Eknath Shinde, Uddhav Thackeray and Shiv Sena party  
ಸುದ್ದಿಗಳು

ಮಹಾರಾಷ್ಟ್ರ ರಾಜಕೀಯ: ನಬಮ್ ರೆಬಿಯಾ ಪ್ರಕರಣ ತೀರ್ಪು ಮರುಪರಿಶೀಲನೆ ಅಗತ್ಯತೆ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂ

ನಬಮ್ ರೆಬಿಯಾ ಪ್ರಕರಣದ ತೀರ್ಪ ಮರುಪರಿಶೀಲನೆಯ ಅಗತ್ಯವಿದೆಯೇ ಎಂಬುದರ ಕುರಿತು ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ತೀರ್ಪು ಕಾಯ್ದಿರಿಸಿತು.

Bar & Bench

ಕಳೆದ ವರ್ಷ ಉಂಟಾಗಿದ್ದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಪ ಸ್ಪೀಕರ್‌ಗೆ ಇರುವ ಅಧಿಕಾರಕ್ಕೆ ಸಂಬಂಧಿಸಿದಂತೆ 2016ರ ನಬಮ್‌ ರೆಬಿಯಾ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ವಿಸ್ತೃತ ಪೀಠಕ್ಕೆ ಉಲ್ಲೇಖಿಸಬೇಕೆ ಎಂಬ ಕುರಿತು ಸುಪ್ರೀಂ ಕೋರ್ಟ್‌ ಗುರುವಾರ ಆದೇಶ ಕಾಯ್ದಿರಿಸಿದೆ [ಸುಭಾಷ್ ದೇಸಾಯಿ ಮತ್ತು ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರದ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ನಬಮ್ ರೆಬಿಯಾ ಪ್ರಕರಣದ ತೀರ್ಪನ್ನು  ಮರುಪರಿಶೀಲನೆ ಮಾಡುವ ಅಗತ್ಯವಿದೆಯೇ ಎಂಬ ಕುರಿತಾದ ವಾದಗಳನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್‌ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ತೀರ್ಪು ಕಾಯ್ದಿರಿಸುವ ಮುನ್ನ ಆಲಿಸಿತು.

“ನಬಮ್‌ ರೆಬಿಯಾ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಮಾತ್ರ ವಾದ ಆಲಿಸಲಾಯಿತು. ಆದೇಶಗಳನ್ನು ಕಾಯ್ದಿರಿಸಲಾಗಿದೆ" ಎಂದು ಇಂದಿನ ವಿಚಾರಣೆ ವೇಳೆ ನ್ಯಾಯಾಲಯ ತಿಳಿಸಿತು.

ಶಿವಸೇನೆಯ ಉದ್ಧವ್‌ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಬಣಗಳು ಹೂಡಿದ್ದ ಪ್ರಕರಣಕ್ಕೆ ನಬಮ್‌ ರೆಬಿಯಾ ಪ್ರಕರಣದ ತೀರ್ಪು ಅನ್ವಯಿಸಲಿದೆಯೇ ಎಂಬುದು ಪರಿಗಣಿಸಬೇಕಾದ ಅಂಶ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ತಿಳಿಸಿದರು.

“ನಮ್ಮ ಪ್ರಕಾರ ರಾಜಕೀಯ ಅನಿವಾರ್ಯತೆಯಿಂದಾಗಿಯೋ ಏನೋ ಸ್ಪೀಕರ್‌ ಸ್ವತಃ ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ.  27ರವರೆಗೆ (ವಿಶ್ವಾಸ ಮತ ಯಾಚನೆಗೆ) ಸಮಯ ನೀಡಲಾಗಿದ್ದು ಜುಲೈ 12ರವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಅವರು 25ರಂದು ತಿಳಿಸಿದ್ದರು. ಸಮಯ ವಿಸ್ತರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಹಾಗಾಗಿ ವಿಶ್ವಾಸಮತ ಯಾಚಿಸಿದ್ದರೆ ಪಕ್ಷ ಏನಾಗುತ್ತಿತ್ತು ಎಂಬುದು ಪರಿಶೀಲನೆಗೆ ಒಳಪಡಲೇ ಇಲ್ಲ. ಮುಖ್ಯಮಂತ್ರಿ (ಉದ್ಧವ್‌) ಅವರ ರಾಜೀನಾಮೆಯಿಂದಾಗಿ ವಿಶ್ವಾಸ ಮತ ಯಾಚನೆ ನಡೆಯಲಿಲ್ಲ. ಆದ್ದರಿಂದ ಮತದಾನದ ಮಾದರಿ ಬಹಿರಂಗವಾಗಲಿಲ್ಲ.. ಹಾಗೆಯೇ  (ಈ ಪ್ರಕರಣಕ್ಕೆ ಸಂಬಂಧಿಸಿದಂತೆ) ನಬಮ್ ರೆಬಿಯಾ ಪ್ರಕರಣದಲ್ಲಿ ನೀಡಲಾದ ತೀರ್ಪು ಕೂಡ ಉದ್ಭವಿಸುತ್ತದೆಯೇ? .. ಸಹಜವಾಗಿ, ಇದೊಂದು ಆಸಕ್ತಿದಾಯಕ ಪ್ರತಿಪಾದನೆ ... ಆದರೆ ನ್ಯಾಯಾಲಯ ವಾಸ್ತವಾಂಶ ಇಲ್ಲದೆ ಈ ವಲಯ ಪ್ರವೇಶಿಸಬಹುದೇ? ... ಸ್ಪೀಕರ್ ಅವರ ನಿರ್ಣಯವನ್ನು ಸದನದಲ್ಲಿ ಪರೀಕ್ಷಿಸಲಾಗಿಲ್ಲ ಮತ್ತು ಮತದಾನದ ಮಾದರಿ ತಿಳಿದುಬಂದಿಲ್ಲ”ಎಂದು ಅವರು ಮೌಖಿಕವಾಗಿ ತಿಳಿಸಿದರು.

ಪ್ರಕರಣದಲ್ಲಿ ಎದ್ದ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯ, (ಪಕ್ಷಾಂತರದ ಬಗ್ಗೆ ವ್ಯವಹರಿಸುವ) ಸಂವಿಧಾನದ 10ನೇ ಶೆಡ್ಯೂಲ್‌ಅನ್ನು ರಾಜಕೀಯ ಸಂಸ್ಥೆಗಳು ಅಂತರ್ಗತಗೊಳಿಸಿಕೊಂಡಿವೆ. ಇದು ಚದುರಂಗದಾಟದಂತಿದ್ದು ಮುಂದಿನ ಹೆಜ್ಜೆ ಏನೆಂದು ಎಲ್ಲರಿಗೂ ತಿಳಿದಿದೆ” ಎಂದಿತು. |

ಬಿಜೆಪಿ ಹಾಗೂ ಕೆಲ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮಹೇಶ್ ಜೇಠ್ಮಲಾನಿ, ಮಣಿಂದರ್ ಸಿಂಗ್ ಮತ್ತು ಸಿದ್ಧಾರ್ಥ್ ಭಟ್ನಾಗರ್ ಅವರು ನಬಮ್ ರೆಬಿಯಾ ತೀರ್ಪಿನ ಸೂಕ್ತತೆಯನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ವಾದಿಸಿದರು.

ಸರ್ಕಾರಗಳನ್ನು ಉರುಳಿಸಲು ದುರುಪಯೋಗಪಡಿಸಿಕೊಳ್ಳದ ರೀತಿಯಲ್ಲಿ ಸಂವಿಧಾನದ 10ನೇ ಶೆಡ್ಯೂಲನ್ನು ವ್ಯಾಖ್ಯಾನಿಸಬೇಕು ಎಂದು ಉದ್ಧವ್‌ ಬಣದ ಪರ ವಾದ ಮಂಡಿಸಿದ ಕಪಿಲ್‌ ಸಿಬಲ್‌ ಕೋರಿದರು. ಈ ವಿವಾದಕ್ಕೆ ಸಂಬಂಧಿಸಿದಂತೆ, ಅವರು ಕಳೆದ ವರ್ಷ ಗೋವಾದಲ್ಲಿ ನಡೆದ ರಾಜಕೀಯ ಪಕ್ಷಾಂತರ ಘಟನೆಗಳನ್ನೂ ಪ್ರಸ್ತಾಪಿಸಿದರು.

ಮಹಾ ವಿಕಾಸ್ ಅಘಾಡಿಯ ಪರ ವಾದ ಮಂಡಿಸಿದ  ಎಎಂ ಸಿಂಘ್ವಿ ಅವರು ನಬಮ್ ರೆಬಿಯಾ ಪ್ರಕರಣವನ್ನು ಪ್ರಸ್ತುತ ಪ್ರಕರಣದಿಂದ ನ್ಯಾಯಾಲಯವು ಪ್ರತ್ಯೇಕಿಸಬಾರದು ಎಂದರು.