Eknath Shinde, Uddhav Thackeray, Maharashtra politics 
ಸುದ್ದಿಗಳು

ಮಹಾರಾಷ್ಟ್ರ ರಾಜಕಾರಣ: ರಾಜೀನಾಮೆ ನೀಡಿದ ಮುಖ್ಯಮಂತ್ರಿಯನ್ನು ಪುನರ್‌ ನೇಮಕ ಮಾಡಬಹುದೇ ಎಂದು ಪ್ರಶ್ನಿಸಿದ ಸುಪ್ರೀಂ

ವಿಶ್ವಾಸಮತ ಯಾಚಿಸದೇ ರಾಜೀನಾಮೆ ನೀಡಿದ ಮುಖ್ಯಮಂತ್ರಿಯನ್ನು ನ್ಯಾಯಾಲಯವು ಪುನರ್‌ ನೇಮಕ ಮಾಡಬಹುದೇ ಎಂದು ಉದ್ಧವ್‌ ಠಾಕ್ರೆ ಬಣದ ವಕೀಲರನ್ನು ಸಿಜೆಐ ಡಿ ವೈ ಚಂದ್ರಚೂಡ್‌ ನೇತೃತ್ವದ ಸಾಂವಿಧಾನಿಕ ಪೀಠವು ಪ್ರಶ್ನಿಸಿತು.

Bar & Bench

ಮಹಾರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಏಕನಾಥ್‌ ಶಿಂಧೆ ಮತ್ತು ಉದ್ಧವ್‌ ಠಾಕ್ರೆ ಬಣದ ಕುರಿತಾದ ಪ್ರಕರಣದ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ [ಸುಭಾಷ್‌ ದೇಸಾಯಿ ವರ್ಸಸ್‌ ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ರಾಜ್ಯಪಾಲರು ಮತ್ತು ಇತರರು].

ವಿಶ್ವಾಸಮತ ಯಾಚಿಸದೇ ರಾಜೀನಾಮೆ ನೀಡಿದ ಮುಖ್ಯಮಂತ್ರಿಯನ್ನು ನ್ಯಾಯಾಲಯವು ಪುನರ್‌ ನೇಮಕ ಮಾಡಬಹುದೇ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಂ ಆರ್‌ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ಸಾಂವಿಧಾನಿಕ ಪೀಠವು ಪ್ರಶ್ನಿಸಿತು.

ವಿಶ್ವಾಸಮತ ಯಾಚಿಸಲು ಆಹ್ವಾನಿಸುವ ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿದಂತೆ ಪೀಠವು ತನ್ನ ಪ್ರಶ್ನೆಗಳನ್ನು ಮುಂದುವರಿಸಿತು. ಹಿಂದಿನ ದಿನ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದ ನ್ಯಾಯಾಲಯವು ಗುರುವಾರ ಅದೇ ಪ್ರಶ್ನೆಗಳನ್ನು ಠಾಕ್ರೆ ಬಣಕ್ಕೆ ಹಾಕಿತು.

“ರಾಜ್ಯಪಾಲರು ಚಲಾಯಿಸಿರುವ ಅಧಿಕಾರ ಸರಿಯಲ್ಲ ಎಂಬ ತೀರ್ಮಾನಕ್ಕೆ ನಾವು ಬಂದು ಅದನ್ನು ಹೇಳಿದರೆ ಏನಾಗಬಹುದು? ಆಗ ಉದ್ಧವ್‌ ಠಾಕ್ರೆ ಮತ್ತೆ ಸಿಎಂ ಆಗಬಹುದೇ? ಆದರೆ ಅವರು ರಾಜೀನಾಮೆ ನೀಡಿದ್ದಾರಲ್ಲವೇ? ಇದು ಒಂದು ರೀತಿಯಲ್ಲಿ ರಾಜೀನಾಮೆ ನೀಡಿರುವ ಸರ್ಕಾರವನ್ನು ಪುನರ್‌ ಸ್ಥಾಪಿಸುವಂತೆ ಮಾಡಿರುವಕೋರಿಕೆ” ಎಂದಿತು.

ನ್ಯಾ. ಶಾ ಅವರು “ವಿಶ್ವಾಸ ಮತವನ್ನೇ ಯಾಚಿಸಿದ ಮುಖ್ಯಮಂತ್ರಿಯನ್ನು ಪುನರ್‌ ನೇಮಕ ಮಾಡಬಹುದೇ?” ಎಂದರು.

ಇದಕ್ಕೆ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಯಥಾಸ್ಥಿತಿ ಪುನರ್‌ ಸ್ಥಾಪಿಸಬೇಕು ಎಂದರು.

ಆಗ ಸಿಜೆಐ ಚಂದ್ರಚೂಡ್‌ ಅವರು “ನೀವು (ಉದ್ಧವ್‌ ಠಾಕ್ರೆ) ವಿಶ್ವಾಸಮತವನ್ನು ಯಾಚಿಸಬೇಕಿತ್ತು. ಆ ಬಳಿಕ ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸೂಚಿಸಬಾರದಿತ್ತು, ಸೂಚಿಸಿದ ಕಾರಣಕ್ಕೆ ಸೋತೆವು ಎಂದಿದ್ದರೆ ಸರಿಯಾಗುತ್ತಿತ್ತು. ಇಲ್ಲಿ ವಿಶ್ವಾಸಮತ ಯಾಚಿಸದ ಕಾರಣಕ್ಕೆ ಇದು ಬೌದ್ಧಿಕ ಜಟಿಲತೆಯ ಸಮಸ್ಯೆಯಾಗಿದೆ” ಎಂದರು.

2022ರಲ್ಲಿ ಶಿವಸೇನೆಯು ಇಬ್ಭಾಗವಾಗಿ ಉದ್ಧವ್‌ ಠಾಕ್ರೆ ಮತ್ತು ಏಕನಾಥ್‌ ಶಿಂಧೆ ಬಣವಾಗಿ ಪರಿವರ್ತನೆಯಾಗಿದ್ದು, ಶಿಂಧೆ ಬಣವು ಠಾಕ್ರೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದೆ. ಈ ಬಣ ಕಿತ್ತಾಟವು ನ್ಯಾಯಾಲಯದ ಮುಟ್ಟಿಲೇರಿದೆ. ಅದೇ ಪ್ರಕರಣದ ತಿರುಳು.