Maharashtra Mantralaya 
ಸುದ್ದಿಗಳು

ಎಸ್‌ಇಬಿಸಿ ಕಾಯಿದೆಗೆ ತಡೆ: ಅರ್ಹ ಮರಾಠರಿಗೆ ಇಡಬ್ಲ್ಯುಎಸ್‌ ಮೀಸಲಾತಿಯನ್ನು ಮುಕ್ತಗೊಳಿಸಿದ ಮಹಾರಾಷ್ಟ್ರ ಸರ್ಕಾರ

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗದಡಿ ಬರುವ ಮರಾಠಾ ವ್ಯಕ್ತಿಗಳು ಆರ್ಥಿಕವಾಗಿ ಹಿಂದುಳಿದಿರುವ ವರ್ಗದ (ಇಡಬ್ಲ್ಯುಎಸ್‌) ವ್ಯಾಪ್ತಿಗೆ ಬಂದರೆ ಆ ಮೀಸಲಾತಿಯ ಲಾಭ ಪಡೆಯಲು ಮಹಾರಾಷ್ಟ್ರ ಸರ್ಕಾರವು ನಿರ್ಣಯ ಕೈಗೊಂಡಿದೆ.

Bar & Bench

ಮರಾಠಾ ಸಮುದಾಯವೂ ಸೇರಿದಂತೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದಡಿ (ಎಸ್‌ಇಬಿಸಿ) ಗುರುತಿಸಲ್ಪಟ್ಟಿರುವವರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲುಎಸ್‌) ನೀಡಿರುವ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರು ಎಂದು ಬುಧವಾರ ಮಹಾರಾಷ್ಟ್ರ ಸರ್ಕಾರ ನಿರ್ಣಯ ಕೈಗೊಂಡಿದೆ.

ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟವು ಈ ನಿಲುವಳಿಗೆ ಒಪ್ಪಿಗೆ ನೀಡಿದ್ದು, ಇಡಬ್ಲುಎಸ್‌ಗೆ ನಿಗದಿಪಡಿಸಿರುವ ಆದಾಯ ಮಿತಿಯೊಳಗೆ ಬರುವ ಮರಾಠಾ ಸಮುದಾಯದವರಿಗೆ (ಎಸ್‌ಇಬಿಸಿಯಲ್ಲಿ ಬರುವವರು) ರಾಜ್ಯದ ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ ಎಂದು ಹೇಳಿದೆ.

ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಎಸ್‌ಇಬಿಸಿಯ ಇತರೆ ಅಭ್ಯರ್ಥಿಗಳ ಆದಾಯದ ಹಿನ್ನೆಲೆ ಪರಿಶೀಲಿಸುವಂತೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಆ ಮೂಲಕ ಇಡಬ್ಲುಎಸ್‌ ಸರ್ಟಿಫಿಕೇಟ್‌ ನೀಡುವ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಿದೆ.

ಈ ಹಿಂದೆ, ಎಸ್‌ಇಬಿಸಿ ಎಂದು ವಿಭಾಗಿಸಲಾದ ಮತ್ತು ಎಸ್‌ಇಬಿಸಿ ವಿಭಾಗಕ್ಕೆ ವಿಸ್ತರಿಸಲಾದ ಲಾಭಗಳನ್ನು ಪಡೆದಿರುವವರನ್ನು ಇಡಬ್ಲ್ಯು ಎಸ್‌ ಕೋಟಾದ ಲಾಭ ಪಡೆಯದಂತೆ ತಡೆಯಲಾಗಿದೆ. ಎಸ್‌ಇಬಿಸಿಗಳಿಗೆ ಮೀಸಲಾತಿ ವಿಸ್ತರಿಸುವ ಸಂಬಂಧ ಜಾರಿಗೊಳಿಸಲಾದ ಕಾನೂನಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿಲುವು ಬದಲಿಸಿದೆ.

ಎಸ್‌ಇಬಿಎಸ್‌ ವಿಭಾಗದ ಮೂಲಕ ಮರಾಠಾ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಮಹಾರಾಷ್ಟ್ರ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಮೀಸಲಾತಿ (ಎಸ್‌ಇಬಿಸಿ) ಕಾಯಿದೆ ಜಾರಿಗೊಳಿಸಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಎಸ್‌ಇಬಿಸಿ ಕಾಯಿದೆ ಜಾರಿಗೆ ತಡೆ ನೀಡಿದ್ದು, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಒಟ್ಟು ಮೀಸಲಾತಿಗೆ ಇರುವ ಶೇ.50 ಮಿತಿಯನ್ನು ಮೀರುವುದರಿಂದ ಇದು ಅಸಾಂವಿಧಾನಿಕವಾಗುತ್ತದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತ್ತು.