ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ಉಪಸಭಾಧ್ಯಕ್ಷರು ನೀಡಿರುವ ಅನರ್ಹತೆ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಜುಲೈ 12 ರವರೆಗೆ ಸಮಯಾವಕಾಶ ವಿಸ್ತರಿಸುವ ಮೂಲಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಗುಂಪಿಗೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ಪರಿಹಾರ ಕಲ್ಪಿಸಿದೆ.
ಅನರ್ಹತೆ ನೋಟಿಸ್‌ಗೆ ಉತ್ತರಿಸುವಂತೆ ಇಂದು ಸಂಜೆ 5.30ರವರೆಗೆ ಉಪ ಸ್ಪೀಕರ್ ನೀಡಿದ್ದ ಗಡುವನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ರಜಾಕಾಲೀನ ಪೀಠ ವಿಸ್ತರಿಸಿತು.
ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿ ಅಜಯ್ ಚೌಧರಿ ನೇಮಕವನ್ನು ಪ್ರಶ್ನಿಸಿ ಒಂದು ಅರ್ಜಿಯನ್ನು ಸಲ್ಲಿಸಲಾಗಿದ್ದರೆ ಮತ್ತೊಂದು ಅರ್ಜಿಯಲ್ಲಿ 16 ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನೀಡಿದ ಅನರ್ಹತೆ ನೋಟಿಸನ್ನು ಪ್ರಶ್ನಿಸಲಾಗಿತ್ತು.
ಅರ್ಜಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ಮತ್ತು ಸರ್ಕಾರದ ಪ್ರತಿಕ್ರಿಯೆ ಕೇಳಿರುವ ನ್ಯಾಯಾಲಯ ಪ್ರಕರಣವನ್ನು ಜುಲೈ 11ಕ್ಕೆ ಮುಂದೂಡಿದೆ. ಬಂಡಾಯ ಶಾಸಕರ ಜೀವ ಮತ್ತು ಆಸ್ತಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬ ಮಹಾರಾಷ್ಟ್ರ ಸರ್ಕಾರದ ಪರ ವಕೀಲರ ಹೇಳಿಕೆಯನ್ನು ನ್ಯಾಯಾಲಯ ಇದೇ ವೇಳೆ ದಾಖಲಿಸಿಕೊಂಡಿತು.
ಉಪಸಭಾಪತಿಯವರನ್ನೇ ಪದಚ್ಯುತಗೊಳಿಸುವಂತೆ ಶಾಸಕರು ನೋಟಿಸ್ ನೀಡಿರುವಾಗ, ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಕುರಿತು ಉಪಸಭಾಪತಿ ತೀರ್ಮಾನಿಸಬಹುದೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಶ್ನೆ ಎಂದು ಪೀಠ ವಿಚಾರಣೆ ವೇಳೆ ಪ್ರಸ್ತಾಪಿಸಿತು.
15 ಬಂಡಾಯ ಶಾಸಕರ ಪರವಾಗಿ ನೀರಜ್ ಕಿಶನ್ ಕೌಲ್, ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಅಜಯ್ ಚೌಧರಿ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ, ಉಪ ಸ್ಪೀಕರ್ ಪರವಾಗಿ ರಾಜೀವ್ ಧವನ್, ಮಹಾರಾಷ್ಟ್ರ ಸರ್ಕಾರದ ಪರವಾಗಿ ದೇವದತ್ ಕಾಮತ್ ವಾದ ಮಂಡಿಸಿದರು.