ಮೋಹನ್‌ಲಾಲ್‌ ಆನೆ ದಂತ ಪ್ರಕರಣ ಹಿಂಪಡೆಯುವುದಾಗಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ನ್ಯಾಯಾಲಯ

ಮೋಹನ್ ಲಾಲ್ ಮತ್ತಿತರ ಆರೋಪಿಗಳು ನವೆಂಬರ್ 3ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಮೋಹನ್‌ಲಾಲ್‌ ಆನೆ ದಂತ ಪ್ರಕರಣ ಹಿಂಪಡೆಯುವುದಾಗಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ನ್ಯಾಯಾಲಯ

ಮಲಯಾಳಂ ನಟ ಮೋಹನ್‌ಲಾಲ್‌ ಅವರು ಆರೋಪಿಯಾಗಿರುವ ಅಕ್ರಮವಾಗಿ ಆನೆ ದಂತ ಹೊಂದಿರುವ ಪ್ರಕರಣವನ್ನು ಹಿಂಪಡೆಯುವುದಾಗಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯದ ನ್ಯಾಯಾಲಯವೊಂದು ಈಚೆಗೆ ವಜಾಗೊಳಿಸಿದೆ [ವಿ ಮೋಹನ್‌ಲಾಲ್‌ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಮೋಹನ್‌ಲಾಲ್‌ ಅವರಿಗೆ ನೀಡಲಾದ ಆನೆ ದಂತದ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಮಾಣಪತ್ರದ ಸಿಂಧುತ್ವವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು. ಈ ವಿಚಾರವನ್ನು ಬಹಿರಂಗಪಡಿಸದೆ ಅರ್ಜಿ ಸಲ್ಲಿಸಿರುವುದನ್ನು ಗಮನಿಸಿದ ಎರ್ನಾಕುಲಂನ ಪೆರುಂಬವೂರ್‌ನಲ್ಲಿರುವ ಜುಡಿಷಿಯಲ್‌ ಫಸ್ಟ್‌ ಕ್ಲಾಸ್‌ ಮ್ಯಾಜಿಸ್ಟ್ರೇಟ್-III ನ್ಯಾಯಾಲಯದ ನ್ಯಾಯಾಧೀಶೆ ಅಂಜು ಕ್ಲೆಟಸ್ ಅವರು ಅರ್ಜಿ ವಜಾಗೊಳಿಸಿದರು.

ವ್ಯಾಜ್ಯದಲ್ಲಿರುವ ಪ್ರಮಾಣಪತ್ರ ಮಾನ್ಯವಾದುದು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ ಎಂದು ನ್ಯಾಯಾಧೀಶೆ ತಿಳಿಸಿದರು.

Also Read
ಮೋಹನ್‌ಲಾಲ್‌ ಆನೆ ದಂತ ಪ್ರಕರಣ: ಕೇಸ್ ಹಿಂಪಡೆಯಲು ಕೋರಿದ್ದ ಸರ್ಕಾರದ ಅರ್ಜಿ ಹೊಸದಾಗಿ ಆಲಿಸಲು ಕೇರಳ ಹೈಕೋರ್ಟ್ ಸೂಚನೆ

ಮೋಹನ್ ಲಾಲ್ ಅವರಿಗೆ ನೀಡಲಾದ ಪ್ರಮಾಣಪತ್ರದ ಸಿಂಧುತ್ವ ಕುರಿತಂತೆ ಹೈಕೋರ್ಟ್ ನಿರ್ಧರಿಸಿದ ನಂತರವೇ ಅವರ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರಣೆ ಮುಂದುವರಿಸಬೇಕೇ ಎಂದು ಪರಿಶೀಲಿಸುವುದು ನ್ಯಾಯಿಕ ಹಿತಾಸಕ್ತಿಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆಪಾದಿತ ಅಪರಾಧದಿಂದಾಗಿ ಯಾವುದೇ ಸಾರ್ವಜನಿಕರು ವೈಯಕ್ತಿಕವಾಗಿ ನೊಂದಿಲ್ಲ ಎನ್ನುವ ಅಂಶವನ್ನು ನ್ಯಾಯಾಧೀಶರು ಗಮನಿಸಿದರು. ಹಾಗಾಗಿ, ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಾಸಿಕ್ಯೂಷನ್‌ ಹಿಂಪಡೆಯಬೇಕು ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ ಎಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್‌ ಲಾಲ್‌ ಮತ್ತಿತರ ಆರೋಪಿಗಳು ನವೆಂಬರ್ 3ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಎರಡು ಜೋಡಿ ದಂತಗಳನ್ನು ಅಕ್ರಮವಾಗಿ ಮೋಹನ್‌ ಲಾಲ್‌ ಅವರು ಇರಿಸಿಕೊಂಡಿದ್ದ ಪ್ರಕರಣ ಇದಾಗಿದ್ದು ವನ್ಯಜೀವಿ (ರಕ್ಷಣೆ) ಕಾಯಿದೆ-1972ರ ನಿಬಂಧನೆಗಳ ಅಡಿ ಅವರು ಅಪರಾಧ ಎಸಗಿದ್ದಾರೆ ಎಂದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.

ಆದರೆ, ಆನೆ ದಂತಗಳನ್ನು ಕಾನೂನುಬದ್ಧವಾಗಿ ಪಡೆಯಲಾಗಿದೆ ಎಂದು ಮೋಹನ್ ಲಾಲ್ ಸಮರ್ಥಿಸಿಕೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೇರಳ ಸರ್ಕಾರ ಅವರಿಗೆ ದಂತ ಮಾಲೀಕತ್ವದ ಪ್ರಮಾಣಪತ್ರ ನೀಡಿತ್ತು. ಆ ಬಳಿಕ ಅವರ ವಿರುದ್ಧದ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ನಿರಾಕ್ಷೇಪಣಾ ಪತ್ರವನ್ನೂ ನೀಡಿತ್ತು.

Related Stories

No stories found.
Kannada Bar & Bench
kannada.barandbench.com