನ್ನು ವಸೂಲಿ ಮಾಡಬೇಕು. ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಒದಗಿಸಲು, ವಾಚಾತಿ ಗ್ರಾಮಸ್ಥರ ಬದುಕು ಸುಧಾರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆದೇಶಿಸಲಾಗಿದೆ.

ಒಟ್ಟು 126 ಅರಣ್ಯ ಸಿಬ್ಬಂದಿ, 84 ಪೊಲೀಸ್ ಸಿಬ್ಬಂದಿ ಮತ್ತು 5 ಕಂದಾಯ ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ನ್ಯಾಯಮೂರ್ತಿಗಳು ಕಳೆದ ಫೆಬ್ರವರಿಯಲ್ಲಿ ಕಾಯ್ದಿರಿಸಿದ್ದರು. ಬಳಿಕ ಅವರು ವಾಚಾತಿ ಗ್ರಾಮದ ಭೌಗೋಳಿಕ ಪರಿಸರ ಅಧ್ಯಯನಕ್ಕಾಗಿ ಅಲ್ಲಿಗೆ ಭೇಟಿ ನೀಡಿದ್ದರು.

ಈ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧ ಕಡಿದು ಕಳ್ಳಸಾಗಣೆ ಮಾಡಲಾಗುತ್ತಿದೆ. ಗ್ರಾಮಸ್ಥರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಿ ಜೂನ್ 20, 1992ರಲ್ಲಿ ವಾಚಾತಿ ಗ್ರಾಮದ ಮೇಲೆ ತಮಿಳುನಾಡಿನ ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿ ದಾಳಿ ಮಾಡಿದ್ದರು. ದಾಳಿ ವೇಳೆ ಅಧಿಕಾರಿಗಳು ಹಲವು ಮನೆಗಳನ್ನು ಧ್ವಂಸಗೊಳಿಸಿ, ಮಹಿಳೆಯರ ಮೇಲೆ ಹಲ್ಲೆಗೈದು ಕ್ರೂರವಾಗಿ ನಡೆಸಿಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು. ಘಟನೆ ವೇಳೆ ಜನ ಜಾನುವಾರುಗಳ ಮೇಲೆ ಕ್ರೌರ್ಯ ಮೆರೆಯಲಾಗಿತ್ತು ಎನ್ನುವ ಅರೋಪ ಕೇಳಿಬಂದಿತ್ತು. ದಾಳಿ ವೇಳೆ ತಾವು ಅತ್ಯಾಚಾರಕ್ಕೊಳಗಾಗಿದ್ದಾಗಿ  ಗ್ರಾಮದ 18 ಮಹಿಳೆಯರು ಕೆಲ ದಿನಗಳ ನಂತರ ಅಲಳು ತೋಡಿಕೊಂಡಿದ್ದರು.

1995ರಲ್ಲಿ ಈ ಸಂಬಂಧ ಸಿಪಿಎಂ ಪಕ್ಷ  ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು.

ಘಟನೆ ನಡೆದು ಸುಮಾರು 20 ವರ್ಷಗಳ ನಂತರ ಸೆಪ್ಟೆಂಬರ್ 29, 2011ರಂದು ವಿಚಾರಣಾ ನ್ಯಾಯಾಲಯ ನಾಲ್ವರು ಐಎಫ್ಎಸ್ ಅಧಿಕಾರಿಗಳು, 84 ಪೊಲೀಸ್ ಸಿಬ್ಬಂದಿ ಹಾಗೂ 5 ಕಂದಾಯ ಸಿಬ್ಬಂದಿ ಸೇರಿದಂತೆ 126 ಅರಣ್ಯ ಸಿಬ್ಬಂದಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪನ್ನೇ ಅರ್ಜಿದಾರರು ಪ್ರಶ್ನಿಸಿ ಪ್ರಸಕ್ತ ಮೇಲ್ಮನವಿ ಸಲ್ಲಿಸಿದ್ದರು.